Advertisement

ಸಂಭ್ರಮದ ನಡುವೆ ಸುರಕ್ಷತೆ ಮರೀಬೇಡಿ

10:18 AM Oct 22, 2019 | Team Udayavani |

ಬೆಂಗಳೂರು: ಜನರಲ್ಲಿ ಪಟಾಕಿ ಹೊಡೆಯುವ ಮನಸ್ಥಿತಿ ಕಡಿಮೆಯಾಗುತ್ತಿದೆ ಎಂದಾದರೂ ಪಟಾಕಿಯಿಂದ ಹಾನಿಗಳು ಮಾತ್ರ ರಾಜಧಾನಿಯಲ್ಲಿ ಹೆಚ್ಚಳವಾಗುತ್ತಲೇ ಇವೆ.

Advertisement

ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳ ಅಂಕಿ ಅಂಶದ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಂಡವರ ಪ್ರಮಾಣ ಶೇ.20ರಷ್ಟು ಹೆಚ್ಚಾಗಿದೆ. ಈ ಪೈಕಿ ಚಿಕ್ಕ ಪುಟ್ಟ ಹಾನಿಗಳೇ ಹೆಚ್ಚಿದ್ದು, ತೀವ್ರವಾಗಿ ಹಾನಿ ಮಾಡಿಕೊಳ್ಳುತ್ತಿರುವವರ ಪ್ರಮಾಣ ಕಡಿಮೆ ಇದೆ. ಕಳೆದ ಐದು ವರ್ಷಗಳಿಂದ ಸರಾಸರಿ 100 ಮಂದಿ ಪ್ರತಿ ವರ್ಷ ಪಟಾಕಿ ಹಾನಿಗೊಳ ಗಾಗುತ್ತಿದ್ದಾರೆ. ಈ ಪೈಕಿ ಶೇ.10 ಮಂದಿ ಕಣ್ಣಿಗೆ ತೀವ್ರ ಹಾನಿಯಾಗುತ್ತಿದ್ದು, ಕನಿಷ್ಠ ಮೂರ್‍ನಾಲ್ಕು ಮಂದಿ ಶಾಶ್ವತ ಅಂಧರಾಗುತ್ತಿದ್ದಾರೆ.

ಜಾಗೃತಿ ಕಾರ್ಯಕ್ರಮಗಳಿಂದ ಪಟಾಕಿ ಹೊಡೆಯುವ ಮನಸ್ಥಿತಿ ಕಡಿಮೆಯಾಗುತ್ತಿದೆ ಎಂದು ಹೇಳಿದರೂ ಪಟಾಕಿಯಿಂದ ಆಗುತ್ತಿರುವ ಹಾನಿಗಳ ಪ್ರಮಾಣ ಮಾತ್ರ ಕಡಿಮೆಯಾಗುತ್ತಿಲ್ಲ. 2015ರಲ್ಲಿ ಪಟಾಕಿ ಹಾನಿ ಪ್ರಮಾಣ ಒಂದಷ್ಟು ಇಳಿಕೆ ಕಂಡಿತ್ತಾದರೂ ಮತ್ತೆ ಏರು ಗತಿಯಲ್ಲಿ ಸಾಗುತ್ತಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಗಾಯಕ್ಕೊಳಗಾದವರಲ್ಲಿ ಬಹುತೇಕರು ನಗರದ ಮಿಂಟೋ ಕಣ್ಣಿನ ಆಸ್ಪತ್ರೆ, ನಾರಾಯಣನೇತ್ರಾ ಲಯದಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಇವರಲ್ಲಿ ಶೇ.30 ಮಂದಿ ಒಳರೋಗಿಗಳಾಗಿ ದಾಖಲಾದರೆ, ಶೇ.70 ಮಂದಿ ಚಿಕಿತ್ಸೆ ಪಡೆದು ಮನೆಗೆ ತೆರಳುತ್ತಿದ್ದಾರೆ.

ಶೇ.40ರಷ್ಟು ತನ್ನದಲ್ಲದ ತಪ್ಪಿಂದ ಹಾನಿ  :  ಆಸ್ಪತ್ರೆಗಳ ಮಾಹಿತಿ ಪ್ರಕಾರ ಪಟಾಕಿಯಿಂದ ಹಾನಿಗೊಳಗಾದರವ ಪೈಕಿ ಶೇ.40ರಷ್ಟು ಮಂದಿ ಬೇರೆಯವರು ಹಚ್ಚಿದ ಪಟಾಕಿಯಿಂದ ಹಾನಿಗೊಳಗಾಗುತ್ತಿದ್ದಾರೆ. ರಸ್ತೆಯಲ್ಲಿ ಹಾದುಹೋಗುವಾಗ ಯಾರೋ ಹಚ್ಚಿದ ಪಟಾಕಿ ಸಿಡಿದು, ಬೈಕಲ್ಲಿ ಹೋಗುವಾಗ ಒಮ್ಮೆಗೆ ರಸ್ತೆಯಲ್ಲಿ ಪಟಾಕಿ ಸಿಡಿದು, ಮನೆ ಮುಂದೆ ನಿಂತಾಗ ಯಾರೋ ಹಚ್ಚಿದ ರಾಕೆಟ್‌ ಒಮ್ಮೆಗೆ ಬಂದು ಕಣ್ಣಿಗೆ ಬಿದ್ದು ಹಾನಿಗೊಳಗಾಗುತ್ತಿರುವ ಘಟನೆಗಳು ಸಾಮಾನ್ಯವಾಗಿ ನಡೆಯುತ್ತವೆ. ಹೀಗಾಗಿ, ತಮ್ಮದಲ್ಲದ ತಪ್ಪಿಗೆ ಇಂದಿಗೂ ಹಲವರು ನೋವನ್ನು ಅನುಭವಿಸುತ್ತಿದ್ದಾರೆ.

14 ವರ್ಷದೊಳಗಿನ ಮಕ್ಕಳೇ ಹೆಚ್ಚು :  ಹಿಂದಿನ ವರ್ಷಗಳಲ್ಲಿ ಪಟಾಕಿಯಿಂದ ಹಾನಿಗೊಳಗಾದವರಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಒಟ್ಟಾರೆ ಹಾನಿಯಾದವರಲ್ಲಿ ಶೇ.40ರಷ್ಟು ಮಕ್ಕಳಿದ್ದಾರೆ. ಅದರಲ್ಲೂ 10ರಿಂದ 14 ವರ್ಷದ ಮಕ್ಕಳು ಹೆಚ್ಚಿದ್ದಾರೆ. ಕಳೆದ ಮೂರು ವರ್ಷದಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಪಟಾಕಿ ಹಾನಿ ಚಿಕಿತ್ಸೆ ಪಡೆದ 127 ಮಂದಿಯಲ್ಲಿ 60ಕ್ಕೂ ಹೆಚ್ಚು ಮಕ್ಕಳಿದ್ದರೂ ಎನ್ನುತ್ತಾರೆ ಆಸ್ಪತ್ರೆ ವೈದ್ಯರು. ಕಳೆದ ಮೂರು ವರ್ಷದಲ್ಲಿ (2016-18) ದೀಪಾವಳಿ ಸಂದರ್ಭದಲ್ಲಿ ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಂದು ಮಿಂಟೋ ಸರ್ಕಾರಿ ಕಣ್ಣಿನ ಆಸ್ಪತ್ರೆಯಲ್ಲಿ 127 ಮಂದಿ ಹಾಗೂ ನಾರಾಯಣ ನೇತ್ರಾಲಯದಲ್ಲಿ 130 ಮಂದಿ ಚಿಕಿತ್ಸೆ ಪಡೆದಿದ್ದಾರೆ.

Advertisement

ದೀಪಾವಳಿ ಹಬ್ಬದಂದು ಯಾರೋ ಹಚ್ಚಿನ ರಾಕೆಟ್‌ ಬಂದು ನನ್ನ ಕಣ್ಣಿಗೆ ಬಡಿಯಿತು. ಮೂರು ತಿಂಗಳು ಚಿಕಿತ್ಸೆ ಪಡೆದರೂ  ಎಡಗಣ್ಣಿನ ದೃಷ್ಟಿ ಮರಳಲಿಲ್ಲ. ಯಾರೋ ಮಾಡಿದ ತಪ್ಪಿಗೆ ಇಂದಿಗೂ ಶಿಕ್ಷೆ ಅನುಭವಿಸುತ್ತಿದ್ದೇನೆ.-ಪಟಾಕಿಯಿಂದ ಹಾನಿಗೊಳಗಾದವರು, ಆಡುಗೋಡಿ ನಿವಾಸಿ

 

-ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next