ಶ್ರೀಮದ್ರಾಮಾಯಣದ ಒಂದು ಘಟನೆ. ಶ್ರೀರಾಮನಿಗೆ ಜೀವರೂಪವಾದ ಪತ್ನಿಯ ವಿಯೋಗ ಉಂಟಾಗಿದೆ. ರಾವಣಾಸುರನು ಸೀತೆಯನ್ನು ಅಪಹರಿಸಿದ್ದಾನೆ. ಸುಗ್ರೀವನ ಸಖ್ಯದಿಂದ ಸೀತಾನ್ವೇಷಣೆಯ ಮಹತ್ಕಾರ್ಯ ಸಾಧ್ಯವಾಗುತ್ತದೆ ಎಂಬುದಾಗಿ ಕಬಂಧನು ತಿಳಿಸಿರುತ್ತಾನೆ. ಇದಕ್ಕಾಗಿ ರಾಮನು ಸುಗ್ರೀವನ ಸಖ್ಯವನ್ನು ಮಾಡಲು ನಿರ್ಧರಿಸಿ ಸುಗ್ರೀವನಿದ್ದಲ್ಲಿಗೆ, ಋಷ್ಯಮೂಕಪರ್ವತಕ್ಕೆ ಬರುತ್ತಾನೆ.
ಅಲ್ಲಿನ ಸುಗ್ರೀವ ಮೊದಲಾಗಿ ವಾನರರು- ವಾಲಿಯೇ ಈ ವೇಷದಿಂದ ಬಂದಿದ್ದಾನೋ!’ ಎಂದು ಭೀತರಾಗುತ್ತಾರೆ. ಆಗ ವಿವೇಕಿಯಾದ ಹನುಮಂತನು ಸುಗ್ರೀವನಿಗೆ ಹೀಗೆ ಧೈರ್ಯದ ಮಾತನ್ನು ಆಡುತ್ತಾನೆ- “ನ ಹಿ ಅಬುದ್ಧಿಂ ಗತೋ ರಾಜಾ ಸರ್ವಭೂತಾನಿ ಶಾಸ್ತಿ ಹಿ’. ಅಂದರೆ, “ಬುದ್ಧಿ ಇಲ್ಲದ ರಾಜನು ಪ್ರಜೆಗಳನ್ನು ಪಾಲಿಸಲಾರ’.
ಯಾವುದು ನಮಗೆ “ಇದು ಹೀಗೆಯೇ’ ಎಂಬ ಅರಿವನ್ನು ಮೂಡಿಸುವುದೋ ಅದಕ್ಕೆ “ಬುದ್ಧಿ’ ಎಂದು ಕರೆಯಲಾಗುತ್ತದೆ. ಒಂದು ವಿಷಯದಲ್ಲಿ ಇಂಥ ನಿಶ್ಚಯವಾದ ಅರಿವು ಬರಬೇಕಾದರೆ ವಿವೇಕ ಇರಬೇಕಾಗುತ್ತದೆ. ಯಾವುದು ಸರಿ, ಯಾವುದು ತಪ್ಪು, ಯಾವುದು ಜೀವನಕ್ಕೆ ಹೊಂದಿಕೊಳ್ಳುವಂಥದ್ದು, ಯಾವುದು ಹೊಂದದಿರುವಂಥದ್ದು, ಕೆಟ್ಟದ್ದರಲ್ಲಿ ಅಪೇಕ್ಷೆ ಇಲ್ಲದಿರುವಿಕೆ, ಒಳ್ಳೆಯದರಲ್ಲಿ ಉಪೇಕ್ಷೆ ಇಲ್ಲದಿರುವಿಕೆ. ಇದನ್ನು “ವಿವೇಕ’ ಎನ್ನುತ್ತಾರೆ.
ಈ ವಿವೇಕದಿಂದಲೇ ಬುದ್ಧಿಗೆ ನಿಶ್ಚಯಿಸುವ ಸಾಮರ್ಥ್ಯ ಬರುತ್ತದೆ. ವಿವೇಕವು ಬುದ್ಧಿಯ ವಿಶೇಷಗುಣವಾಗಿದೆ. ವಿವೇಕವೇ ಇಲ್ಲದಿದ್ದಾಗ ಬುದ್ಧಿಗೆ ಅವಿವೇಕವೆಂಬ ಕತ್ತಲು ಆವರಿಸುತ್ತದೆ. ಅವಿವೇಕದಿಂದ, ರಾಜನಾದವನು ಪ್ರಜೆಗಳನ್ನು ಪರಿಪಾಲಿಸಲು ಅರ್ಹನಾಗನು. ರಾಜನಾದವನು ವಿವೇಕದಿಂದ ಕೂಡಿದ್ದರೆ, ಪ್ರಜೆಗಳು ನೆಮ್ಮದಿಯಿಂದ ಇರುತ್ತಾರೆ. ಪ್ರಜೆಗಳಿಗೆ ರಾಜನೇ ಆದರ್ಶನಾಗಿರುತ್ತಾನೆ. ಅವನ ಪ್ರತಿಯೊಂದು ನಡೆ- ನುಡಿಗಳೂ ಜನರಿಂದ ಅನುಸರಿಸಲ್ಪಡುತ್ತವೆ.
ಅದರಿಂದಲೇ “ನಾವಿಷ್ಣುಃ ಪೃಥಿವೀಪತಿಃ’ ಎಂಬ ಮಾತು ಬಂದಿದೆ. ವಿಷ್ಣು ಅಥವಾ ವಿಷ್ಣುವಿನ ಅಂಶ ಇಲ್ಲದವನು ರಾಜನಾಗಲಾರ. ಪ್ರಬುದ್ಧನಾದ ರಾಜನು ಮಾತ್ರ ರಾಜ್ಯವನ್ನು ಸಮೃದ್ಧವಾಗಿಸಬಲ್ಲ. “ವಿಷ್ಣು ಎಂಬ ತತ್ತವು ಹೇಗೆ ವಿಶ್ವವನ್ನು ಆಳುತ್ತಿದೆಯೋ, ಅದನ್ನು ಅನುಸರಿಸುವವನೇ ಭಾರತೀಯ
ಮನಸೊಪ್ಪುವಂಥ ಆದರ್ಶನಾದ ರಾಜನಾಗುವನು’ ಎನ್ನುವುದು ಶ್ರೀರಂಗ ಮಹಾಗುರುಗಳ ನಂಬಿಕೆಯಾಗಿತ್ತು.
* ವಿದ್ವಾನ್ ನರಸಿಂಹ ಭಟ್ ಬಡಗು, ಅಷ್ಟಾಂಗಯೋಗ ವಿಜ್ಞಾನ ಮಂದಿರಂ