ಕೋವಿಡ್-19 ಜನರನ್ನು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿಯೂ ಹೈರಾಣಾಗಿಸಿದೆ. ಈ ಸಂಕಷ್ಟದ ನಡುವೆಯೇ ಹಬ್ಬದ ಋತುವೂ ಎದುರಾಗಿದೆ. ಕಳೆದ ಎಂಟು ತಿಂಗಳಿಂದ ಕೋವಿಡ್ ಕಾರಣಕ್ಕಾಗಿ ಮಾನಸಿಕ ತುಮುಲಕ್ಕೆ ಒಳಗಾಗಿರುವ ಜನರಿಗೆ ಹಬ್ಬಗಳು ನೆಮ್ಮದಿ ತಂದುಕೊಡುತ್ತವೆ, ಅಲ್ಲದೇ ಆರ್ಥಿಕವಾಗಿಯೂ ಮಾರುಕಟ್ಟೆಗೆ ಚೇತರಿಕೆ ನೀಡುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.
ಈ ಬಾರಿ ಜನರು ಹಿಂದೆಂದೂ ಕಾಣದಂಥ ಪಲ್ಲಟವನ್ನು ಎದುರಿಸಿದ್ದಾರೆ. ಹಿಂದೆಲ್ಲ ಆಯುಧ ಪೂಜೆ ಹಾಗೂ ವಿಜಯ ದಶಮಿ ಸಮಯದಲ್ಲಿ ಇಡೀ ರಾಜ್ಯವೇ ಕಳೆಗಟ್ಟುತ್ತಿತ್ತು, ಮಾರುಕಟ್ಟೆಗಳು ನಳನಳಿಸುತ್ತಿದ್ದವು. ಆದರೆ ಈ ಬಾರಿ ಹೂ-ಹಣ್ಣು, ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಜನ ಸಾಮಾಜಿಕ ಅಂತರ ಮರೆತು ಮುಗಿಬೀಳುತ್ತಾರೆ ಎನ್ನುವ ಕಾರಣಕ್ಕಾಗಿ ಮೈಸೂರು ಸೇರಿದಂತೆ ವಿವಿಧ ಭಾಗಗಳಲ್ಲಿನ ಸ್ಥಳೀಯಾಡಳಿತಗಳು ಮುಂಜಾಗ್ರತಾ ಕ್ರಮ ಕೈಗೊಂಡಿವೆ. ಕೆಲವೆಡೆ ಕಿಕ್ಕಿರಿಯುತ್ತಿದ್ದ ಮಾರುಕಟ್ಟೆಗಳನ್ನು ತಾತ್ಕಾಲಿಕ ಸ್ಥಳಾಂತರಿಸಲಾಗಿದೆ. ಆದರೂ, ಕೋವಿಡ್ ಅಪಾಯವನ್ನೂ ಲೆಕ್ಕಿಸದೆ ಜನ ಖರೀದಿಗಾಗಿ ಮುಗಿಬೀಳುತ್ತಿದ್ದಾರೆಂಬ ವರದಿಗಳೂ ಬರುತ್ತಿವೆ.
ಇದು ಅತ್ಯಂತ ನಿರ್ಣಾಯಕ ಸಮಯ. ಏಕೆಂದರೆ ಇತ್ತೀಚೆಗಷ್ಟೇ ಕೇಂದ್ರ ಸರಕಾರವು ಕೋವಿಡ್‌ನ ಮೊದಲ ಅಲೆಯ ಉತ್ತುಂಗ ಮುಗಿದಿದೆ ಎಂದು ಹೇಳಿದೆ. ಅಂದರೆ ಸೆಪ್ಟಂಬರ್ ತಿಂಗಳಲ್ಲಿ 97 ಸಾವಿರದ ಗಡಿ ದಾಟಿದ್ದ ನಿತ್ಯ ಪ್ರಕರಣಗಳ ಸಂಖ್ಯೆ ಕಳೆದ ಕೆಲವು ದಿನಗಳಿಂದ ಗಣನೀಯವಾಗಿ ತಗ್ಗಿದೆ. ಅಕ್ಟೋಬರ್ 22ರಂದು 55 ಸಾವಿರ ನಿತ್ಯ ಪ್ರಕರಣಗಳು ಪತ್ತೆಯಾಗಿವೆ. ಇದು ಸಮಾಧಾನದ ವಿಷಯವೇ ಆದರೂ ಎಲ್ಲಿ ಅಜಾಗರೂಕತೆಯಿಂದಾಗಿ ನಿತ್ಯ ಪ್ರಕರಣಗಳು ಮತ್ತೆ ಅಧಿಕವಾಗಿಬಿಡುತ್ತವೋ ಎನ್ನುವ ಆತಂಕವೂ ಎದುರಾಗುತ್ತಿದೆ.
ಇತ್ತೀಚೆಗಷ್ಟೇ ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್ ಅವರು ಓಣಂ ಸಂದರ್ಭದಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕೆ ಕೇರಳ ಈಗ ಬೆಲೆ ತೆರುತ್ತಿದೆ ಎಂದು ಹೇಳಿರುವುದನ್ನು ಎಲ್ಲ ರಾಜ್ಯಗಳೂ ಗಂಭೀರವಾಗಿ ಪರಿಗಣಿಸಬೇಕಿದೆ. ಇನ್ನು ಹಬ್ಬದ ಸಮಯದಲ್ಲಿ ನಾಗರಿಕರು ಎಚ್ಚರಿಕೆ ಕ್ರಮಗಳನ್ನು ಪಾಲಿಸದೇ ಇದ್ದರೆ ದೇಶದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕೊರೊನಾ ನಿಯಂತ್ರಣಕ್ಕಾಗಿ ಸರಕಾರ ರಚಿಸಿದ್ದ ತಜ್ಞರ ಸಮಿತಿಯೂ ಎಚ್ಚರಿಸಿದೆ.
ಐಐಟಿ ಹೈದ್ರಾಬಾದ್‌ನ ಪ್ರಾಧ್ಯಾಪಕ ಎಂ. ವಿದ್ಯಾಸಾಗರ್ ನೇತೃತ್ವದ ಈ ಸಮಿತಿ ಈ ಹಬ್ಬದ ಋತುವಿನಲ್ಲಿ ಜನ ಸಾಮಾಜಿಕ ಅಂತರ ಪಾಲನೆ ಮಾಡದಿದ್ದರೆ ಒಂದೇ ತಿಂಗಳಲ್ಲೇ ದೇಶದಲ್ಲಿ 26 ಲಕ್ಷಕ್ಕೂ ಹೆಚ್ಚು ಸಕ್ರಿಯ ಸೋಂಕು ಪ್ರಕರಣಗಳು ದಾಖಲಾಗಬಹುದು ಎಂದು ಎಚ್ಚರಿಸಿದೆ. ನೆನಪಿಡಬೇಕಾದ ಅಂಶವೆಂದರೆ, ಕೋವಿಡ್ ಈಗ ನಗರ ಪ್ರದೇಶಗಳಿಗಷ್ಟೇ ಸೀಮಿತವಾಗಿಲ್ಲ. ಅದು ಗ್ರಾಮೀಣ ಪ್ರದೇಶಗಳಲ್ಲೂ ವೇಗವಾಗಿ ಪ್ರಸರಣಗೊಳ್ಳುತ್ತಿದೆ. ಈಗಾಗಲೇ ದೇಶದ ಕೆಲವು ಜಿಲ್ಲೆಗಳಲ್ಲಿ ಕೋವಿಡ್‌ನ ಸಾಮುದಾಯಿಕ ಪ್ರಸರಣ ಆರಂಭವಾಗಿದೆ ಎಂದು ಇತ್ತೀಚೆಗಷ್ಟೇ ಕೇಂದ್ರ ಸರಕಾರ ಹೇಳಿದೆ. ಒಂದು ಪ್ರದೇಶದಲ್ಲಿ ರೋಗ ಸಾಮುದಾಯಿಕ ಪ್ರಸರಣ ಹಂತ ತಲುಪಿತೆಂದರೆ, ತಡೆಯುವುದು ಬಹುದೊಡ್ಡ ಸವಾಲಾಗಿ ಬಿಡುತ್ತದೆ. ಈ ಕಾರಣಕ್ಕಾಗಿಯೇ, ಪ್ರತಿಯೊಬ್ಬರೂ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವಿಕೆ, ಜನಜಂಗುಳಿ ಸೃಷ್ಟಿಯಾಗುವುದನ್ನು ತಪ್ಪಿಸುವುದು ಹಾಗೂ ಕೈಗಳನ್ನು ನಿಯಮಿತವಾಗಿ ಸ್ವತ್ಛಗೊಳಿಸುವಂಥ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸೋಣ. ಸುರಕ್ಷತೆಯಿಂದ ಹಬ್ಬವನ್ನು ಆಚರಿಸೋಣ.