Advertisement

ಪೂರ್ಣಗೊಂಡ ಚುನಾವಣಾ ಸಿದ್ಧತೆಗಳ ನಡುವೆ …

06:30 AM May 08, 2018 | Team Udayavani |

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಗೆ (ಮೇ 12) ಸರ್ವ ಸಿದ್ಧತೆ ವಸ್ತುಶಃ ಸಂಪೂರ್ಣಗೊಂಡಿದೆ. ದ.ಕ. ಮತ್ತು ಉಡುಪಿ ಜಿಲ್ಲಾಡಳಿತಗಳು ಚುನಾವಣಾ ಕರ್ತವ್ಯವನ್ನು ಪಾರದರ್ಶಕವಾಗಿ ನಿರ್ವಹಿಸುತ್ತಾ ಮತದಾರರಿಗೆ ಸಮಗ್ರ ಮಾಹಿತಿಗಳನ್ನು ಕಾಲಕಾಲಕ್ಕೆ ನೀಡುತ್ತಾ ಬಂದಿದ್ದಾರೆ ಎಂಬುದು ಶ್ಲಾಘನೀಯ.

Advertisement

ಉಭಯ ಜಿಲ್ಲೆಗಳ ಸ್ಪರ್ಧಾಕಣವೂ ಅಂತಿಮ ಸ್ವರೂಪ ಪಡಕೊಂಡಿದೆ. ದ.ಕ.ದ 8 ಮತ್ತು ಉಡುಪಿ ಜಿಲ್ಲೆ 5 ಕ್ಷೇತ್ರಗಳಲ್ಲೆಲ್ಲ ಕಾಂಗ್ರೆಸ್‌, ಬಿಜೆಪಿಯ ನಡುವೆ ನೇರ ಸ್ಪರ್ಧೆ ಎಂದು ಮೇಲ್ನೋಟದ ತೀರ್ಮಾನಕ್ಕೆ ಬರಬಹುದಾಗಿದೆ. ಕಾಂಗ್ರೆಸ್‌- ಬಿಜೆಪಿ ಅಭ್ಯರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಜೆಡಿಎಸ್‌, ಸಿಪಿಐಎಂ, ಬಿಎಸ್‌ಪಿ, ಅ.ಭಾ. ಹಿಂದೂ ಮಹಾಸಭಾ, ಲೋಕ್‌ ಆವಾಜ್‌ ದಳ, ಜನತಾ ಪಾರ್ಟಿ, ಪರಿವರ್ತನಾ ಪಾರ್ಟಿ, ಜೆಡಿಯು, ರಿಪಬ್ಲಿಕನ್‌ ಪಾರ್ಟಿ, ಶಿವಸೇನೆ, ಆರ್‌ಪಿಐ ಪಕ್ಷಗಳ ಅಭ್ಯರ್ಥಿಗಳಿಂದ ಸ್ಪರ್ಧೆ ಇದೆ. ವಿಶೇಷವೆಂದರೆ ಈ ಬಾರಿ ಮಹಿಳಾ ಎಂಪವರ್‌ವೆುಂಟ್‌ ಪಾರ್ಟಿಯ (ಎಂಇಪಿ) ಸ್ಪರ್ಧೆ. ಈ ಪಕ್ಷದ ಅಭ್ಯರ್ಥಿಗಳು ಮಂಗಳೂರು, ಬೆಳ್ತಂಗಡಿ, ಮಂ. ದಕ್ಷಿಣ, ಬಂಟ್ವಾಳ, ಮಂ. ಉತ್ತರ, ಪುತ್ತೂರು, ಮೂಡಬಿದಿರೆ, ಉಡುಪಿ, ಬೈಂದೂರು, ಕಾರ್ಕಳ, ಕಾಪು ಅಂದರೆ 11 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ರಾಜ್ಯಮಟ್ಟದಲ್ಲಿ ದೊಡ್ಡ ಸ್ವರೂಪದಲ್ಲಿ ಆ ಪಕ್ಷ ಪ್ರಚಾರ ನಿರತವಾಗಿದ್ದು ಜಿಲ್ಲೆಯಲ್ಲಿ 11 ಸ್ಪರ್ಧಿಗಳಲ್ಲಿ ಮಹಿಳೆ ಓರ್ವರು!

ವಿಶೇಷವೆಂದರೆ, ಮೇ 12ರಂದು ಕರ್ನಾಟಕದ 15ನೇ ವಿಧಾನಸಭಾ ಚುನಾವಣೆಯಲ್ಲಿ ಅವಿಭಜಿತ ಜಿಲ್ಲೆಯ 92 ಅಭ್ಯರ್ಥಿಗಳ ಪೈಕಿ 26 ಮಂದಿ ಪಕ್ಷೇತರರು. ಆ ಪೈಕಿ ಗರಿಷ್ಠ 5 ಮಂದಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿದ್ದಾರೆ. ಮಂಗಳೂರು, ಕುಂದಾಪುರ, ಕಾಪು ಕ್ಷೇತ್ರಗಳಲ್ಲಿ ಪಕ್ಷೇತರ ಸ್ಪರ್ಧಿಗಳಿಲ್ಲ. ಇಬ್ಬರು ಮಹಿಳೆಯರು (ಓರ್ವರು ಎರಡು ಕ್ಷೇತ್ರಗಳಲ್ಲಿ) ಪಕ್ಷಾತೀತರಾಗಿ ಕಣದಲ್ಲಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿದ್ದು ಈಗ ರಾಜಿನಾಮೆ ನೀಡಿ ಅನುಪಮಾ ಶೆಣೈ (ಜನಶಕ್ತಿ ಕಾಂಗ್ರೆಸ್‌) ಕಾಪುವಿನಿಂದ, ಮದನ್‌ ಎಂ. ಸಿ. (ಪಕ್ಷೇತರ) ಮಂಗಳೂರು ದಕ್ಷಿಣದಿಂದ ಸ್ಪರ್ಧೆಯಲ್ಲಿದ್ದಾರೆ.ದ.ಕ.ದಿಂದ 9, ಉಡುಪಿಯಿಂದ 5 ಮಂದಿ ಈ ಬಾರಿ ನಾಮಪತ್ರ (ಎ. 27) ಹಿಂದೆ ಪಡೆದುಕೊಂಡರು. ಆ ಬಳಿಕ, ಈವರೆಗೆ ಯಾವ ಅಭ್ಯರ್ಥಿಗಳೂ ಸ್ಪರ್ಧಾಕಣದಿಂದ ನಿವೃತ್ತಿ ಘೋಷಿಸಿಲ್ಲ.

ಅಂದಹಾಗೆ…
ಕಾಂಗ್ರೆಸ್‌ ಅಭ್ಯರ್ಥಿ ಮನೆಗೆ ಬಂದಾಗ ಆ ಮತದಾರ ನನ್ನದು ನಿಮಗೇ ಮತ ಅನ್ನುತ್ತಾರೆ. ಬಿಜೆಪಿ ಅಭ್ಯರ್ಥಿ ಬಂದಾಗಲೂ ಜೆಡಿಎಸ್‌ ಅಭ್ಯರ್ಥಿ ಬಂದಾಗಲೂ “ನನ್ನದು ನಿಮಗೇ ಮತ- ನೀವು ಹೇಳಿದ್ದು ಸರಿ’ ಎನ್ನುತ್ತಾನೆ. ಆಶ್ಚರ್ಯಗೊಂಡ ಆತನ ಪತ್ನಿ ಒಂದು ಓಟನ್ನು ಮೂವರಿಗೆ ಕೊಡಲು ಸಾಧ್ಯವೇ? ಅಂತ ಪ್ರಶ್ನಿಸುತ್ತಾಳೆ. ನಿರ್ಲಿಪ್ತವಾಗಿ ಆ ಮತದಾರ ಉತ್ತರಿಸುತ್ತಾನೆ- ನೀನು ಹೇಳಿದ್ದೂ ಸರಿ!

– ಮನೋಹರ ಪ್ರಸಾದ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next