ಈ ದಿನ ಬಂತೆಂದರೆ ಸಾಕು, ನನ್ನ ಹೃದಯದ ಬಡಿತ ಹೆಚ್ಚಾಗುತ್ತದೆ. ಮನಸಿನ ಭಾವನೆಗಳನ್ನ ಕನಸಲ್ಲಿ ಕನವರಿಸುತ್ತೇನೆ. ಕಾರಣ ಇಂದು ನನ್ನ ಜೀವಾಳವಾಗಿದ್ದ ನಿನ್ನ ಜನ್ಮದಿನ. ಹುಚ್ಚು ಮನಸ್ಸಿನ ಹುಡುಗಿಗೆ ಜನ್ಮದಿನದ ಶುಭಾಶಯಗಳು. ನನ್ನನ್ನು ಕ್ಷಮಿಸು. ನೀನು ನನ್ನನ್ನು ಅಗಲಿ ಹೋಗಿದ್ದರೂ ಪ್ರೀತಿಯ ಕನಸಿನ ಗೋಪುರ ಕಟ್ಟಿ ಈ ಪ್ರೇಮ ಪತ್ರ ಬರೆಯುತ್ತಿದ್ದೇನೆ. ನೀನು ನನ್ನ ಜೊತೆಗಿದ್ದಾಗ ಯಾವಾಗಲೂ ನಿನ್ನ ಹುಟ್ಟುಹಬ್ಬಕ್ಕೆ ಮೊದಲ ಶುಭಾಶಯ ನನ್ನದೇ ಆಗಿರುತ್ತಿತ್ತಲ್ಲವೆ? ಆದರೆ, ಈಗ ಇನ್ಯಾರಧ್ದೋ?! ನೀನು ನನ್ನನ್ನು ಬಿಟ್ಟು ಹೋದೆ ಎಂದು ನನಗೇನೂ ಬೇಜಾರಿಲ್ಲ ಕಣೇ. ನೀನು ಎಲ್ಲೇ ಇದ್ದರೂ ಸಂತೋಷದಿಂದ ಇದ್ದರೆ ಸಾಕು.
ನನ್ನ ಪೆದ್ದು ಹೃದಯ ಬಯಸುವುದು ಅಷ್ಟನ್ನೇ. ಬಿಟ್ಟು ಹೋದ ಮೇಲೆ ನನ್ನ ನೆನಪು ಒಮ್ಮೆಯೂ ಕಾಡಲಿಲ್ಲವೆ? ಪರವಾಗಿಲ್ಲ, ಯಾವುದೋ ಕಾರಣದಿಂದ ನನ್ನ ನೆನಪಾಗಿರಲಾರದು ನಿನಗೆ. ಆದರೆ, ನನ್ನ ಹೃದಯದ ದೇವತೆಯಾದ ನಿನ್ನ ಜಪವಂತೂ ಈ ಪುಟ್ಟ ಹೃದಯದಲ್ಲಿ ನಿತ್ಯದ ಪೂಜೆಯಾಗಿದೆ.
ನನ್ನೊಡನೆ ಕಳೆದ ದಿನಗಳಲ್ಲಿ ಪ್ರತಿ ನಿಮಿಷವೂ ನಿನಗೆ ನೋವು ಕೊಟ್ಟಿದ್ದೇನೆ. ಪ್ರತಿ ದಿನ, ಪ್ರತಿ ಕ್ಷಣ, ಏನಾದರೊಂದು ನೋವು ಕೊಡುತ್ತಾ ನಿನ್ನ ಅಳಿಸುವುದರಲ್ಲೇ ಕಾಲ ಕಳೆದ ದಡ್ಡ ಕಣೇ ನಾನು. ಒಮ್ಮೆ ಗೆಳತಿಯ ಮುಂದೆ ನೀನು ನೋವು ತೋಡಿಕೊಂಡು ಬಿಕ್ಕಳಿಸಿ ಅತ್ತಿದ್ದು ನೋಡಿದಾಗಲೇ ಗೊತ್ತಾಗಿದ್ದು ನಿನ್ನ ನೈಜ ಬದುಕಿನ ಹಿಂದಿನ ಕಷ್ಟ. ನಾನು ನಿನ್ನನ್ನು ಅಳಿಸುತ್ತಿದ್ದುದು ಸುಮ್ಮನೆ ತಮಾಷೆಗೇ ಹೊರತು ನೋವು ನೀಡಲು ಅಲ್ಲ. ನಿನ್ನೊಂದಿಗೆ ಸದಾಕಾಲ ಜೊತೆಗಿದ್ದು ನಿನ್ನೆಲ್ಲ ಕಷ್ಟಗಳಿಗೆ ಹೆಗಲು ಕೊಡಲು ನಾನು ಸಿದ್ಧನಿದ್ದೆ. ಆದರೆ, ನನ್ನೆದೆಯ ಹಾಡು, ಅದರಲ್ಲಿ ತುಂಬಿದ್ದ ಮಾರ್ದವತೆ ನಿನಗೆ ಕಡೆಗೂ ಅರ್ಥವಾಗಲೇ ಇಲ್ಲ.
ಈಗ ಕಾಲ ಮಿಂಚಿ ಹೋಗಿದೆ. ನಿನ್ನ ನೆನಪಿನಲ್ಲಿ ದಿನ ಕಳೆಯಬೇಕೇ ಅಥವಾ ಎಲ್ಲವನ್ನೂ ಮರೆತು ಮುಂದೆ ಸಾಗಬೇಕೇ? ಅದನ್ನೂ ನಿನ್ನನ್ನೇ ಕೇಳುತ್ತಿರುವ ದಡ್ಡ ಶಿಖಾಮಣಿ ನಾನು. ಆಧುನೀಕರಣದ ಮಧ್ಯೆಯೂ ಹಳೆಯ ಪ್ರೇಮ ಪುರಾಣಗಳಂತೆ ನಿನಗೆ ಪತ್ರ ಬರೆದು ಉತ್ತರಕ್ಕಾಗಿ ಕಾಯುವ ನನಗೆ ಏನೆನ್ನಬೇಕು ಹೇಳು? ಹೇಳಲು ಹೆಚ್ಚೇನೂ ಉಳಿದಿಲ್ಲ. ನನ್ನಿಂದ ದೂರವಾದ ಮೇಲೆ ನೀನು ನೆಮ್ಮದಿಯಿಂದ ಬಾಳುತ್ತಿರುವೆ ಅಂದುಕೊಂಡಿದ್ದೇನೆ.
ಎನಿಹೌ, ಒನ್ಸ್ ಮೋರ್ ಹ್ಯಾಪಿ ಬರ್ತ್‌ಡೇ ಗೆಳತಿ…. ಲವ್ ಯು… ಮಿಸ್ ಯು..
ಮುದಕನಗೌಡ ಎನ್. ಪಾಟೀಲ