Advertisement

ಬೆಟ್ಟಿಂಗ್‌ ಸ್ಟೋರಿ: ಐಫೋನ್‌ನಲ್ಲಿ ಕಮರ್ಷಿಯಲ್‌ ಸಿನಿಮಾ

06:00 AM Dec 21, 2018 | |

ಕನ್ನಡದಲ್ಲಿ ತರಹೇವಾರಿ ಶೀರ್ಷಿಕೆವುಳ್ಳ ಚಿತ್ರಗಳು ಬಂದಿರುವುದು, ಬರುತ್ತಿರುವುದು ಗೊತ್ತೇ ಇದೆ. ಈಗ ಆ ಸಾಲಿಗೆ “ಈ ಪಟ್ಟಣಕ್ಕೆ ಏನಾಗಿದೆ’ ಎಂಬ ಚಿತ್ರಕೂಡ ಸೇರಿದೆ. ಈಗಾಗಲೇ ಸದ್ದಿಲ್ಲದೆಯೇ ಒಂದಷ್ಟು ಚಿತ್ರೀಕರಣವೂ ಆಗಿದೆ. ವಿಶೇಷವೆಂದರೆ, ಈ ಚಿತ್ರ ಸಂಪೂರ್ಣ ಐಫೋನ್‌ನಲ್ಲೇ ಚಿತ್ರೀಕರಣಗೊಂಡಿದೆ. ಹಾಗಂತ, ಕಲಾತ್ಮಕ ಚಿತ್ರವಂತೂ ಅಲ್ಲ, ಪಕ್ಕಾ ಕಮರ್ಷಿಯಲ್‌ ಅಂಶಗಳನ್ನಿಟ್ಟುಕೊಂಡು ಹೊಸದೊಂದು ಪ್ರಯೋಗಕ್ಕಿಳಿದಿದೆ ಚಿತ್ರತಂಡ. ಇತ್ತೀಚೆಗೆ ಚಿತ್ರದ ಸಣ್ಣ ಹಾಡಿನ ಝಲಕ್‌ ತೋರಿಸುವ ಮೂಲಕ ಮಾತುಕತೆ ನಡೆಸಿತು ಚಿತ್ರತಂಡ.

Advertisement

ಈ ಚಿತ್ರಕ್ಕೆ ರವಿ ಸುಬ್ಬುರಾವ್‌ ನಿರ್ದೇಶಕರು. ಅಷ್ಟೇ ಅಲ್ಲ, ನಾಯಕ ಕೂಡ ಆಗಿದ್ದಾರೆ. ತಮ್ಮ ಚಿತ್ರದ ಬಗ್ಗೆ ಮಾತಿಗಿಳಿದ ಅವರು, “ಇದು ಬೆಂಗಳೂರು ನಗರಕ್ಕೆ ಸಂಬಂಧಿಸಿದ ಕಥೆಯಲ್ಲ. ಎಲ್ಲೆಡೆ ಸಲ್ಲುವ ಕಥೆ. ಒಂದು ಗ್ಯಾಂಬಲಿಂಗ್‌ ಕುರಿತಾದ ಕಥೆ ಹೇಳಹೊರಟಿದ್ದೇನೆ. ಅದರಲ್ಲೂ ಕ್ರಿಕೆಟ್‌ ಬೆಟ್ಟಿಂಗ್‌ ಮೇಲೆ ಸಾಗುವ ಕಥೆ ಒಳಗೊಂಡಿದೆ. ಸಂಪೂರ್ಣ ರಾ ಫೀಲ್‌ ಜೊತೆಗೆ ಸಿನಿಮಾ ಮೂಡಿಬರಲಿದೆ. ಇಲ್ಲಿ ಕಥೆಯ ಜೊತೆಗೆ ತಾಂತ್ರಿಕವಾಗಿಯೂ ಹೊಸದೇನಾದರೂ ಮಾಡಬೇಕು ಎಂಬ ಉದ್ದೇಶದಿಂದ ಐಫೋನ್‌ ಇಟ್ಟುಕೊಂಡು ಚಿತ್ರೀಕರಣ ಮಾಡಿದ್ದೇವೆ. ಅದೊಂದು ಚಾಲೆಂಜ್‌ ಆಗಿತ್ತು. ಮೊದಲು ಟೆಸ್ಟ್‌ ಮಾಡಿ, ಆ ನಂತರ ಚಿತ್ರೀಕರಣಕ್ಕೆ ಅಣಿಯಾಗಿದ್ದೇವೆ. ಇಷ್ಟರಲ್ಲೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಅಣಿಯಾಗುತ್ತಿರುವುದಾಗಿ ಹೇಳಿಕೊಂಡರು ರವಿ ಸುಬ್ಬರಾವ್‌.

ಛಾಯಾಗ್ರಾಹಕ ಪ್ರಮೋದ್‌ ಅವರಿಗೆ ನಿರ್ದೇಶಕ ರವಿ ಸುಬ್ಬುರಾವ್‌ ಕಥೆ ಹೇಳಿದಾಗ, ಖುಷಿಗೊಂಡರಂತೆ. ಆದರೆ, ಐಫೋನ್‌ನಲ್ಲಿ ಈ ಚಿತ್ರವನ್ನು ಚಿತ್ರೀಕರಿಸಬೇಕು ಅಂದಾಗ, ಕಿರುಚಿತ್ರ ಮಾಡುತ್ತಿದ್ದೀರಾ ಅಥವಾ ಚಿತ್ರ ಮಾಡುತ್ತಿದ್ದೀರಾ ಅಂತ ಪ್ರಶ್ನಿಸಿದ ಪ್ರಮೋದ್‌ಗೆ, ಇದು ಹಂಡ್ರೆಡ್‌ ಪರ್ಸೆಂಟ್‌ ಕಮರ್ಷಿಯಲ್‌ ಚಿತ್ರ ಅಂದರಂತೆ. “ಚಾಲೆಂಜ್‌ ಆಗಿ ತೆಗೆದುಕೊಂಡು ಐದಾರು ತಿಂಗಳು ರಿಹರ್ಸಲ್‌ ನಡೆಸಿ, ಕೆಲವೆಡೆ ಚಿತ್ರೀಕರಣ ಮಾಡಿ, ಐದು ನಿಮಿಷದ ಔಟ್‌ಪುಟ್‌ ನೋಡಿದ ಮೇಲೆ ಚಿತ್ರ ಮಾಡುವ ನಿರ್ಧಾರಕ್ಕೆ ಬಂದೆವು. ಸಿನಿಮಾ ನೋಡಿದವರಿಗೆ ಎಲ್ಲೂ ಇದು ಐಫೋನ್‌ನಲ್ಲಿ ಚಿತ್ರೀಕರಿಸಲಾಗಿದೆ ಅಂತ ಗೊತ್ತಾಗುವುದಿಲ್ಲ. ಅಷ್ಟೊಂದು ಕ್ಲಿಯರ್‌ ಆಗಿ ಮೂಡಿಬಂದಿದೆ’ ಎಂದರು ಪ್ರಮೋದ್‌.

ನಿರ್ಮಾಪಕ ರಿತೇಶ್‌ ಜೋಶಿ ಅವರಿಗೆ ಇದು ಎರಡನೇ ಸಿನಿಮಾ. ಈ ಹಿಂದೆ ಅವರು “ಸಂರಕ್ಷಣೆ’ ಎಂಬ ಚಿತ್ರ ಮಾಡಿದ್ದರಂತೆ. ಈಗ ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. “ರವಿ ಮತ್ತು ನಾನು ಐದು ವರ್ಷಗಳಿಂದಲೂ ಒಳ್ಳೆಯ ಸಿನಿಮಾ ಮಾಡಬೇಕು. ಹೊಸತನ ಕೊಡಬೇಕು ಎಂದು ಚರ್ಚಿಸುತ್ತಿದ್ದೆವು. ಹಿಂದೆ ಕೆಜಿಎಫ್ ಹೆಸರಿನ ಡಾಕ್ಯುಮೆಂಟರಿ ಮಾಡೋಕೆ ಚರ್ಚೆ ಮಾಡಿ, ಎಲ್ಲವೂ ತಯಾರಿ ನಡೆಸಿದ್ದೆವು. ಕಾರಣಾಂತರದಿಂದ ಆಗಲಿಲ್ಲ. ಈಗ ಐಫೋನ್‌ ಇಟ್ಟುಕೊಂಡು ಚಿತ್ರ ಮಾಡಿದ್ದೇವೆ. ಈವರೆಗೆ ಎಲ್ಲೂ ಕಾಂಪ್ರಮೈಸ್‌ ಮಾಡಿಕೊಳ್ಳದೆ ಸುಮಾರು 70 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ ಎಂಬ ವಿವರ ಕೊಟ್ಟರು ರಿತೇಶ್‌ ಜೋಶಿ.

ಚಿತ್ರದಲ್ಲಿ ದಿಶಾ ಕೃಷ್ಣಯ್ಯ ನಾಯಕಿ. ಅವರಿಲ್ಲಿ ಕಾರ್ಪೋರೇಟ್‌ ಫೀಲ್ಡ್‌ನಲ್ಲಿ ಕೆಲಸ ಮಾಡುವ ಹುಡುಗಿ ಪಾತ್ರ ಮಾಡಿದ್ದಾರಂತೆ. ಇದೊಂದು ನೈಜತೆಗೆ ಹತ್ತಿರವಾಗಿರುವ ಚಿತ್ರ ಎಂದು ಹೇಳಿಕೊಂಡರು ಅವರು. ಇನ್ನು, ಅನಿಲ್‌ ಚಿತ್ರಕ್ಕೆ ಐದು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಎಲ್ಲಾ ಹೊಸ ಗಾಯಕರೇ ಹಾಡಿದ್ದಾರಂತೆ. ಶ್ರೀಲಂಕಾ ಭಾಷೆ ಕೂಡ ಇಲ್ಲಿ ಮಿಕ್ಸ್‌ ಆಗಿದೆ ಎಂದು ವಿವರ ಕೊಡುತ್ತಾರೆ ಅನಿಲ್‌. ಸುರೇಶ್‌ ಶೆಟ್ಟಿ, ಸೋನಾಲಿಶ ಇತರರು ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next