Advertisement

Betting: ಬೆಟ್ಟಿಂಗ್‌ನ ಮಾಸ್ಟರ್‌ ಬುಕ್ಕಿ ಬಂಧನ, 41 ಲಕ್ಷ ರೂ. ವಶ

10:48 AM Nov 18, 2023 | Team Udayavani |

ಬೆಂಗಳೂರು: ಕ್ರಿಕೆಟ್‌ ಬೆಟ್ಟಿಂಗ್‌ನ ಮಾಸ್ಟರ್‌ ಬುಕ್ಕಿಯಾಗಿ ಗುರುತಿಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಜೂಜಾಟಕ್ಕೆ ಬಳಸುತ್ತಿದ್ದ 3 ಬ್ಯಾಂಕ್‌ ಖಾತೆ ವಹಿವಾಟು ಸ್ಥಗಿತಗೊಳಿಸಿ 41.71 ಲಕ್ಷ ರೂ. ಜಪ್ತಿ ಮಾಡಿದ್ದಾರೆ.

Advertisement

ಚಿಕ್ಕಮಾವಳ್ಳಿ ನಿವಾಸಿ ಸತೀಶ್‌ (50) ಬಂಧಿತ ಕ್ರಿಕೆಟ್‌ ಬೆಟ್ಟಿಂಗ್‌ ಬುಕ್ಕಿ. ಈತನೊಂದಿಗೆ ಆನ್‌ ಲೈನ್‌ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ ಉಡುಪಿ ಕಾರ್ಕಳದ ಅಜೆಕಾರು ಮೂಲದ ಮುಂಬೈನ ಹೋಟೆಲ್‌ ಮಾಲೀಕ ಪ್ರಕಾಶ್‌ ಶೆಟ್ಟಿ ಹಾಗೂ ಆತನ ಮೂವರು ಸಹಚರರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ.

ಬಂಧಿತ ಆರೋಪಿಯಿಂದ 1.50 ಲಕ್ಷ ರೂ. ನಗದು, 6 ಮೊಬೈಲ್‌, 1 ಟ್ಯಾಬ್‌ ಜಪ್ತಿ ಮಾಡಲಾಗಿದೆ. ಕ್ರಿಕೆಟ್‌ ಬೆಟ್ಟಿಂಗ್‌ ಜೂಜಾಟಕ್ಕೆ ಬಳಸುತ್ತಿದ್ದ 3 ಬ್ಯಾಂಕ್‌ ಖಾತೆ ವಹಿವಾಟು ಸ್ಥಗಿತಗೊಳಿಸಿ 41.71 ಲಕ್ಷ ರೂ. ಜಪ್ತಿ ಮಾಡಲಾಗಿದೆ.

ಪ್ರಕರಣದ ವಿವರ: ಆರೋಪಿ ಸತೀಶ್‌ ಸೂಪರ್‌ ಮಾಸ್ಟರ್‌ ಬುಕ್ಕಿಯ ಕಡೆಯಿಂದ ಕ್ರಿಕೆಟ್‌ ಬೆಟ್ಟಿಂಗ್‌ ಅಲೆಕ್ಸ್‌ ಡಾಟ್‌ ಬೆಟ್‌ ಎಂಬ ಆ್ಯಪ್‌, ವೆಬ್‌ಸೈಟ್‌ನ ಯೂಸರ್‌ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಪಂಟರುಗಳಿಗೆ ಕೊಡುತ್ತಿದ್ದ. ಅವರಿಂದ ಕ್ರಿಕೆಟ್‌ ಬೆಟ್ಟಿಂಗ್‌ ಜೂಜಾಟವನ್ನು ಆಡಿಸಲು ಹಣ ಸಂಗ್ರಹಿಸಿ ರಿಚಾರ್ಜ್‌ ಮಾಡಲು ವಾಟ್ಸ್‌ಆ್ಯಪ್‌ ಮುಖೇನ ಸೂಪರ್‌ ಮಾಸ್ಟರ್‌ ಬುಕ್ಕಿಯೊಂದಿಗೆ ವ್ಯವಹರಿಸುತ್ತಿದ್ದ. ಈ ವಿಚಾರ ಸಿಸಿಬಿ ಗಮನಕ್ಕೆ ಬಂದು ಅ.10ರಂದು ಬೆಂಗಳೂರಿನ ಶಂಕರಪುರ ಪೊಲೀಸ್‌ ಠಾಣಾ ಸರಹದ್ದಿನ ಪಂಪ ಮಹಾಕವಿ ರಸ್ತೆಯಲ್ಲಿ ಸಿಸಿಬಿ ಪೊಲೀಸರು ಸತೀಶ್‌ನನ್ನು ವಶಕ್ಕೆ ಪಡೆದು ಶಂಕರಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ನಂತರ ಈ ಪ್ರಕರಣವನ್ನು ಸಿಸಿಬಿ ಘಟಕಕ್ಕೆ ವರ್ಗಾವಣೆ ಪಡೆದುಕೊಂಡು ಆರೋಪಿ ಸತೀಶ್‌ನನ್ನು ವಿಚಾರಣೆ ನಡೆಸಿದಾಗ ಕಾರ್ಕಳ ಸಮೀಪದ ಅಜೆಕಾರಿನ ಪ್ರಕಾಶ್‌ ಶೆಟ್ಟಿ ಎಂಬಾತ ಈ ದಂಧೆಯ ಸೂತ್ರದಾರ ಎಂಬುದು ಗೊತ್ತಾಗಿದೆ.

Advertisement

ದಾಖಲೆ ಒದಗಿಸಬೇಕು: ಜಪ್ತಿ ಮಾಡಿರುವ 41.71 ಲಕ್ಷ ರೂ. ಮೂಲದ ಬಗ್ಗೆ ಪ್ರಕಾಶ್‌ ಶೆಟ್ಟಿ ಸೇರಿದಂತೆ ನೋಟಿಸ್‌ ‌ಡೆದಿರುವ ನಾಲ್ವರು ದಾಖಲೆ ಒದಗಿಸಬೇಕು. ಬ್ಯಾಂಕ್‌ ದಾಖಲೆ, ಈ ದುಡ್ಡು ಎಲ್ಲಿಂದ ? ಹೇಗೆ ? ಬಂತು ಎಂಬ ಬಗ್ಗೆ ದಾಖಲೆ ಒದಗಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಹೇಗೆ?: ಸಿಸಿಬಿಯ ಒಂದು ತಂಡವು ಅಜೆಕಾರಿನ ಪ್ರಕಾಶ್‌ ಶೆಟ್ಟಿ ಮನೆಗೆ ತೆರಳಿ ಪರಿಶೀಲಿಸಿತ್ತು. ಆ ವೇಳೆ ಅಲೆಕ್ಸ್‌ ಡಾಟ್‌ ಬೆಟ್‌ ಹಾಗೂ ಇತರೆ ಆನ್‌ಲೈನ್‌ ಕ್ರಿಕೆಟ್‌ ಬೆಟ್ಟಿಂಗ್‌ ಆ್ಯಪ್‌ಗಳ  ನಿರ್ವಹಣೆ ಮಾಡಲು ಪ್ರಕಾಶ್‌ ಶೆಟ್ಟಿ ಹೊರ ರಾಜ್ಯದಿಂದ 4 ಮಂದಿ ಯುವಕರನ್ನು ಕರೆತಂದು ಟೀಂ ಡೆವಲ್ಲಪ್ಪರ್‌ ಎಂಬ ವಾಟ್ಸ್‌ ಆ್ಯಗ್ರೂಪ್‌ ರಚಿಸಿಕೊಂಡು ಅವರುಗಳಿಗೆ ತರಬೇತಿ ನೀಡಿರುವುದು ಗೊತ್ತಾಗಿದೆ. ಹೊರ ರಾಜ್ಯದಿಂದ ಈತ ಕರೆತಂದಿದ್ದ ನಾಲ್ವರ ಪೈಕಿ ಓರ್ವ ಎಂಜಿನಿಯರ್‌ ಸಹ ಇದ್ದು, ಆತನ ಸಹಾಯದಿಂದ ಅಲೆಕ್ಸ್‌ ಡಾಟ್‌ ಬೆಟ್‌ ಆ್ಯಪ್‌ ಅನ್ನು ಇವರುಗಳೇ ಅಭಿವೃದ್ಧಿಪಡಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಆಸಕ್ತಿ ಹೊಂದಿರುವವರನ್ನು ಟಾರ್ಗೆಟ್‌ ಮಾಡಿ ಪರಿಚಯಿಸಿಕೊಂಡು ಈ ಆ್ಯಪ್‌ ಬಗ್ಗೆ ಮಾಹಿತಿ ನೀಡಿ ಪಾಸ್‌ವರ್ಡ್‌, ಯೂಸರ್‌ ಐಡಿ ಕೊಡುತ್ತಿದ್ದರು. ನಂತರ ಕ್ರಿಕೆಟ್‌ ಪಂದ್ಯದ ವೇಳೆ ಆನ್‌ಲೈನ್‌ನಲ್ಲೇ ಬೆಟ್ಟಿಂಗ್‌ ಡೀಲ್‌ ಕುದುರಿಸುತ್ತಿದ್ದರು. ಕಾಲ್‌ ಸೆಂಟರ್‌ ಮಾದರಿಯಲ್ಲಿ ಮನೆಯಲ್ಲೇ ವ್ಯವಸ್ಥೆ ರೂಪಿಸಿಕೊಂಡು ಬೆಟ್ಟಿಂಗ್‌ ವ್ಯವಹಾರ ನಡೆಸುತ್ತಿದ್ದರು. ಮುಂಬೈನಲ್ಲಿ ಸ್ವಂತ ಹೋಟೆಲ್‌ ಹೊಂದಿರುವ ಪ್ರಕಾಶ್‌ ಶೆಟ್ಟಿಯ ವಿಚಾರಣೆ ಬಳಿಕ ಬೆಟ್ಟಿಂಗ್‌ ದಂಧೆಯ ಹಿಂದೆ ಇರುವ ಇನ್ನಷ್ಟು ಜನರ ಬಗ್ಗೆ ಮಾಹಿತಿ ಗೊತ್ತಾಗಲಿದೆ.

ಪ್ರಕಾಶ್‌ ಶೆಟ್ಟಿ ಮುಂಬೈನಲ್ಲಿದ್ದು, ಈ ನಾಲ್ವರ ಮೂಲಕ ಬೆಟ್ಟಿಂಗ್‌ ವ್ಯವಹಾರ ನಡೆಸುತ್ತಿದ್ದ. ಸದ್ಯ ವಂಚನೆ ಎಸಗಿರುವ ಆರೋಪ ಕೇಳಿ ಬಂದಿಲ್ಲ. ಬಂಧಿತ ಸತೀಶ್‌ಗೆ ಬೆಂಗಳೂರಿನಲ್ಲಿ ಈ ವ್ಯವಹಾರ ನೋಡಿಕೊಳ್ಳುವಂತೆ ಪ್ರಕಾಶ್‌ ಶೆಟ್ಟಿ ಸೂಚಿಸಿದ್ದ. ಸತೀಶ್‌ನನ್ನು ಈ ಆ್ಯಪ್‌ನಲ್ಲಿ ಅಡ್ಮಿನ್‌ ಮಾಡಿದ್ದ. ಸತೀಶ್‌ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಈತ ನಗದು ವ್ಯವಹಾರ ನಡೆಸುತ್ತಿದ್ದ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next