Advertisement

ಶಕ್ತಿಗಿಂತ ಯುಕ್ತಿ ಮೇಲು

11:48 AM Nov 24, 2017 | |

“ಮೈನಾ’ ಆಗಿ ನಾಲ್ಕು ವರ್ಷಗಳ ನಂತರ “ಆ ದಿನಗಳು’ ಚೇತನ್‌ ಅಭಿನಯದ “ನೂರೊಂದು ನೆನಪು’ ಬಿಡುಗಡೆಯಾಯಿತು. ವಿಚಿತ್ರವೆಂದರೆ, ಅದಾಗಿ ಐದು ತಿಂಗಳಿಗೆ ಚೇತನ್‌ ಅಭಿನಯದ ಇನ್ನೊಂದು ಚಿತ್ರ ಬಿಡುಗಡೆಯಾಗುತ್ತಿದೆ. ಅದೇ “ಅತಿರಥ’. ಅಲ್ಲಿಗೆ ಈ ವರ್ಷ ಚೇತನ್‌ ಅಭಿನಯದ ಎರಡು ಚಿತ್ರಗಳು ಬಿಡುಗಡೆಯಾದಂತಾಗುತ್ತಿದೆ. “ಮೈನಾ’ ಆದಮೇಲೆ ನಾಲ್ಕು ವರ್ಷಗಳ ನಂತರ ಒಂದೇ ವರ್ಷದಲ್ಲಿ ನನ್ನ ಎರಡನೆಯ ಚಿತ್ರ ಬಿಡುಗಡೆಯಾಗುತ್ತಿದೆ.

Advertisement

ನನಗೆ ಬರೀ ಸಿನಿಮಾ ಮಾಡಬೇಕೆಂದೇನೂ ಇಲ್ಲ. ಮಧ್ಯೆ ಸಮಾಜಸೇವೆ, ಅಭಿವೃದ್ಧಿಯಲ್ಲಿ ತೊಡಿಗಿಸಿಕೊಂಡಿರುತ್ತಿನಿ. ಒಳ್ಳೆಯ ಕಥೆ ಸಿಕ್ಕರೆ ಓಕೆ. ಇಲ್ಲ, ನಾಲ್ಕು ವರ್ಷಕ್ಕೆ ಒಂದು ಸಿನಿಮಾ ಆದರೂ ಪರವಾಗಿಲ್ಲ. ಹಾಗೆ ಕಾದಿದ್ದಿಕ್ಕೆ ಈ ವರ್ಷ ಎರಡು ಸಿನಿಮಾ ಸಿಕ್ಕಿತು. ಆ ಪೈಕಿ “ಅತಿರಥ’ ಇಂದಿಗೆ ಬಹಳ ಸೂಕ್ತವಾದ ಸಿನಿಮಾ. ಫೇಕ್‌ ಸರ್ಟಿಫಿಕೇಟ್‌ ಮಾಫಿಯಾ ಕುರಿತಾದ ಸಿನಿಮಾ ಇದು. ನಕಲಿ ಪ್ರಮಾಣಪತ್ರಗಳ ಕುರಿತು ಸಂದೇಶ ಸಾರುವ ಚಿತ್ರ ಇದು.

ಈ ಚಿತ್ರದಲ್ಲಿ ನಾನು ಟಿವಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇಂತಹ ವಿಷಯಗಳಲ್ಲಿ ಮಾಧ್ಯಮದ ಶಕ್ತಿ ಅಪಾರ. ಇಲ್ಲಿ ಶಕ್ತಿ ಎನ್ನುವುದಕ್ಕಿಂತ ಯುಕ್ತಿ ಮೇಲುಗೈ ಸಾಧಿಸುತ್ತದೆ. “ಅತಿರಥ’ ಎಂಬ ಹೆಸರ ಕೆಳಗೆ “ಮಾಸ್ಟರ್‌ ಮೈಂಡ್‌’ ಎಂಬ ಉಪಶೀರ್ಷಿಕೆ ಇದೆ. ಅದಕ್ಕೆ ತಕ್ಕಂತೆ ಇಲ್ಲಿ ನಾಯಕ, ತನ್ನ ಯುಕ್ತಿ ಬಳಸಿ ಹೇಗೆ “ಮಾಸ್ಟರ್‌ ಮೈಂಡ್‌’ ಆಗುತ್ತಾನೆ ಎನ್ನುವುದೇ ಚಿತ್ರದ ಕಥೆ’ ಎನ್ನುತ್ತಾರೆ ಚೇತನ್‌.

ಒಂದು ಕಥೆ ತನಗಿಷ್ಟವಾಗುವುದಷ್ಟೇ ಅಲ್ಲ, ಜನರಿಗೂ ರಿಲೇಟ್‌ ಆಗಬೇಕು ಮತ್ತು ತಂಡ ಸಹ ಚೆನ್ನಾಗಿರಬೇಕು ಎಂಬುದು ತಮ್ಮ ಅಭಿಪ್ರಾಯ ಎನ್ನುತ್ತಾರೆ ಚೇತನ್‌. “ಪಾತ್ರ, ಥೀಮ್‌ ಮತ್ತು ಟೀಮ್‌ ಈ ಮೂರೂ ಮುಖ್ಯ. ಆ ಮೂರೂ ಈ ಚಿತ್ರದಲ್ಲಿ ಕೂಡಿ ಬಂದಿದೆ ಎನ್ನುವುದು ವಿಶೇಷ. ಒಂದು ಕಥೆ ಅಥವಾ ಪಾತ್ರ ನನಗೆ ಇಷ್ಟವಾದರೆ ಸಾಲದು, ಅದರಿಂದ ಜನರಿಗೂ ಮಾರ್ಗದರ್ಶನವಾಗಬೇಕು. ಚಿತ್ರದಿಂದ ನೋಡುಗರಿಗೆ ಒಂದು ಸಂದೇಶ ಸಿಗಬೇಕು ಮತ್ತು ಆ ಸಂದೇಶ ಕೊಡುವ ರೀತಿ ವಿಭಿನ್ನವಾಗಿರಬೇಕು.

ಅದು ಈ ಚಿತ್ರದಲ್ಲಿ ಸಾಧ್ಯವಾಗಿದೆ. ಇಲ್ಲಿ ಜನರಿಗೆ ಜ್ಞಾನೋದಯವಾಗುವುದಕ್ಕಿಂತ ಮೊದಲು, ನಾಯಕನ ಪಾತ್ರಕ್ಕೆ ಆಗುತ್ತದೆ. ಅಲ್ಲಿಯವರೆಗೂ ಹೇಗೋ ಇದ್ದವನು, ಬದಲಾಗುತ್ತಾನೆ. ಒಂದು ಘಟನೆ ಅವನನ್ನು ಬದಲಿಸುತ್ತದೆ. ಟಿ.ಆರ್‌.ಪಿಗೆ ಕೆಲಸ ಮಾಡುವುದಕ್ಕಿಂತ, ಜನ ಸಾಮಾನ್ಯರಿಗೆ ಒಳ್ಳೆಯದು ಮಾಡಬೇಕು ಎಂದು ಹೊರಡುತ್ತಾನೆ. ಆತನ ಪಾತ್ರ ಎಲ್ಲರಿಗೂ ಇನ್‌ಸ್ಪೈರ್‌ ಆಗುತ್ತದೆ.

Advertisement

ಎಲ್ಲರಲ್ಲೂ ಒಂದು ಶಕ್ತಿ ಇದೆ ಮತ್ತು ಅದನ್ನು ಸಾಮಾಜಿಕ ನ್ಯಾಯಕ್ಕೆ ಬಳಸಬೇಕು ಎಂದು ತೋರಿಸುತ್ತದೆ. ಹಾಗಾಗಿ ಈ ಚಿತ್ರವನ್ನು ಒಪ್ಪಿಕೊಂಡೆ’ ಎನ್ನುತ್ತಾರೆ ಚೇತನ್‌. “ಬಿರುಗಾಳಿ’ ಚಿತ್ರದ ನಂತರ ಔಟ್‌ ಆ್ಯಂಡ್‌ ಔಟ್‌ ಕಮರ್ಷಿಯಲ್‌ ಚಿತ್ರದಲ್ಲಿ ನಟಿಸಿದ್ದರೆ, ಅದು ಇದೇ ಎನ್ನುತ್ತಾರೆ ಚೇತನ್‌. “ಸಾಮಾನ್ಯವಾಗಿ ಕಮರ್ಷಿಯಲ್‌ ಸಿನಿಮಾಗಳು ನೈಜತೆಗೆ ದೂರವಾಗಿರುತ್ತದೆ. ಆದರೆ, ಇದು ಕಮರ್ಷಿಯಲ್‌ ಸಿನಿಮಾ ಆದರೂ ನೈಜವಾಗಿದೆ. ಅದರ ಮಧ್ಯೆಯೇ ಹಾಡು, ಡ್ಯಾನ್ಸು, ಫೈಟು ಎಲ್ಲವೂ ಇದೆ.

ಇನ್ನು ನಿರ್ದೇಶಕ ಮಹೇಶ್‌ ಬಾಬು ಅವರ ಕೆಲಸದ ಬಗ್ಗೆ ಹೇಳಲೇಬೇಕು. ಅವರ ಮೇಕಿಂಗ್‌, ಹಾಡುಗಳನ್ನು ಬಳಸಿಕೊಂಡಿರುವ ರೀತಿ ಎಲ್ಲವೂ ಚೆನ್ನಾಗಿದೆ. ಅವರು ಸೆಂಟಿಮೆಂಟ್‌ನಲ್ಲಿ ಎತ್ತಿದ್ದ ಕೈ ಎಂಬುದು ಎಲ್ಲರಿಗೂ ಗೊತ್ತು. ಇಲ್ಲೂ ಸಹ ಸೆಂಟಿಮೆಂಟ್‌ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ’ ಎನ್ನುತ್ತಾರೆ ಚೇತನ್‌. “ಅತಿರಥ’ ಚಿತ್ರವು ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರದಲ್ಲಿ ಚೇತನ್‌ಗೆ ನಾಯಕಿಯಾಗಿ ಲತಾ ಹೆಗಡೆ ಇದ್ದಾರೆ. ಇನ್ನು ಕಬೀರ್‌ ಸಿಂಗ್‌ ದುಹಾನ್‌ ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

* ಚೇತನ್ ನಾಡಿಗೇರ್

Advertisement

Udayavani is now on Telegram. Click here to join our channel and stay updated with the latest news.

Next