Advertisement

ಮದುವೆಯಾಗುವುದಾಗಿ ನಂಬಿಸಿ ಮೋಸ: ಆರೋಪಿ ಸೆರೆ 

11:49 AM Nov 21, 2018 | |

ಬೆಂಗಳೂರು: ಯುವತಿಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಆರೋಪಿಯನ್ನು ಸದಾಶಿವನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಗ್ಗೇರೆ ನಿವಾಸಿ ಹರೀಶ್‌ (28) ಬಂಧಿತ. ಆರೋಪಿ ಕೊರಿಯರ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೊರಿಯರ್‌ ಕೊಡಲು ಹೋದಾಗ ಪರಿಚಯವಾದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಚಿಕ್ಕಮಗಳೂರು ಮೂಲದ ಸಂತ್ರಸ್ತೆ ಕಳೆದ ಮೂರು ವರ್ಷಗಳಿಂದ ಸದಾಶಿವನಗರದ ಶರಣಗೌಡ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಒಂದು ವರ್ಷದ ಹಿಂದೆ ಆರೋಪಿ ಕೊರಿಯರ್‌ ಕೊಡಲು ಶರಣಗೌಡರ ಮನೆಗೆ ಬಂದಿದ್ದ. ಈ ವೇಳೆ ಸಂತ್ರಸ್ತೆಯ ಮೊಬೈಲ್‌ ನಂಬರ್‌ ಪಡೆದುಕೊಂಡಿದ್ದಾನೆ. ಬಳಿಕ ಆಗಾಗ್ಗೆ ಕರೆ ಮಾಡಿ ಪ್ರೀತಿಸುವಂತೆ ಒತ್ತಾಯಿಸಿದ್ದಾನೆ.

ಈತನ ಪ್ರೀತಿ ಒಪ್ಪಿಕೊಂಡ ಸಂತ್ರಸ್ತೆಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕಕ್ಕೆ ಪೀಡಿಸಿದ್ದಾನೆ. ಮದುವೆಗೂ ಮೊದಲು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಕುಟುಂಬದವರನ್ನು ನಂಬಿಸಿ ಮದುವೆ ಮಾಡಿಕೊಳ್ಳೋಣ ಎಂದು ಸಂತ್ರಸ್ತೆ  ಹೇಳಿದ್ದಾರೆ. ಆದರೆ, ಆರೋಪಿ ಈಗಾಗಲೇ ಮದುವೆಯಾದವರಂತೆ ಇದ್ದೇವೆ. ಮುಂದೆಯೂ ಮದುವೆ ಮಾಡಿಕೊಳ್ಳೋಣ ಎಂದು ಸಂತ್ರಸ್ತೆಯನ್ನು ನಂಬಿಸಿದ್ದಾನೆ ಎಂದು ಪೊಲೀಸರು ಹೇಳಿದರು.

ಕೆಲ ದಿನಗಳ ಬಳಿಕ ಆರೋಪಿ ಮನೆ ಮಾಲೀಕರು ಹಾಗೂ ಕುಟುಂಬ ಸದಸ್ಯರು ಇಲ್ಲದ ವೇಳೆ ಬಂದು, ಕಾರಿನ ಶೆಡ್‌ನ‌ಲ್ಲಿ ಸಂತ್ರಸ್ತೆ ಜತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಎರಡು ತಿಂಗಳ ಬಳಿಕ ಸಂತ್ರಸ್ತೆ ಗರ್ಭಿಣಿಯಾಗಿದ್ದಾರೆ ಎಂದು ತಿಳಿಯುತ್ತಿದ್ದಂತೆ ಆರೋಪಿ, ನಿನಗೂ ನನಗೂ ಸಂಬಂಧವಿಲ್ಲ ಎಂದು ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡಿದ್ದ. ಈ ಸಂಬಂಧ ಸಂತ್ರಸ್ತೆ ನ.17ರಂದು ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ನಕಲಿ ಹೆಸರು: ಆರೋಪಿ ಸಂತ್ರಸ್ತೆಗೆ ಕರೆ ಮಾಡಿದಾಗ ತನ್ನ ಹೆಸರನ್ನು ಪ್ರಜ್ವಲ್‌ ಎಂದು ಹೇಳಿಕೊಂಡಿದ್ದ. ಹೀಗಾಗಿ ಸಂತ್ರಸ್ತೆಗೆ ಈತನ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಕೊರಿಯರ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದೇನೆ ಎಂದಷ್ಟೇ ಹೇಳಿದ್ದು, ಬೇರೆ ಯಾವುದೇ ಮಾಹಿತಿಯನ್ನು ಸಂತ್ರಸ್ತೆ ಬಳಿ ಹೇಳಿಕೊಂಡಿಲ್ಲ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next