ಮಹಾಲಿಂಗಪುರ: ಮಾಜಿ ಸಚಿವೆ, ಹಿರಿಯ ಕಲಾವಿದೆ ಉಮಾಶ್ರೀ ಅವರ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ತಾವು ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ ತಮ್ಮ ಮಾತನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಪಕ್ಷಬೇಧ ಮರೆತು ನೇಕಾರರು ಒಂದಾಗಿ ತಮ್ಮ ಮನೆಯ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ನೇಕಾರ ಯುವ ಮುಖಂಡ ರಾಜೇಂದ್ರ ಭದ್ರಣ್ಣವರ ಹೇಳಿದರು.
ಶಾಸಕ ಸಿದ್ದು ಸವದಿಯವರು ಉಮಾಶ್ರೀ ವಿರುದ್ಧ ಏಕವಚನ ಮತ್ತು ಏನೂ ಕೆಲಸ ಮಾಡಿಲ್ಲ ಎಂಬ ಆರೋಪ ಕುರಿತು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಕಾರರು ಮುಗ್ಧರು ಮಳ್ಳರಲ್ಲ. ನಾವು ಸುಮ್ಮನೆ ಕುಳಿತಿದ್ದೇವೆ ಎಂದರೆ ಕೈಗೆ ಬಳೆ ತೊಟ್ಟಿಲ್ಲ. ನೇಕಾರರು ಬಡವರಿರಬಹುದು ಆದರೆ ಸ್ವಾಭಿಮಾನಿಗಳು. ನೇಕಾರ ನಾಯಕಿಗೆ ಕೀಳು ಪದ ಬಳಸಿದರೆ ನಾವು ಸುಮ್ಮನಿರಲ್ಲ, ಬರುವ ಚುನಾವಣೆಯಲ್ಲಿ ನಾವು ಉಮಾಶ್ರೀಯವರ ಸಾಧನೆಗಳ ಬೋರ್ಡ್ ಹಾಕಿ ಚುನಾವಣೆ ಎದುರಿಸುತ್ತೇವೆ. ನಿಮಗೆ ಆ ತಾಕತ್ ಇದೆಯೇ ಎಂದು ಪ್ರಶ್ನಿಸಿದರು.
ಪಟ್ಟಣದ ನೇಕಾರ ಮುಖಂಡ ಮಲ್ಲಪ್ಪ ಭಾಂವಿಕಟ್ಟಿ ಮಾತನಾಡಿ, ಬಿಜೆಪಿ ಆಡಳಿತ ಅಚ್ಛೇ ದಿನ್ ಅಲ್ಲ ತುಚ್ಛೇ ದಿನ್. ಉಮಾಶ್ರೀಯವರ ಅ ಧಿಕಾರದಲ್ಲಿದ್ದಾಗ ಪವರ್ ಲೂಮ್ ಮಗ್ಗಗಳಿಗೆ ಸಬ್ಸಿಡಿ ವಿದ್ಯುತ್, ಸಾಲ ಮನ್ನಾ, ಸಹಕಾರಿ ನೂಲಿನ ಗಿರಣಿಗಳಿಗೆ ಸಹಾಯ ಧನ, ಜೇಡರ ದಾಸಿಮಯ್ಯ ಜಯಂತಿ 65 ಕೋಟಿ ಹಾಗೂ ಎರಡು ಎಕರೆ ಜಮೀನು ಹಾಗೂ ಸಮುದಾಯ ಭವನಗಳು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದರು.
ನಗರ ಘಟಕದ ಅಧ್ಯಕ್ಷ ಈಶ್ವರ ಚಮಕೇರಿ ಮಾತನಾಡಿ, ಉಮಾಶ್ರೀ ಅಧಿ ಕಾರದಲ್ಲಿದ್ದಾಗ ನೇಕಾರ ಅಭಿವೃದ್ಧಿ ನಿಗಮಕ್ಕೆ ನೇಕಾರ ಸಮಾಜದ ರವೀಂದ್ರ ಕಲಬುರ್ಗಿಯವರನ್ನು ನೇಮಕ ಮಾಡಿ ನೇಕಾರರ ಮೇಲಿನ ಕಾಳಜಿ ಮೆರೆದಿದ್ದರು. ಆದರೆ ಶಾಸಕ ಸಿದ್ದು ಸವದಿ ಅವರು ಅ ಧಿಕಾರದಾಸೆಯಿಂದ ತಾವೇ ನಿಗಮದ ಅಧ್ಯಕ್ಷರಾಗಿ ನೇಕಾರ ಸಮುದಾಯಕ್ಕೆ ದ್ರೋಹ ಬಗೆದಿದ್ದಾರೆ ಎಂದರು.
ಸದಾಶಿವ ಗೋಲಕರ, ಶಂಕ್ರಪ್ಪ ಜಾಲಿಗಿಡದ, ನೀಲಕಂಠ ಮುತ್ತೂರ, ರಾಜೇಶ ಬಾವಿಗಿಡದ ಮಾತನಾಡಿದರು. ತೇರದಾಳ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಡಾ.ಯು.ಎಸ್. ವನಹಳ್ಳಿ, ಮಹಾದೇವ ಬರಗಿ, ರಾಜು ಭಾವಿಕಟ್ಟಿ, ಬಸವರಾಜ ಗುಡೋಡಗಿ, ಹೊಳೆಪ್ಪ ಬಾಡಗಿ, ಶಂಕರ ಸೊನ್ನದ, ಶ್ರೀಧರ ಪಿಸೆ, ಕಿರಣ ಕರಲಟ್ಟಿ, ವಿನೋದ ಸಿಂಪಿ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.