ಗಂಗಾವತಿ: ಈಡಿಗ ಸಮುದಾಯವನ್ನು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ಎಂದು ಈಡಿಗ ಸಮುದಾಯದ ಜಗದ್ಗುರು ಪ್ರಣವಾನಂದ ಸ್ವಾಮಿ ಆರೋಪಿಸಿದ್ದಾರೆ.
ಅವರು ನಗರದ ಸರ್ವೇಶ್ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಗಂಗಾವತಿ ಸೇರಿ ಇನ್ನೂ ಹಲವು ಕ್ಷೇತ್ರಗಳಲ್ಲಿ ಈಡಿಗ ಸಮುದಾಯದವರಿಗೆ ಟಿಕೆಟ್ ನೀಡದೆ ಅನ್ಯಾಯ ಮಾಡಿದೆ.
ಕಾಂಗ್ರೆಸ್ ಪಕ್ಷವನ್ನು ಇಂದಿರಾಗಾಂಧಿಯವರ ಜೊತೆಗೂಡಿ ಕಟ್ಟಿ ಬೆಳೆಸಿದ್ದ ಮಾಜಿ ಸಂಸದ ಹಿರಿಯ ಕಾಂಗ್ರೆಸ್ ಮುಖಂಡ ಹೆಚ್.ಜಿ. ರಾಮುಲು ಅವರಿಗೆ ಅವಮಾನ ಮಾಡುವ ಉದ್ದೇಶದಿಂದ ಪ್ರದೇಶ ಕಾಂಗ್ರೆಸ್ ಸಮಿತಿ ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ ಆರ್ ಶ್ರೀನಾಥ್ ಅವರಿಗೆ ಟಿಕೆಟ್ ತಪ್ಪಿಸಿ ಇಕ್ಬಾಲ್ ಅನ್ಸಾರಿಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ಸೇರಿದಾಗಿನಿಂದ ಈಡಿಗ ಸಮಾಜದ ಮುಖಂಡರಾದ ಜನಾರ್ದನ ಪೂಜಾರಿ, ಕಾಗೋಡು ತಿಮ್ಮಪ್ಪ ,ಆರ್ ಎಲ್ ಜಾಲಪ್ಪ, ಎಚ್. ಜಿ. ರಾಮುಲು ಸೇರಿ ಇವರ ಕುಟುಂಬವನ್ನು ಮೂಲೆಗುಂಪು ಮಾಡಲಾಗಿದೆ. ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಧ್ಯಸ್ಥಿಕೆಯಲ್ಲಿ ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡುವ ಭರವಸೆಯೊಂದಿಗೆ ಶ್ರೀನಾಥ್ ಅವರನ್ನು ಪಕ್ಷಕ್ಕೆ ಸೇರ್ಪಡೆಸಿಕೊಳ್ಳಲಾಗಿತ್ತು. ಆದರೆ ಸರ್ವೆಯಲ್ಲಿ ಶ್ರೀನಾಥ್ ಅವರಿಗೆ ಸೋಲಾಗುತ್ತದೆ ನೆಪ ಹೇಳಿ ಸಿದ್ದರಾಮಯ್ಯ ಟಿಕೆಟ್ ತಪ್ಪಿಸಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದ 15 ಕ್ಷೇತ್ರಗಳಲ್ಲಿ ಈಡಿಗ ಸಮುದಾಯದ ಮತದಾರರು ಅಧಿಕ ಸಂಖ್ಯೆಯಲ್ಲಿದ್ದಾರೆ ಕಾಂಗ್ರೆಸ್ ಪಕ್ಷಕ್ಕೆ ಸಮಸ್ತ ಈಡಿಗ ಸಮುದಾಯದವರು ಬುದ್ಧಿ ಕಲಿಸಲಿದ್ದಾರೆ ಎಂದರು.
70ಸಾವಿರ ಕ್ಕೂ ಅಧಿಕ ಸಂಖ್ಯೆಯ ಮತದಾರರಿರುವ ರಾಯಚೂರಿನಲ್ಲಿ ಮುಸಲ್ಮಾನ್ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಗಂಗಾವತಿಯಲ್ಲಿ ಹೆಚ್ ಆರ್ ಶ್ರೀನಾಥ್ ಅವರಿಗೆ ಪಕ್ಷದ ಬಿ ಫಾರಂ ನೀಡಬೇಕು.ಈ ಕುರಿತು ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ಬಿ.ಕೆ. ಹರಿಪ್ರಸಾದ್ ಮತ್ತು ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಲಾಗಿದೆ. ಇಲ್ಲದಿದ್ದರೆ ಈಡಿಗ ಸಮುದಾಯದವರು ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸರಿಯಾಗಿ ಬುದ್ಧಿ ಗಳಿಸಲಿದ್ದಾರೆ ಈ ಹಿಂದೆ 16 ಶಾಸಕರು, ಆರು ಎಂಪಿಗಳು ಕಾಂಗ್ರೆಸ್ ಪಕ್ಷದಿಂದ ಗೆಲುವು ಪಡೆಯುತ್ತಿದ್ದರು. ಸಮುದಾಯದ ಮುಖಂಡರು ಅಲ್ಪಸಂಖ್ಯಾತರು ಸೇರಿ ಎಲ್ಲಾ ಹಿಂದುಳಿದ ವರ್ಗಗಳ ವಿಶ್ವಾಸ ಗಳಿಸಿ ರಾಜಕೀಯ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯನವರು ಬಂದಮೇಲೆ ಈಡಿಗ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎ.18ರಂದು ಕಡಿದಾಳ ಈಡಿಗ ಜಗದ್ಗುರುಗಳ ಶಕ್ತಿ ಪೀಠದಲ್ಲಿ ಈಡಿಗ ಸಮುದಾಯದ ಮುಖಂಡರ ಸಭೆಯನ್ನು ಕರೆಯಲಾಗಿದ್ದು ಅಲ್ಲಿ ರಾಜಕೀಯ ನಿರ್ಧಾರ ತೆಗೆದುಕೊಂಡು ಎಲ್ಲಾ 15 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಬುದ್ಧಿ ಕಲಿಸಲಾಗುತ್ತದೆ. ಆಗಿರುವ ತಪ್ಪನ್ನು ತಿದ್ದಿಕೊಂಡು ಕೂಡಲೇ ಶ್ರೀನಾಥ್ ಅವರಿಗೆ ಟಿಕೆಟ್ ಘೋಷಣೆ ಮಾಡಬೇಕು ಎಂದರು.
ಬಿಜೆಪಿ-ಕೆಆರ್ ಪಿಪಿ ಮುಖಂಡರ ಭೇಟಿ
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕೆಆರ್ ಪಿ ಪಾರ್ಟಿಯ ಗಾಲಿ ಜನಾರ್ದನರೆಡ್ಡಿ ತಮ್ಮನ್ನು ಭೇಟಿಯಾಗಿದ್ದು ಎಚ್.ಆರ್.ಶ್ರೀನಾಥ ರಾಜಕೀಯ ಕುರಿತು ವಿಚಾರ ಮಾಡಿದ್ದಾರೆ. ಎಚ್.ಆರ್.ಜಿ ಕುಟುಂಬ ಎಲ್ಲಾ ಸಮುದಾಯ ಮತ್ತು ರಾಜಕಾರಣಿಗಳಿಗೆ ಬೇಕಾದ ಕುಟುಂಬವಾಗಿದ್ದು ಕಾಂಗ್ರೆಸ್ ಇದನ್ನು ಅರ್ಥ ಮಾಡಿಕೊಳ್ಳಬೇಕೆಂದು ಪ್ರಣವಾನಂದ ಸ್ವಾಮಿ ತಿಳಿಸಿದರು.
ನೋ ಕಾಮೆಂಟ್
ಹೊಸಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಎಚ್ ಆರ್ ಗವಿಯಪ್ಪ ಸೇರಿ 7 ಕ್ಷೇತ್ರಗಳಲ್ಲಿ ಹಾಗೂ ಗಂಗಾವತಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಹೆಚ್.ಜಿ. ರಾಮುಲು ಪುತ್ರ ಎಚ್ಆರ್ ಚನ್ನಕೇಶವ ಅವರಿಗೆ ಟಿಕೆಟ್ ಘೋಷಣೆ ಮಾಡುವ ನಿರೀಕ್ಷೆ ಇದ್ದು ಇವರಿಗೆಲ್ಲ ಈಡಿಗ ಜಗದ್ಗುರುಗಳ ಆಶೀರ್ವಾದ ಇದೆಯಾ ಎಂದು ಪತ್ರಕರ್ತ ಪ್ರಶ್ನೆಗೆ ಪ್ರಣವಾನಂದ ಸ್ವಾಮೀಜಿ ನೋ ಕಾಮೆಂಟ್ ಎಂದು ಉತ್ತರ ನೀಡಿದರು. ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ನಾಗರಾಜ ಗುತ್ತೆದಾರ,ಹನುಂತರಾಯ,ದೇವಪ್ಪ ಸುಭಾಸ ವೆಂಕಟಗಿರಿ ಇದ್ದರು.