ಬೇತಮಂಗಲ: ಪಟ್ಟಣದ ಸಮೀಪದ ಟಿ. ಗೊಲ್ಲಹಳ್ಳಿ ಗ್ರಾಮದ ದಲಿತ ಅಪ್ರಾಪ್ತ ಬಾಲಕಿ ಮೇಲೆ ಅದೇ ಗ್ರಾಮದ ಐವರು ಕಾಮುಕರಿಂದ (ಗ್ಯಾಂಗ್ ರೇಪ್) ಅತ್ಯಾಚಾರ ನಡೆದಿದ್ದು, ಪೋಕ್ಸೋ ಕಾಯ್ದೆ ಅಡಿಯಲ್ಲಿ 5 ಮಂದಿ ವಿರುದ್ಧ ಸಂತ್ರಸ್ತೆ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಐವರು ಆರೋಪಿಗಳಾದ ಕಾಮುಕರು: ನಾಗರಾಜ್(25), ಲವಕುಮಾರ್(30), ನವೀನ್, ಶಬರೀಶ್, ಸುಮನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಕ್ಷಣ ಆರೋಪಿಗಳನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಏನಿದು ಪ್ರಕರಣ: 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ದಲಿತ ಬಾಲಕಿಯನ್ನು ಟಿ.ಗೊಲ್ಲಹಳ್ಳಿ ಗ್ರಾಮದ ಪ್ರಮುಖ ಆರೋಪಿ ನಾಗರಾಜ್ ಹಲವು ತಿಂಗಳಿಂದ ಈಕೆಯನ್ನು ಪ್ರೀತಿಸುವುದಾಗಿ ನಾಟಕ ವಾಡಿ ದೈಹಿಕವಾಗಿ ಬಳಸಿಕೊಂಡಿದ್ದ ಎನ್ನಲಾಗಿದೆ. ನಂತರ ಪೋಷಕರಿಗೆ ವಿಷಯ ತಿಳಿದು ಗ್ರಾಮದಲ್ಲಿ ಪಂಚಾಯಿತಿ ಸಹ ಮಾಡಿದ್ದು, ಮದುವೆ ಮಾಡಿಕೊಳ್ಳಲು ಒಪ್ಪಿದ್ದರು ಎನ್ನಲಾಗಿದೆ.
4 ತಿಂಗಳ ಗರ್ಭಿಣಿ: ಇದೀಗ ಅಪ್ರಾಪ್ತ ಬಾಲಕಿ 4 ತಿಂಗಳ ಗರ್ಭಿಣಿಯಾಗಿದ್ದು, ಪಂಚಾಯಿತಿಯಲ್ಲಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ ಪ್ರೇಮಿ ನಾಗರಾಜ್, ಇದೀಗ ಬಾಲಕಿ ಗರ್ಭಿಣಿಯ ವಿಷಯ ತಿಳಿಯುತ್ತಿದ್ದಂತೆಯೇ ಮದುವೆಗೆ ನಿರಾಕರಿಸಿದ್ದು, ನಂತರ ನಾಗರಾಜ್ ಜತೆ ನಾಲ್ಕು ಮಂದಿ ಸಹ ಸೇರಿಕೊಂಡು ಅತ್ಯಾಚಾರ ಮಾಡಿದ್ದಾರೆಂದು ಪೊಲೀಸರಿಗೆ ಬಾಲಕಿ ತಿಳಿಸಿದ್ದಾಳೆ.
ಸಂತ್ರಸ್ತೆ ತಾಯಿ ಬೇತಮಂಗಲ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆ ಅಡಿಯಲ್ಲಿ 5 ಮಂದಿ ವಿರುದ್ಧ ಕೇಸು ದಾಖಲಾಗಿದೆ. ಜೀವಂತವಾಗಿ ಸುಟ್ಟು ಹಾಕುತ್ತೇವೆಂದು ಬೆದರಿಕೆ : ಪ್ರೇಮಿ ನಾಗರಾಜ್ ಹಾಗೂ ಅದೇ ಗ್ರಾಮದ ನಾಲ್ಕು ಮಂದಿ ಯುವಕರು ಅಪ್ರಾಪ್ತೆಯನ್ನು ಬೆದರಿಸಿ ಕಳೆದ 9 ತಿಂಗಳಿಂದ ಲೈಂಗಿಕವಾಗಿ ಬಳಸಿಕೊಂಡಿದ್ದು, ವಿಷಯ ಯಾರಿಗಾದರೂ ತಿಳಿಸಿದರೆ ಜೀವಂತವಾಗಿ ಸುಟ್ಟು ಹಾಕುತ್ತೇವೆಂದು ಬೆದರಿಸಿದ್ದಾರೆಂದು ತಿಳಿದು ಬಂದಿದೆ.