Advertisement

ರಸ್ತೆಯಾಯ್ತು ರಾಶಿ ಕಣ

04:28 PM Mar 31, 2019 | Naveen |

ಬೆಟಗೇರಿ: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸೇರಿದಂತೆ ಹಲವು ಹಳ್ಳಿಗಳ ಮುಖ್ಯ ರಸ್ತೆಗಳ ಮೇಲೆ ರೈತರು ರಾಶಿ ಮಾಡುವುದರಿಂದ ವಾಹನ ಸವಾರರಿಗೆ ಸಂಚಾರ ದುಸ್ತರವಾಗಿದೆ.

Advertisement

ಇತ್ತೀಚೆಗೆ ರೈತರು ತಂತಮ್ಮ ಹೊಲಗಳಲ್ಲಿ ರಾಶಿ ಮಾಡುವುದನ್ನು ಬಿಟ್ಟು ರಸ್ತೆಗಳನ್ನೇ ನೆಚ್ಚಿಕೊಂಡಿದ್ದಾರೆ. ಹೊಲ-ಗದ್ದೆಗಳಲ್ಲಿರುವ ಬೆಳೆಗಳ ರಾಶಿ ಮಾಡುವ ಕಣದಂತೆ ರಸ್ತೆಯ ತುಂಬೆಲ್ಲ ಗೋ ದಿ, ಸದಕ ಹಾಗೂ ವಿವಿಧ ದ್ವಿದಳ ಧಾನ್ಯಗಳ ಬೆಳೆಗಳ ಹುಲ್ಲು ಹಾಕಿ, ರಾಶಿ ಮಾಡುತ್ತಿರುವುದರಿಂದ ವಾಹನ ಚಾಲಕರಿಗೆ ಸುರಕ್ಷತೆಯ ಪ್ರಶ್ನೆ ಎದುರಾಗಿದೆ. ಇದನ್ನು ತಡೆಯುವವರು ಯಾರೂ ಇಲ್ಲವೇ ಎಂಬ ಪ್ರಶ್ನೆಯೂ ಉದ್ಭವವಾಗಿದೆ.

ರಸ್ತೆಯಿಡೀ ಹುಲ್ಲು ಹಾಕುವುದರಿಂದ ಅದನ್ನು ತಪ್ಪಿಸಿಕೊಳ್ಳಲು ಸವಾರರು ರಸ್ತೆ ಪಕ್ಕ ಚಲಿಸಿದಾಗ ಅಪಘಾತಗಳಾಗುವ ಸಂದರ್ಭಗಳನ್ನೂ ಅಲ್ಲಗಳೆಯಲಾಗದು. ಹೀಗಾಗಿ ಸವಾರರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಗಟಾರ ಪಕ್ಕವೇ ವಾಹನ ಓಡಿಸುವ ಪರಿಸ್ಥಿತಿ ಎದುರಾಗಿದೆ.

ಈಗಾಗಲೇ ಇಂತಹ ಹುಲ್ಲಿನ ಮೇಲೆ ದ್ವಿಚಕ್ರ ವಾಹನ ಓಡಿಸಲು ಹೋಗಿ ಹಲವರು ಮೈಯಲ್ಲಾ ಗಾಯ ಮಾಡಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಉದಾಹರಣೆಯಿವೆ. ಅಷ್ಟೇ ಅಲ್ಲದೇ ರಸ್ತೆಯಲ್ಲಿ ರಾಶಿ ಮಾಡುವ ರೈತರು ನಂತರ ಹುಲ್ಲನ್ನು ರಸ್ತೆ ಪಕ್ಕದಲ್ಲಿಯೇ ಎಸೆಯುತ್ತಾರೆ. ಇದರಿಂದ ಸ್ವಲ್ಪ ಗಾಳಿ ಬಿಟ್ಟರೆ ಸಾಕು ಪುಡಿ ಹುಲ್ಲಿನ ಧೂಳು ಸವಾರರ ಕಣ್ಣಲ್ಲಿ ಬಿದ್ದು, ಮತ್ತೊಂದು ಅವಘಡಕ್ಕೆ ಕಾರಣವಾಗುತ್ತಿದೆ.

ಈ ರೀತಿ ರಾಶಿ ಮಾಡಿದ ಧಾನ್ಯ ತಿನ್ನಲು ಎಷ್ಟು ಯೋಗ್ಯ ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತಿದೆ. ಅನೇಕ ಸಂದರ್ಭಗಳಲ್ಲಿ ವಾಹನಗಳು ಹುಲ್ಲಿನ ಮೇಲೆ ಹಾದು ಹೋದಾಗ ಕಾಳುಗಳು ತೆನೆಯಿಂದ ಸಿಡಿದು ಮಣ್ಣು ಪಾಲಾಗುತ್ತವೆ. ಇದನ್ನು ತಡೆಯಲು ರೈತರಿಗೆ ಸಾಧ್ಯವಾಗುವುದೂ ಇಲ್ಲ.

Advertisement

ಮಾರ್ಚ್‌-ಏಪ್ರಿಲ್‌ ತಿಂಗಳಲ್ಲಿ ಸುಮಾರು ವರ್ಷಗಳಿಂದ ಈ ಭಾಗದ ರೈತರು ಹೆದ್ದಾರಿ ಸೇರಿದಂತೆ ಹಲವಾರು ಮುಖ್ಯ ರಸ್ತೆಗಳ ಮೇಲೆ ರಾಶಿ ಮಾಡುವುದು ಕಂಡು ಬರುತ್ತಿದೆ. ಇವರ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಇದು ಏಕೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದು ಸಂಬಂಧಿಸಿದ ಇಲಾಖೆ ಅಧಿ ಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯ ಹೆದ್ದಾರಿ ಮೇಲೆ ಅಪಘಾತಗಳ ಸಂಖ್ಯೆ ಹೆಚ್ಚಾಗುವ ಮುನ್ನ ಸಂಬಂಧಿಸಿದ ಇಲಾಖಾಧಿಕಾರಿಗಳು, ಹಳ್ಳಿಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿಯವರು ರಸ್ತೆ ಮೇಲೆ ರಾಶಿ ಮಾಡುವುದಕ್ಕೆ ಕಡಿವಾಣ ಹಾಕಿ, ಮಾಡುವವರ ಮೇಲೆ ಶೀಘ್ರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎನ್ನುವುದು ನಾಗರಿಕರು ಮತ್ತು ವಾಹನ ಸವಾರರ ಆಗ್ರಹವಾಗಿದೆ.

ಗೋಕಾಕ-ಸವದತ್ತಿ ರಾಜ್ಯ ಹೆದ್ದಾರಿ ಸೇರಿದಂತೆ ತಾಲೂಕಿನ ಬೆಟಗೇರಿ ಗ್ರಾಮದ ಮಾರ್ಗ ಸೇರಿದಂತೆ ಹಲವು ಹಳ್ಳಿಗಳ ಮುಖ್ಯ ರಸ್ತೆಗಳ ಮೇಲೆ ರೈತರು ರಾಶಿ ಮಾಡದಂತೆ ಕಡಿವಾಣ ಹಾಕಲು ಹಾಗೂ ರಾಶಿ ಮಾಡುವವರ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಲು ಪ್ರಯತ್ನಿಸಲಾಗುವುದು.
ರವಿ. ಬಿ.ಕೆ, ಆರ್‌ಟಿಒ ಗೋಕಾಕ

ರಸ್ತೆಗಳ ಮೇಲೆ ರಾಶಿ ಮಾಡದಂತೆ ಸಂಬಂಧಿಸಿದ ಇಲಾಖಾಧಿಕಾರಿಗಳು ಕಡಿವಾಣ ಹಾಕಬೇಕು. ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಅಪಘಾತಗಳ ಸಂಖ್ಯೆ ಹೆಚ್ಚಾಗುವುದರಲ್ಲಿ ಸಂದೇಹವೇ ಇಲ್ಲ.
ಯೂನಿಸ್‌ ನದಾಫ್‌, ವಾಹನ ಸವಾರ

ಅಡಿವೇಶ ಮುಧೋಳ

Advertisement

Udayavani is now on Telegram. Click here to join our channel and stay updated with the latest news.

Next