ಚಾಮರಾಜನಗರ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ನಡೆಸಿದ ದೇಶದ ಹುಲಿ ಸಂರಕ್ಷಿತ ಅರಣ್ಯಗಳ ಪರಿಣಾಮಕಾರಿ ನಿರ್ವಹಣಾ ಮೌಲ್ಯಮಾಪನದಲ್ಲಿ ರಾಜ್ಯದ ನಾಲ್ಕು ಹುಲಿ ಸಂರಕ್ಷಿತ ಅರಣ್ಯಗಳು ಅತ್ಯುತ್ತಮ ರ್‍ಯಾಂಕ್ ಗಳಿಸಿದರೆ, ಒಂದು ಅರಣ್ಯ ಉತ್ತಮ ರ್‍ಯಾಂಕ್ ಪಡೆದಿದೆ.
ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಹಾಗೂ ಭಾರತೀಯ ವನ್ಯಜೀವಿ ಸಂಸ್ಥೆಯ ಸಹಯೋಗದಲ್ಲಿ ನಾಲ್ಕನೇ ಸಾಲಿನ ಮೌಲ್ಯಮಾಪನ ನಡೆಸಿತ್ತು. ಈ ಮೌಲ್ಯಮಾಪನ 2006 ರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಇದರಲ್ಲಿ ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಹುಲಿಗಳ ಸಂರಕ್ಷಣೆಗಾಗಿ ಕೈಗೊಂಡಿರುವ ಕ್ರಮಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ನಾಲ್ಕನೇ ಸುತ್ತಿನಲ್ಲಿ ನಡೆದ (2018) ದೇಶದ 50 ಹುಲಿ ಸಂರಕ್ಷಿತ ಅರಣ್ಯಗಳನ್ನು ಮೌಲ್ಯಮಾಪನ ಮಾಡಲಾಗಿದೆ.
ಮೌಲ್ಯಮಾಪನದಲ್ಲಿ ಶೇ.40ಕ್ಕಿಂತ ಕಡಿಮೆ ಅಂಕ ಪಡೆದ ಅರಣ್ಯಗಳಿಗೆ ಕಳಪೆ, ಶೇ.41 ರಿಂದ 59 ರವರೆಗೆ ಅಂಕಗಳನ್ನು ಪಡೆದವು ಸಾಧಾರಣ, ಶೇ.60 ರಿಂದ 74 ಅಂಕಗಳನ್ನು ಪಡೆದವು ಉತ್ತಮ, ಶೇ.75ಕ್ಕಿಂತ ಹೆಚ್ಚು ಅಂಕ ಪಡೆದ ಅರಣ್ಯಗಳನ್ನು ಅತ್ಯುತ್ತಮ ಎಂದು ಪರಿಗಣಿಸಿ ಗ್ರೇಡ್ ನೀಡಲಾಗಿದೆ. ಗ್ರೇಡ್‌ಗಳಲ್ಲಿ, ಕರ್ನಾಟಕದ ಒಟ್ಟು 5 ಹುಲಿ ರಕ್ಷಿತ ಅರಣ್ಯಗಳಲ್ಲಿ 4 ಅರಣ್ಯಗಳು ಅತ್ಯುತ್ತಮ ಗ್ರೇಡ್ ಪಡೆದಿದ್ದರೆ, ಒಂದು ಅರಣ್ಯ ಉತ್ತಮ ಗ್ರೇಡ್ ಪಡೆದಿದೆ. ಬಂಡೀಪುರ, ನಾಗರಹೊಳೆ, ಭದ್ರಾ, ಅಣಶಿ (ದಾಂಡೇಲಿ) ಅತ್ಯುನ್ನತ ದರ್ಜೆ ಪಡೆದಿದ್ದರೆ, ಬಿಳಿಗಿರಿ ರಂಗನಾಥ ಅರಣ್ಯ (ಬಿಆರ್‌ಟಿ) ಉತ್ತಮ ದರ್ಜೆ ಪಡೆದಿದೆ.
ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತ ಅರಣ್ಯ ಶೇ.87.50ರಷ್ಟು ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಜಿಲ್ಲೆಯ ಇನ್ನೊಂದು ಹುಲಿ ಸಂರಕ್ಷಿತ ಅರಣ್ಯ ಬಿಆರ್‌ಟಿ ಶೇ.74.22ರಷ್ಟು ಅಂಕಗಳನ್ನು ಪಡೆಯುವ ಮೂಲಕ ರಾಜ್ಯದ ಹುಲಿ ಅರಣ್ಯಗಳ ಪೈಕಿ ಕೊನೆಯ ಸ್ಥಾನದಲ್ಲಿದೆ. ಅಣಶಿ (ದಾಂಡೇಲಿ) ಶೇ.84.38 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ, ನಾಗರಹೊಳೆ ಶೇ.81.25 ಅಂಕ ಗಳಿಸಿ ಮೂರನೇ ಸ್ಥಾನ, ಭದ್ರಾ ಅರಣ್ಯ ಶೇ.75 ಅಂಕಗಳ ಮೂಲಕ ನಾಲ್ಕನೇ ಸ್ಥಾನ ಗಳಿಸಿವೆ.
4ನೇ ಕ್ಲಸ್ಟರ್‌ನಲ್ಲಿತ್ತು ಕರ್ನಾಟಕ: ಮೌಲ್ಯಮಾಪನದ ಅನುಕೂಲಕ್ಕಾಗಿ ದೇಶದಲ್ಲಿ 5 ವಿಭಾಗಗಳನ್ನು ಮಾಡಲಾಗಿತ್ತು. 4ನೇ ವಿಭಾಗ (ಕ್ಲಸ್ಟರ್)ದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ಒಟ್ಟು 11 ಹುಲಿ ರಕ್ಷಿತ ಅರಣ್ಯಗಳಿದ್ದವು. ಈ ಎಲ್ಲ 11 ಹುಲಿ ರಕ್ಷಿತ ಅರಣ್ಯಗಳಲ್ಲಿ 10 ಅರಣ್ಯಗಳು ಅತ್ಯುತ್ತಮ ದರ್ಜೆಯ ಅಂಕ ಗಳಿಸಿವೆ. ಉತ್ತಮ ದರ್ಜೆಯಲ್ಲಿರುವುದು ಕರ್ನಾಟಕದ ಬಿಳಿಗಿರಿ ರಂಗನಾಥಸ್ವಾಮಿ ಅರಣ್ಯ ಮಾತ್ರ. (ಶೇ.74.22). ಇಂದು ವೇಳೆ, ಶೇ.75 ಅಂಕಗಳನ್ನು ಗಳಿಸಿದ್ದರೆ ಈ ಅರಣ್ಯವೂ ಅತ್ಯುತ್ತಮ ದರ್ಜೆಗೆ ಪಾತ್ರವಾಗುತ್ತಿತ್ತು. ಕೇವಲ 0.88 ಅಂಕದ ಮೂಲಕ ಅತ್ಯುನ್ನತ ದರ್ಜೆ ತಪ್ಪಿಸಿಕೊಂಡಿದೆ.
ಕೇರಳದ ಪೆರಿಯಾರ್ ಅರಣ್ಯ ಶೇ.93.75 ಅಂಕಗಳನ್ನು ಗಳಿಸುವ ಮೂಲಕ 4ನೇ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ. ತಮಿಳುನಾಡಿನ ಅಣ್ಣಾಮಲೈ ಅರಣ್ಯ ಶೇ.89.06 ಅಂಕಗಳ ಮೂಲಕ 4ನೇ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕದ ಬಂಡೀಪುರ ಅರಣ್ಯ ಶೇ.87.50 ಅಂಕಗಳ ಮೂಲಕ ಮೂರನೇ ಸ್ಥಾನದಲ್ಲಿದೆ. ವಿಪರ್ಯಾಸವೆಂದರೆ, ಬಂಡೀಪುರಕ್ಕೆ ಹೊಂದಿಕೊಂಡಂತೆಯೇ ಇರುವ ತಮಿಳುನಾಡಿನ ಮುದುಮಲೈ ಅರಣ್ಯ ಶೇ.75.78 ಅಂಕಗಳ ಮೂಲಕ 4ನೇ ವಿಭಾಗದಲ್ಲಿ 9ನೇ ಸ್ಥಾನದಲ್ಲಿದೆ.
ಮೌಲ್ಯಮಾಪನಕ್ಕಾಗಿ ದೇಶದ ಒಟ್ಟು ಹುಲಿ ಅರಣ್ಯಗಳನ್ನು ಐದು ಕ್ಲಸ್ಟರ್ (ವಿಭಾಗ)ಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ಕ್ಲಸ್ಟರ್‌ಗಳಿಗೂ ಒಂದು ತಂಡ ಮೌಲ್ಯಮಾಪನ ನಡೆಸಿತ್ತು. ಕರ್ನಾಟಕ, ಕೇರಳ, ತಮಿಳುನಾಡು ಹುಲಿ ಅರಣ್ಯಗಳನ್ನು ನಾಲ್ಕನೇ ಕ್ಲಸ್ಟರ್‌ನಲ್ಲಿ ಸೇರಿಸಲಾಗಿತ್ತು. ಈ ಕ್ಲಸ್ಟರ್‌ನ ತಂಡದ ಮುಖ್ಯಸ್ಥರಾಗಿ ಒರಿಸ್ಸಾ ರಾಜ್ಯದ ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಪಟ್ನಾಯಕ್ ಇದ್ದರು. ಸದಸ್ಯರಾಗಿ ಭಾರತೀಯ ವನ್ಯಜೀವಿ
ಟ್ರಸ್ಟ್‌ನ ಉಪ ನಿರ್ದೇಶಕ ಡಾ.ರತೀನ್ ಬರ್ಮನ್, ಭಾರತೀಯ ವನ್ಯಜೀವಿ ಸಂಸ್ಥೆಯ ವಿಜ್ಞಾನಿಗಳಾದ ಡಾ.ಸೋನಾಲಿ, ಸಾಲ್ವಡೋರ್ ಲಿಂಗ್ಡೋ ಇದ್ದರು.
* ಕೆ.ಎಸ್. ಬನಶಂಕರ ಆರಾಧ್ಯ