Advertisement
ಪೂರ್ಣ ಹೆಸರು ಬೆಂಜಮಿನ್ ಆಂಡ್ರ್ಯೂ ಸ್ಟೋಕ್ಸ್. ಜನಿಸಿದ್ದು 4 ಜೂನ್ 1991ರಂದು. ಜನ್ಮ ಸ್ಥಳ ನ್ಯೂಜಿಲೆಂಡ್ ದೇಶದ ಕ್ರೈಸ್ಟ್ ಚರ್ಚ್ . ತಂದೆ ಗೆರಾರ್ಡ್ ಸ್ಟೋಕ್ಸ್ ಓರ್ವ ರಗ್ಬಿ ಆಟಗಾರರ. ಬಾಲ್ಯವನ್ನು ಕಿವೀಸ್ ನಾಡಿನಲ್ಲಿ ಕಳೆದಿದ್ದ ಸ್ಟೋಕ್ಸ್ ಗೆ 12 ವರ್ಷವಿದ್ದಾಗ ತಂದೆ ಗೆರಾರ್ಡ್ ಇಂಗ್ಲೆಂಡ್ ನ ಕ್ಲಬ್ ಒಂದಕ್ಕೆ ಕೋಚ್ ಆಗೆ ಬರುತ್ತಾರೆ. ಹೀಗೆ ಆಂಗ್ಲರ ನೆಲಕ್ಕೆ ಕಾಲಿಟ್ಟ ಬೆನ್ ಮುಂದೆ ಇಡೀ ಇಂಗ್ಲೆಂಡ್ ಹೆಮ್ಮೆ ಪಡುವಂತಹ ಆಟಗಾರರನಾಗುತ್ತಾನೆ.
Related Articles
Advertisement
ಅದು 2016ರ ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯ. ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 155 ರನ್ ಗಳಿಸಿತ್ತು. ಉತ್ತಮ ಬೌಲಿಂಗ್ ನಿಂದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಅನ್ನು ನಿಯಂತ್ರಿಸಿತ್ತು ಮಾರ್ಗನ್ ಪಡೆ. ಆದರೆ ಕೊನೆಯ ಓವರ್ ನಲ್ಲಿ ಬೇಕಾಗಿತ್ತು 19 ರನ್. ಚೆಂಡು ಮತ್ತದೇ ಬೆನ್ ಸ್ಟೋಕ್ಸ್ ಕೈಯಲ್ಲಿ. ಕ್ರೀಸ್ ನಲ್ಲಿ ಬ್ರಾಥ್ ವೇಟ್. ಇಂಗ್ಲೆಂಡ್ ಚುಟುಕು ವಿಶ್ವಕಪ್ ಎತ್ತುವ ಕನಸು ಕಾಣುವಂತೆ ಬ್ರಾಥ್ ವೇಟ್ ಮೊದಲ ನಾಲ್ಕು ಎಸೆತಕ್ಕೆ ನಾಲ್ಕನ್ನೂ ಸಿಕ್ಸರ್ ಗೆ ಅಟ್ಟಿ ಇಂಗ್ಲೆಂಡ್ ಕೈಯಿಂದ ವಿಶ್ವಕಪ್ ಕಸಿದಿದ್ದ. ಅದು ನಿಜಕ್ಕೂ ಬೆನ್ ಕ್ರಿಕೆಟ್ ಜೀವನದ ಕರಾಳ ದಿನವಾಗಿತ್ತು.
ವಿಶ್ವ ವೀರ
ಇಂಗ್ಲೆಂಡ್ ನೆಲದಲ್ಲಿ ನಡೆದಿದ್ದ 2019ರ ವಿಶ್ವಕಪ್. ಟ್ರೋಫಿ ಗೆಲ್ಲುವ ಫೇವರೇಟ್ ಗಳಾಗಿದ್ದ ಮಾರ್ಗನ್ ಪಡೆಗೆ ಫೈನಲ್ ನಲ್ಲಿ ಎದುರಾಗಿದ್ದು ನ್ಯೂಜಿಲ್ಯಾಂಡ್. ಕಿವೀಸ್ ನೀಡಿದ 242 ರನ್ ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಗೆ ಆರಂಭದಲ್ಲಿಯೇ ಆಘಾತ ಎದುರಾಗಿತ್ತು. ಸಂಪೂರ್ಣ ಕೂಟದಲ್ಲಿ ಉತ್ತಮವಾಗಿ ಆಡಿದ್ದವರೆಲ್ಲಾ ಅಂದು ಭಾರವಾದ ಹೆಜ್ಜೆಯೊಂದಿಗೆ ಪೆವಿಲಿಯನ್ ಕಡೆಗೆ ನಡೆದಿದ್ದರು. ಒಂದು ಹಂತದಲ್ಲಿ 19.3 ಓವರ್ ನಲ್ಲಿ 71 ರನ್ ಗೆ 3 ವಿಕೆಟ್ ಕಳೆದುಕೊಂಡಾಗ ಮೈದಾನಕ್ಕೆ ಆಗಮಿಸಿದ್ದು ಬೆಂಜಿಮಿನ್ ಆಂಡ್ರೂ ಸ್ಟೋಕ್ಸ್. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಧೃತಿಗೆಡದೆ ಅಂತಿಮ ಎಸೆತದವರೆಗೆ ಆಡಿದರು. ಕೊನೆಯ ಓವರದ ನಲ್ಲಿ ಬೇಕಿತ್ತು 15 ರನ್. ಕೆಲವು ಅನಪೇಕ್ಷಿತ ಘಟನೆಗಳ ಹೊರತಾಗಿಯೂ ಸ್ಟೋಕ್ಸ್ 14 ರನ್ ಗಳಿಸಿಬಿಟ್ಟರು. ಅಂದರೆ ಮ್ಯಾಚ್ ಟೈ. ನಂತರ ಸೂಪರ್ ಓವರ್ ನಲ್ಲಿ ಇಂಗ್ಲೆಂಡ್ ಗಳಿಸಿದ್ದ 15 ರನ್ ನಲ್ಲಿ 8 ರನ್ ಸ್ಟೋಕ್ಸ್ ಗಳಿಸಿದ್ದರು.
ಫೈನಲ್ ಪಂದ್ಯದ ಫೈನಲ್ ಓವರ್ ನಲ್ಲಿ ನಡೆದ ಅನಪೇಕ್ಷಿತ ಘಟನೆಗೆ ( ಗಪ್ಟಿಲ್ ಎಸೆದ ಚೆಂಡು ಸ್ಟೋಕ್ಸ್ ಬ್ಯಾಟ್ ತಾಗಿ ಬೌಂಡರಿಗೆ ಹೋಗಿತ್ತು) ಸ್ಟೋಕ್ಸ್ ಮೈದಾನದಲ್ಲಿಯೇ ಕ್ಷಮೆ ಕೇಳಿದ್ದರು. ಪಂದ್ಯದ ನಂತರವೂ ಈ ಘಟನೆಗಾಗಿ ನಾನು ಕ್ಷಮೆ ಕೇಳುತ್ತಲೇ ಇರುತ್ತೇನೆ ಎಂದಿದ್ದರು. ಅಂದು ಕಪ್ ನೊಂದಿಗೆ ವಿಶ್ವದ ಮನಸ್ಸನ್ನು ಗೆದ್ದಿದ್ದರು ಬೆನ್.
ಕೀರ್ತನ್ ಶೆಟ್ಟಿ ಬೋಳ