Advertisement

Channapatna doll: ಚನ್ನಪಟ್ಟಣ ಬೊಂಬೆ ಉದ್ಯಮಕ್ಕೆ ಬೆಸ್ಕಾಂ ಶಾಕ್‌

12:36 PM Oct 17, 2023 | Team Udayavani |

ರಾಮನಗರ: ದಸರಾ ಸಮಯದಲ್ಲಿ ವಿಶ್ವವಿಖ್ಯಾತ ಚನ್ನಪಟ್ಟಣದ ಬೊಂಬೆಗಳಿಗೆ ಒಳ್ಳೆಯ ಮಾರುಕಟ್ಟೆ ಸಿಗುತ್ತದೆ ಎಂದು ನಿರೀಕ್ಷಿಸಿದ್ದ ಬೊಂಬೆ ತಯಾರಕರಿಗೆ ಇದೀಗ ವಿದ್ಯುತ್‌ ಶಾಕ್‌ ಎದುರಾಗಿದೆ.

Advertisement

ಹೌದು.., ಅಸಮರ್ಪಕ ವಿದ್ಯುತ್‌ ಪೂರೈಕೆ, ಪದೆ ಪದೇ ವಿದ್ಯುತ್‌ ಸಂಪರ್ಕ ಕಡಿತವಾಗುತ್ತಿರುವುದರಿಂದ ಬೊಂಬೆ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದು, ಘಟಕಗಳಲ್ಲಿ ಯಂತ್ರಗಳನ್ನು ಚಾಲು ಮಾಡಲಾಗದೆ ಕೈಕಟ್ಟಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಸುಗಟ್ಟಲೆ ವಿದ್ಯುತ್‌ ಕಣ್ಣಾ ಮುಚ್ಚಾಲೆ ಯಿಂದಾಗಿ ಅರ್ಧ ದಷ್ಟು ಕೆಲಸ ಮಾಡಲಾಗದೆ ಬೊಂಬೆ ತಯಾರಕರು ಕಂಗಾಲಾಗಿದ್ದಾರೆ.

2ರಿಂದ 3 ತಾಸು ವಿದ್ಯುತ್‌ ಕಡಿತ: ಚನ್ನಪಟ್ಟಣದಲ್ಲಿ ಕ್ರಾಪ್ಟ್ ಪಾರ್ಕ್‌ ಜೊತೆಗೆ ಮುನಿಯಪ್ಪನದೊಡ್ಡಿ, ಕೋಟೆ, ಕಲಾನಗರ, ನೀಲಸಂದ್ರ ಹಾಗೂ ಮದೀನಾ ಚೌಕ್‌, ಹಳೇ ಡೇರಾ, ಅಪ್ಪರ್‌ ಡೇರಾದಲ್ಲಿ ಬೊಂಬೆ ತಯಾರಿಸುವ ಘಟಕಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಬೆಸ್ಕಾಂ ಬೆಳಗಿನ ವೇಳೆ ಅನಧಿಕೃತ ಲೋಡ್‌ ಶೆಡ್ಡಿಂಗ್‌ ಆರಂಭಿ ಸಿದ್ದು, 2 ರಿಂದ 3 ತಾಸುಗಳ ಕಾಲ ವಿದ್ಯುತ್‌ ಕಡಿತ ಮಾಡುತ್ತಿದೆ.

ಇನ್ನು ಕೆಲವೊಮ್ಮೆ ಆಗಾಗ್ಗ ವಿದ್ಯುತ್‌ ಕಡಿತವಾಗುತ್ತಿರುತ್ತದೆ. ಇದರಿಂದಾಗಿ ಬೊಂಬೆ ತಯಾರಿಕಾ ಘಟಕಗಳಲ್ಲಿ ಸರಾಗವಾಗಿ ಕೆಲಸ ಸಾಗದೆ ತಯಾರಿಕಾ ಘಟಕಗಳು ನಲುಗುತ್ತಿವೆ. ನಷ್ಟದ ಹಾದಿಯಲ್ಲಿ ಉದ್ಯಮಿಗಳು: ಕೋವಿಡ್‌ ನಂತರ ಚನ್ನಪಟ್ಟಣದ ಬೊಂಬೆಗಳ ಮಾರುಕಟ್ಟೆ ಸುಧಾರಿಸುತ್ತಿದ್ದು, ಇತ್ತೀಚಿಗೆ ಉತ್ತಮ ಬೇಡಿಕೆ ಸಹ ಬರುತ್ತಿದೆ. ದಸರಾ ಸಮಯದಲ್ಲಿ ಬೊಂಬೆಗಳನ್ನು ಕೂರಿಸುವವರ ಜೊತೆಗೆ ಪ್ರವಾಸಿಗರು ಸಹ ಬೊಂಬೆಗಳನ್ನು ಖರೀದಿ ಮಾಡುವುದರಿಂದ ಈ ಸಮಯದಲ್ಲಿ ಬೇಡಿಕೆ ಸ್ವಲ್ಪ ಹೆಚ್ಚಿ ರುತ್ತದೆ. ಆದರೆ, ಈ ಸಮಯದಲ್ಲೇ ವಿದ್ಯುತ್‌ ಕೊರತೆ ಎದುರಾಗುತ್ತಿರು ವುದು ಬೊಂಬೆ ಉದ್ಯಮಿಗಳು ನಷ್ಟದ ಹಾದಿಯಲ್ಲಿ ಸಾಗುವಂತೆ ಮಾಡಿದೆ.

ಬೊಂಬೆ ತಯಾರಿಕಾ ಘಟಕದಲ್ಲಿ ಕೆಲಸ ಮಾಡಲು ಬರುವ ಕುಶಲಕರ್ಮಿಗಳು ವಿದ್ಯುತ್‌ ಇಲ್ಲದೆ ಸುಮ್ಮನೆ ಕೂರುವಂತಾಗಿದೆ. ತಾಸುಗಟ್ಟಲೆ ಕಾರ್ಮಿಕರನ್ನು ಸುಮ್ಮನೆ ಕೂರಿಸಿ ಕೂಲಿಕೊಡುವ ಪರಿಸ್ಥಿತಿ ತಯಾರಿಕಾ ಘಟಕಗಳ ಮಾಲೀಕರಿಗೆ ಎದುರಾಗಿದೆ. ಕೂಲಿ ಕೊಡದೆ ಹೋದರೆ ಕಾರ್ಮಿಕರು ಸಿಗುವುದಿಲ್ಲ. ಸುಮ್ಮನೆ ಕೂರಿಸಿ ಕೂಲಿ ನೀಡಿದರೆ ನಷ್ಟವನ್ನು ಹೊಂದಿಸಲಾಗು ವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣಗೊಂಡಿದೆ.

Advertisement

ಉತ್ಪಾದನೆ ಕುಸಿತ: ವಿದ್ಯುತ್‌ ಕೊರತೆಯಿಂದಾಗಿ ಬೊಂಬೆಗಳ ಉತ್ಪಾದನೆ ಕುಸಿದಿದೆ. ಪ್ರತಿದಿನ 5 ರಿಂದ 8 ಸಾವಿರ ಯುನಿಟ್‌ ಬೊಂಬೆಗಳನ್ನು ತಯಾರು ಮಾಡಲಾಗುತಿತ್ತು. ಇದೀಗ ವಿದ್ಯುತ್‌ ಕೊರತೆಯಿಂದಾಗಿ 3 ರಿಂದ 4 ಸಾವಿರ ಯುನಿಟ್‌ ಬೊಂಬೆಗಳನ್ನು ತಯಾರಿಸಿದರೆ ಹೆಚ್ಚು ಎಂಬಂತ ಪರಿಸ್ಥಿತಿ ನಿರ್ಮಾಣ ಗೊಂಡಿದೆ. ಬೊಂಬೆಗಳಿಗೆ ಹೆಚ್ಚಿನ ಬೇಡಿಕೆ ಇರುವ ನವರಾತ್ರಿ ಸಮಯದಲ್ಲೇ ಈರೀತಿ ಆದರೆ, ಮುಂದೆ ಏನು ಮಾಡುವುದು ಎಂಬ ಪ್ರಶ್ನೆ ಕರಕುಶಲ ಕರ್ಮಿಗಳನ್ನು ಕಾಡಲಾರಂಭಿಸಿದೆ.

ನಿರಂತರ ಸಮಸ್ಯೆಗಳಿಂದಾಗಿ ಕುಶಲಕರ್ಮಿಕಗಳು ಉದ್ಯಮವನ್ನೇ ಬಿಡುತ್ತಿದ್ದು, ಉದ್ಯಮವನ್ನು ನಡೆಸಿ ಕೈ ಸುಟ್ಟುಕೊಳ್ಳುವ ಬದಲು ಬೇರೆಕೆಲಸ ನೋಡಿ ಕೊಳ್ಳೋಣ ಎಂಬ ಪರಿಸ್ಥಿತಿಗೆ ತಲುಪು ತ್ತಿದ್ದಾರೆ. ವಿದ್ಯುತ್‌ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬೊಂಬೆ ಉದ್ಯಮದ ರಕ್ಷಣೆಗೆ ಸರ್ಕಾರ ಮುಂದಾಗ ಬೇಕಿದೆ.

ದುಬಾರಿ ವಿದ್ಯುತ್‌ ಶುಲ್ಕದ ಹೊರೆ : ಒಂದೆಡೆ ವಿದ್ಯುತ್‌ ಕಡಿತದಿಂದ ಬೊಂಬೆ ಉದ್ಯಮದಕ್ಕೆ ಸಮಸ್ಯೆ ಎದುರಾಗಿದ್ದರೆ ಮತ್ತೂಂದೆಡೆ ಬೊಂಬೆ ತಯಾರಿಕಾ ಘಟಕಗಳ ವಿದ್ಯುತ್‌ ಶುಲ್ಕ ಹೆಚ್ಚಳವಾಗಿರುವುದು ಉದ್ಯಮಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಿಂದೆ ಬರುತ್ತಿದ್ದ ವಿದ್ಯುತ್‌ ಬಿಲ್‌ ಗಿಂತ ಶೇ.50ರಷ್ಟು ಬಿಲ್‌ ಮೊತ್ತವನ್ನು ಹೆಚ್ಚಿಸಲಾಗಿದೆ. ಬೊಂಬೆ ತಯಾರಿಕಾ ಘಟಕಗಳಿಗೆ ವಾಣಿಜ್ಯ ದರದಲ್ಲಿ ವಿದ್ಯುತ್‌ ಶುಲ್ಕ ವಿಧಿಸುತ್ತಿದ್ದು, ಹಿಂದೆ 1500 ರೂ.ಬರುತ್ತಿದ್ದ ವಿದ್ಯುತ್‌ ಶುಲ್ಕ ಇದೀಗ 2200 ರಿಂದ 2400 ರೂ.ವರೆಗೆ ಬರುತ್ತಿದೆ. ದುಬಾರಿ ವಿದ್ಯುತ್‌ ಶುಲ್ಕ ಸಹ ಕುಶಲಕರ್ಮಿಗಳಿಗೆ ಹೊರೆಯಾಗಿ ಪರಿಣಮಿಸಿದೆ. ಸಾಂಪ್ರದಾಯಿಕ ಬೊಂಬೆ ತಯಾರಿಕಾ ಘಟಕಗಳಿಗೆ ಸರ್ಕಾರ ರಿಯಾಯ್ತಿ ದರದಲ್ಲಿ ವಿದ್ಯುತ್‌ ಪೂರೈಕೆ ಮಾಡಬೇಕು ಎಂದು ಬೊಂಬೆ ತಯಾರಕರು ಆಗ್ರಹಿಸಿದ್ದಾರೆ.

ಕಳೆದೊಂದು ವಾರದಿಂದ ವಿದ್ಯುತ್‌ ಕಡಿತ ಹೆಚ್ಚಾಗಿದೆ. ನಾವು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ದಸರಾ ಸಮಯದಲ್ಲಿ ನಮ್ಮ ಬೊಂಬೆಗಳಿಗೆ ಹೆಚ್ಚಿನ ಆರ್ಡರ್‌ ಇರುತ್ತದೆ. ಈ ಸಮಯದಲ್ಲೇ ಹೀಗಾದರೆ ನಾವು ಮಾಡುವುದೇನು. ಒಂದೆಡೆ ವಿದ್ಯುತ್‌ ಕೊಡದೆ ನಮಗೆ ತೊಂದರೆ ಮಾಡುತ್ತಿರುವ ಬೆಸ್ಕಾಂ ಮತ್ತೂಂದೆಡೆ ಬೆಲೆ ಹೆಚ್ಚಳ ಮಾಡಿದೆ. ಇದರಿಂದಾಗಿ ಬೊಂಬೆ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಪ್ರತಿದಿನ ಸಾವಿರಾರು ರೂ. ನಷ್ಟವಾಗುತ್ತಿದೆ.ಒಪ್ಪಿಕೊಂಡಿರುವ ಆರ್ಡರ್‌ಗಳನ್ನು ಪೂರೈಸಲು ಆಗುತ್ತಿಲ್ಲ. – ರಾಜು, ಮುನಿಯಪ್ಪನದೊಡ್ಡಿ, ಕುಶಲಕರ್ಮಿ

– ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next