ಅಮೀನಗಡ: “ಸರ್, ನನ್ನ ಪುಸ್ತಕ ಚೆಕ್ ಮಾಡ್ರಿ, ನನ್ನ ಅಕ್ಷರ ಚೆಕ್ ಮಾಡ್ರಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮಕ್ಕಳು ದುಂಬಾಲು ಬಿದ್ದ ದೃಶ್ಯ ಹೊನ್ನರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಡು ಬಂತು.
ಹುನಗುಂದ ಕ್ಷೇತ್ರ ಶಿಕ್ಷಣಾಧಿ ಕಾರಿ ಮಹಾದೇವ ಬೆಳ್ಳಣ್ಣವರ ಹೊನ್ನರಹಳ್ಳಿ ಪ್ರಾಥಮಿಕ ಶಾಲೆ ಪ್ರಗತಿ ಪರಿಶೀಲನೆಗೆ ಭೇಟಿ ನೀಡಿದ ಸಂದರ್ಭದಲ್ಲಿ 1, 2 ಮತ್ತು 3ನೇ ತರಗತಿ ನಲಿಕಲಿ ಮಕ್ಕಳ ಬರವಣಿಗೆ ಪರಿಶೀಲಿಸುವಾಗ ಮಕ್ಕಳು ನಾ ಮುಂದು..ತಾ ಮುಂದು.. ಎಂದು ಶಿಕ್ಷಣಾ ಧಿಕಾರಿಗಳನ್ನು ಸುತ್ತುವರಿದರು.
ಆಗ ಶಿಕ್ಷಕರು ಮಕ್ಕಳನ್ನು ನಿಯಂತ್ರಿಸಲು ಮುಂದಾದಾಗ ಮುಗ್ಧತೆ ಮಕ್ಕಳ ಮೊದಲ ಲಕ್ಷಣ. ಅವರು ಸ್ವತಂತ್ರರು, ಯಾವುದೇ ಬಂಧನ, ಮುಲಾಜು ಅವರಿಗಿಲ್ಲ. ತಮಗನಿಸಿದ್ದನ್ನು ನೇರವಾಗಿ ಹೇಳುವ ಮತ್ತು ಕೇಳುವ ಸ್ವಭಾವ ಅವರದ್ದು ಎಂದು ಬಿಇಒ ಬೆಳ್ಳಣ್ಣವರ ಹೇಳಿದರು.
ಮಕ್ಕಳೊಂದಿಗೆ ಸಂವಾದ ನಡೆಸುತ್ತ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತ ಮಾತನಾಡಿದ ಬಿಇಒ ಬೆಳ್ಳಣ್ಣವರ, ಒಂದು ಮುಕ್ಕಾಲು ವರ್ಷ ಭೌತಿಕ ತರಗತಿಗಳಿಂದ ದೂರವಿದ್ದ ಮಕ್ಕಳು ಈಗ ಶಾಲೆಗೆ ಪ್ರವೇಶ ಮಾಡಿರುವುದರಿಂದ ಶಾಲೆಯಲ್ಲಿ ಮಕ್ಕಳ ಕಲರವ ಕೇಳಿಸುತ್ತಿದೆ ಎಂದರು.
ಇಸಿಒ ಸಿದ್ದು ಪಾಟೀಲ ಮಾತನಾಡಿ, ಮಕ್ಕಳ ಕಲಿಕೆ ಗಟ್ಟಿಗೊಳಿಸಲು ವಿಭಿನ್ನ ಚಟುವಟಿಕೆಗಳ ಮೂಲಕ ಬೋಧನೆ ಮಾಡಬೇಕು. ಸ್ಮಾರ್ಟ್ ಕ್ಲಾಸ್ ಸಮರ್ಪಕವಾಗಿ ಬಳಸಿಕೊಂಡು ಆಕರ್ಷಕ ಕಲಿಕಾ ವಾತಾವರಣ ಸೃಷ್ಟಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಶಾಲೆ ಭೌತಿಕ ಸೌಲಭ್ಯ, ಮಕ್ಕಳ-ಶಿಕ್ಷಕರ ಹಾಜರಾತಿ, ಕಲಿಕಾ ಮಟ್ಟ ಗಮನಿಸಿದ ಬಿಇಒ ತಂಡ ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿತು.
ಈ ವೇಳೆ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದು ಶೀಲವಂತರ, ಮುಖ್ಯ ಗುರು ಎ.ಐ. ಕಂಬಳಿ, ಶಿಕ್ಷಕರಾದ ಎಸ್.ಜಿ. ಪಾಟೀಲ, ಎಸ್. ಎಸ್. ಲಾಯದಗುಂದಿ, ಅಶೋಕ ಬಳ್ಳಾ, ಬಿ.ಬಿ. ವಾಲಿಕಾರ, ಕಿರಣ ವಜ್ರಮಟ್ಟಿ ಇತರರಿದ್ದರು.