Advertisement

ಬೆಂಕೋಶ್ರೀ ಹೊಸ ಇನ್ನಿಂಗ್ಸ್‌

11:13 AM Sep 25, 2018 | |

ನಿರ್ಮಾಪಕ ಬಿ.ಕೆ.ಶ್ರೀನಿವಾಸ್‌ (ಬೆಂಕೋಶ್ರೀ) ಈಗ ಹೊಸ ಇನ್ನಿಂಗ್ಸ್‌ಗೆ ರೆಡಿಯಾಗಿದ್ದಾರೆ. ಸಿನಿಮಾ ಅವರಿಗೆ ಹೊಸದೇನಲ್ಲ. 1982 ರಲ್ಲೇ ಅವರು “ಭಕ್ತ ಕುಂಬಾರ’ ಚಿತ್ರ ವಿತರಣೆ ಮಾಡಿದ್ದರು. ಅದಾದ ಬಳಿಕ “ಜೋಗಯ್ಯ’ ಚಿತ್ರವನ್ನೂ ವಿತರಣೆ ಮಾಡಿದ್ದರು. ಇದರೊಂದಿಗೆ 6 ಚಿತ್ರಗಳನ್ನೂ ನಿರ್ಮಿಸಿದ್ದಾರೆ. ಆ ಮೂಲಕ ಹೊಸಬರಿಗೆ ಅವಕಾಶ ಕಲ್ಪಿಸಿದ ಖುಷಿ ಅವರದು. ಈಗ ಹೊಸ ವಿಷಯವೆಂದರೆ, ಗ್ಯಾಪ್‌ ತೆಗೆದುಕೊಂಡಿದ್ದ ಬೆಂಕೋಶ್ರೀ, ಮತ್ತೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

Advertisement

ಅಷ್ಟೇ ಆಗಿದ್ದರೆ, ಹೇಳುವ ಅಗತ್ಯವಿರಲಿಲ್ಲ. ಬೆಂಕೋಶ್ರೀ ತಮ್ಮ ಹರ್ಷ ಪ್ರೊಡಕ್ಷನ್‌ ಬ್ಯಾನರ್‌ ಹೆಸರು ಹಾಗೂ ಲೋಗೋವನ್ನು ಬದಲಿಸಿ, ಹೊಸ ಹೆಸರಿನ ಬ್ಯಾನರ್‌ಗೆ ಚಾಲನೆ ಕೊಟ್ಟಿದ್ದಾರೆ. ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ನಿರ್ಧಾರವನ್ನೂ ಮಾಡಿದ್ದಾರೆ. ಸೋಮವಾರ “ಬೆಂಕೋಶ್ರೀ ಫಿಲ್ಮ್ ಫ್ಯಾಕ್ಟರಿ’ ಹೆಸರಿನ ಬ್ಯಾನರ್‌ಗೆ ನಿರ್ದೇಶಕ ಯೋಗರಾಜ್‌ಭಟ್‌ ಚಾಲನೆ ನೀಡಿ ಶುಭಹಾರೈಸಿದರು. ಬೆಂಕೋಶ್ರೀ ಪುತ್ರ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಾಣಲಿ ಎಂದು ಶುಭಕೋರಿದರು.

ಈ ವೇಳೆ ಬೆಂಕೋಶ್ರೀ ಹೇಳಿದ್ದು ಹೀಗೆ. “2007 ರ ಸೆಪ್ಟೆಂಬರ್‌ನಲ್ಲಿ ನಾನು ಇಂಡಸ್ಟ್ರಿಗೆ ನಿರ್ಮಾಪಕನಾಗಿ ಕಾಲಿಟ್ಟೆ. ಈಗ 2018 ರ ಸೆಪ್ಟೆಂಬರ್‌ನಲ್ಲಿ ಮಗನನ್ನು ಇಂಡಸ್ಟ್ರಿಗೆ ಪರಿಚಯಿಸುತ್ತಿದ್ದೇನೆ. ಈ ಮೂಲಕ ಹೊಸ ಬಗೆಯ ಚಿತ್ರಗಳನ್ನೂ ಶುರು ಮಾಡಬೇಕೆಂಬ ಆಸೆ ಇದೆ. ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ಪುತ್ರ ಹರ್ಷನ ಹೆಸರನ್ನೂ ಸಹ ಬದಲಿಸಿದ್ದೇನೆ. ಇನ್ನು ಮುಂದೆ “ಅಕ್ಷರ್‌’ ಹೆಸರಿನಲ್ಲಿ ಮಗ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲಿದ್ದಾನೆ.

ಅಕ್ಷರ್‌ ಒಬ್ಬ ನಾಯಕನಿಗೆ ಏನೆಲ್ಲಾ ಅರ್ಹತೆ ಇರಬೇಕೋ ಅದೆಲ್ಲವನ್ನೂ ಪರಿಪೂರ್ಣವಾಗಿ ಕಲಿತು ಬಂದಿದ್ದಾನೆ. ರಂಗಭೂಮಿ ತರಬೇತಿ ಪಡೆದು, ಸಾಹಸ, ಡ್ಯಾನ್ಸು ಸೇರಿದಂತೆ ತಾಂತ್ರಿಕತೆಯಲ್ಲೂ ತರಬೇತಿ ಪಡೆದಿದ್ದಾನೆ. ಸದ್ಯಕ್ಕೆ ಅಕ್ಷರ್‌ ಸಿನಿಮಾಗೆ ಬರಲಿದ್ದಾನೆ. ಆದರೆ, ಕಥೆ ಯಾವುದು, ನಿರ್ದೇಶಕ ಯಾರು, ಸಿನಿಮಾ ಯಾವಾಗ ಶುರುವಾಗಲಿದೆ ಎಂಬುದನ್ನು ಮುಂದಿನ ದಿನದಲ್ಲಿ ವಿವರಿಸುತ್ತೇನೆ. ಮಗ ಅಕ್ಷರ್‌ನನ್ನು ಪ್ರೋತ್ಸಾಹಿಸುವ ಮೂಲಕ ಕನ್ನಡ ಇಂಡಸ್ಟ್ರಿಯಲ್ಲಿ ನೆಲೆಯೂರಲು ನಿಮ್ಮ ಸಹಕಾರ ಅಗತ್ಯ’ ಎಂದರು ಬೆಂಕೋಶ್ರೀ.

ಬಿಎಸ್ಸಿ ಮಲ್ಟಿಮೀಡಿಯಾ ಓದಿಕೊಂಡಿರುವ ಅಕ್ಷರ್‌ಗೆ ಚಿಕ್ಕಂದಿನಿಂದ ನಟನಾಗುವ ಆಸೆ ಇರಲಿಲ್ಲವಂತೆ. ಕಳೆದ ಮೂರು ವರ್ಷಗಳ ಹಿಂದಷ್ಟೇ ಅವರ ತಂದೆ ಬಳಿ ನಾನು ಹೀರೋ ಆಗಬೇಕು ಎಂಬ ಆಸೆ ವ್ಯಕ್ತಪಡಿಸಿದರಂತೆ. ಸುಮ್ಮನೆ ಹೀರೋ ಆಗುವುದು ಕಷ್ಟ. ಮೊದಲು ನಟನೆ ಸೇರಿದಂತೆ ಹಲವು ವಿಭಾಗದಲ್ಲಿ ತರಬೇತಿ ಪಡೆಯಬೇಕು ಎಂಬ ಅಪ್ಪನ ಸಲಹೆ ಮೇರೆಗೆ, ಅಕ್ಷರ್‌, ರಂಗಭೂಮಿಯಲ್ಲಿ ಉದಯ್‌ ಸೋಸಲೆ ಬಳಿ ನಟನೆ ತರಬೇತಿ ಪಡೆದು ಚಿದಂಬರಂ ಜಂಬೆ ಅವರ ನಿರ್ದೇಶನದ ಒಂದು ನಾಟಕದಲ್ಲೂ ನಟಿಸಿ,

Advertisement

ಆ ನಂತರ ಮಾಡೆಲಿಂಗ್‌ ಕ್ಷೇತ್ರದಲ್ಲೂ ಧುಮುಕಿ, ಅಲ್ಲೂ ಸಹ ದೆಹಲ್ಲಿಯಲ್ಲಿ 2017 ರಲ್ಲಿ ಮಾಡೆಲಿಂಗ್‌ ಸ್ಪರ್ಧೆಯಲ್ಲಿ ಮಿಸ್ಟರ್‌ ಇಂಡಿಯಾ ಪಫೆಕ್ಟ್ ವಾಕ್‌ ಅವಾರ್ಡ್‌ ಪಡೆದಿದ್ದಾರೆ. ಅಷ್ಟೇ ಅಲ್ಲ, ಮಾರ್ಷಲ್‌ ಆರ್ಟ್ಸ್ ಕಲಿತು, ಈಗ ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.  ಬೆಂಕೋಶ್ರೀ ಅವರ ಹೊಸ ಬ್ಯಾನರ್‌ ಅಕ್ಷರ್‌ ಅವರ ಹೊಸ ಐಡಿಯಾದಿಂದ ರೂಪುಗೊಂಡಿದೆ. ಫೀನಿಕ್ಸ್‌ ಬರ್ಡ್‌ ಇಟ್ಟುಕೊಂಡು ಅವರೊಂದು ಲೋಗೋ ಮಾಡಿ, ಅದನ್ನೇ ಹೊಸ ಬ್ಯಾನರ್‌ಗೆ ಅಳವಡಿಸಿದ್ದಾರೆ. ಆ ಲೋಗೋ ಅರ್ಥ ಹೇಳುವ ಅಕ್ಷರ್‌, “ನಮ್ಮ ಬ್ಯಾನರ್‌ನಲ್ಲಿ ಮಾಡಿದ ಚಿತ್ರಗಳು ಸೋಲು ಕಂಡಿವೆ.

ಹಾಗಂತ ನಾವು ಬದುಕಿನಲ್ಲಿ ಸೋಲು ಕಾಣಬಾರದು. ಫೀನಿಕ್ಸ್‌ನಂತೆ ಎದ್ದೇಳಬೇಕು ಎಂಬ ಛಲದಿಂದ ಫೀನಿಕ್ಸ್‌ ಬರ್ಡ್‌ ಇಟ್ಟುಕೊಂಡು ಲೋಗೋ ಮಾಡಿ, ಆ ಮೂಲಕ ಹೊಸ ಚಿತ್ರ ನಿರ್ಮಾಣ ಸೇರಿದಂತೆ ಒಂದಷ್ಟು ಹೊಸ ಕೆಲಸಗಳನ್ನು ಮಾಡುವ ಯೋಚನೆ ಇದೆ’ ಎನ್ನುತ್ತಾರೆ ಅಕ್ಷರ್‌. ಅಂದಹಾಗೆ, ಬೆಂಕೋಶ್ರೀ ಪುತ್ರ ಅಕ್ಷರ್‌ ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದೊಳಗೆ ಹೊಸ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಮಗನನ್ನು ಪರಿಚಯಿಸಬೇಕೆಂದು ಪತ್ನಿ ಮಂಗಳ ಸಮೇತ ಆಗಮಿಸಿದ್ದ ಬೆಂಕೋಶ್ರೀ, ಹೊಸಬರಿಗೆ ಅವಕಾಶ ಕೊಡುವ ಹುಮ್ಮಸ್ಸಿನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next