ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ ಗಳ ಕಳೆದ ಆರು ದಿನಗಳ ಕಾರ್ಯಾಚರಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಉಗಾಂಡ ದೇಶದ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತು ಹೆರಾಯಿನ್ ಮತ್ತು ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:- ಸಮರ ಕಲೆಯನ್ನುಜೀವಂತವಾಗಿರಿಸಿದ ಕೇರಳದ 78ರ ವೃದ್ಧೆ!
ಉಗಾಂಡ ಮೂಲದ ಮಹಿಳೆ ಬಂಧನ: ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತು ಹೆರಾಯಿನ್ ಅನ್ನು ಬೆಂಗಳೂರಿಗೆ ತಂದಿದ್ದ ಉಗಾಂಡ ಮೂಲದ ಮಹಿಳೆಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಮತ್ತು ಕಸ್ಟಮ್ಸ್ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಆಕೆಯಿಂದ 28 ಕೋಟಿ ರೂ. ಮೌಲ್ಯದ ನಾಲ್ಕು ಕೆ.ಜಿ. ಶೇ.100 ರಷ್ಟು ಶುದ್ಧ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಕೀನ್ಯಾದಿಂದ ದುಬೈಗೆ ಅಲ್ಲಿಂದ ಬೆಂಗಳೂರಿಗೆ ಸೆ.28ರಂದು ಮಹಿಳೆ ಬಂಧಿದ್ದರು. ಆಕೆ ದುಬೈನಿಂದ ಹೊರಟಾಗಲೇ ಡಿಆರ್‌ಐ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಸಿಕ್ಕಿತ್ತು. ನಂತರ ಈಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಮೊದಲೇ ತನಿಖಾಧಿಕಾರಿಗಳು ನಿಲ್ದಾಣದಲ್ಲಿ ಬಿಡು ಬಿಟ್ಟು, ಆಕೆಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ವೈದ್ಯಕೀಯ ವೀಸಾ ಪಡೆದು ಬಂದಿರುವುದಾಗಿ ಹೇಳಿದ್ದಳು. ಅನಂತರ ಈಕೆಯ ಬ್ಯಾಗ್ ಪರಿಶೀಲಿಸಿದಾಗ, ಮೂರು ಕಡೆಗಳಲ್ಲಿ ಹೆರಾಯಿನ್ ತುಂಬಿದ ಸಣ್ಣ-ಸಣ್ಣ ಪೊಟ್ಟಣಗಳು ಪತ್ತೆಯಾಗಿದೆ.
ಆಫ್ರಿಕಾದಂತ ದೇಶಗಳಲ್ಲಿಯೇ ಶೇ.100ರಷ್ಟು ಶುದ್ಧ ಹೆರಾಯಿನ್ ಸಿಗುತ್ತದೆ. ಅಲ್ಲಿನ ದಂಧೆಕೋರರು ಆರ್ಥಿಕವಾಗಿ ಹಿಂದುಳಿದ ಮಹಿಳೆಯರು, ಯುವಕರಿಂದ ಬೇರೆ ದೇಶಗಳಿಗೆ ಮಾದಕ ವಸ್ತು ಸರಬರಾಜು ಮಾಡಲು ಬಳಸುತ್ತಾರೆ. ಅದೇ ರೀತಿ ಈಕೆಯಿಂದಲೂ ಕಳುಹಿಸಿದ್ದು, ಇಲ್ಲಿನ ಪೆಡ್ಲರ್‌ಗಳಿಗೆ ಕೊಟ್ಟು, ಅದನ್ನು ಬೇರೆ ವಸ್ತುವಿನ ಜತೆ ಮಿಶ್ರಣ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸಲು ಮಹಿಳೆಗೆ ದಂಧೆಕೋರರು ಸೂಚಿಸಿದ್ದರು ಎಂಬುದು ಪತ್ತೆಯಾಗಿದೆ. ಅಲ್ಲದೆ, ಈಕೆ ಈ ಹಿಂದೆಯೂ ಬಹಳಷ್ಟು ಬಾರಿ ಬೆಂಗಳೂರಿಗೆ ಮಾದಕ ವಸ್ತು ತಂದಿರುವ ಮಾಹಿತಿ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಚಿನ್ನದ ಪೇಸ್ಟ್ ಪತ್ತೆ: ಮತ್ತೊಂದು ಪ್ರಕರಣದಲ್ಲಿ ಒಳಉಡುಪಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಪೇಸ್ಟ್ ಕೊಂಡೊಯ್ಯುತ್ತಿದ್ದ ಕೇರಳ ಮೂಲದ 26 ವರ್ಷದ ಯುವಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಆತನಿಂದ 99.32 ಲಕ್ಷ ರೂ. ಮೌಲ್ಯದ 2.09 ಕೆ.ಜಿ. ಚಿನ್ನದ ಪೇಸ್ಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಸೆ.22ರಂದು ಕೇರಳದ ಕೊಚ್ಚಿಯಿಂದ ಮಾಲ್ಡೀವ್‌ಗೆ ಹೋಗಿದ್ದ ಆರೋಪಿ, ಸೆ.26ರಂದು ಬೆಂಗಳೂರಿಗೆ ಬಂದಿದ್ದಾನೆ.
ಆತನ ವರ್ತನೆಯಿಂದ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿ ದ್ದಾರೆ. ಆಗ ಆತ, ತಾನೂ ಪ್ರವಾಸಿ ವೀಸಾ ಪಡೆದು ಮಾಲ್ಡೀವ್ಸ್‌ಗೆ ಹೋಗಿರುವುದಾಗಿ ಹೇಳಿದ್ದ. ಬಳಿಕ ಬ್ಯಾಗ್ ಶೋಧಿಸಿದಾಗ ಯಾವುದೇ ವಸ್ತುಗಳು ಸಿಕ್ಕಿರಲಿಲ್ಲ. ನಂತರ ಆತನ ದೇಹದ ಚಲನೆಗಳ ಮೇಲೆ ಅನುಮಾನಗೊಂಡು ಬಟ್ಟೆ ಕಳಚಿದಾಗ, ಸುಮಾರು 2.09 ಕೆ.ಜಿಯ ಚಿನ್ನದ ಪೇಸ್ಟ್ ಅನ್ನು ಒಂದು ಬಟ್ಟೆಯಲ್ಲಿ ಸುತ್ತಿಟ್ಟು, ಅದನ್ನು ತನ್ನ ಒಳ ಉಡುಪಿನ ಸುತ್ತ ಜೇಬು ಮಾಡಿಸಿಕೊಂಡು ಅದರಲ್ಲಿ ಇರಿಸಿಕೊಂಡಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದರು.