ಬೆಂಗಳೂರು: ಬಸವನಗುಡಿಯ ಐತಿಹಾಸಿಕ ಕಡ್ಲೆಕಾಯಿ ಪರಿಷೆ ಸೋಮವಾರ ಆರಂಭ ವಾಗಲಿದ್ದು. ಭಾನುವಾರ ರಜಾ ದಿನವಾದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಪರಿಷೆಯತ್ತ ಸಾಗಿಬಂತು. ಬಹುತೇಕ ಕಾಲೇಜು ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದು ವಿಶೇಷವಾಗಿತ್ತು.
ಹೀಗಾಗಿ ಪರಿಷೆ ಆರಂಭವಾಗುವ ಒಂದು ದಿನ ಮೊದಲೇ ಬಸವನಗುಡಿಯ ದೊಡ್ಡಗುಣಪತಿ ದೇವಸ್ಥಾನದ ಸುತ್ತಮುತ್ತಲ ಪ್ರದೇಶಗಳಲ್ಲಿ ಪರಿಷೆಯ ಸಂಭ್ರಮ ಮೇಳೈಸಿದ್ದು ಹಳ್ಳಿಯ ಸೊಗಡು ಗರಿಬಿಚ್ಚಿಕೊಂಡಿತು. ದೊಡ್ಡಗಣಪತಿ ದೇವಸ್ಥಾನದ ಮುಂಭಾಗದ ರಸ್ತೆ, ಬಿಎಂಎಸ್ ಮಹಿಳಾ ಕಾಲೇಜು ರಸ್ತೆ ಸೇರಿದಂತೆ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಜಂಗುಳಿ ಗಿಜಿಗುಡುತ್ತಿತ್ತು.
ಭಾನುವಾರ ಬೆಳಗ್ಗೆಯಿಂದಲೇ ಜನರು ಪರಿಷೆಗೆ ಆಗಮಿಸಿದ್ದು, ಸಂಜೆ ಹೊತ್ತಿಗೆ ಪರಿಷೆ ಕಳೆಗಟ್ಟಿತು. ಹೀಗಾಗಿ ಕಹಳೆ ಬಂಡೆಯ ಆಸುಪಾಸು ಜನರು ಪರಿಷೆಯ ಸಂಭ್ರಮ ದಲ್ಲಿ ಮಿಂದೆದ್ದರು. ಬಾನಿ ನಲ್ಲಿ ಸೂರ್ಯನಿಲ್ಲದ ಹಿತ ವಾತಾವರಣ ಪರಿಷೆ ತುಂಬ ಸುತ್ತಾಟಕ್ಕೆ ಮತ್ತಷ್ಟು ಇಂಬು ನೀಡಿತ್ತು. ಕಾರಂಜಿ ಆಂಜನೇಯ ಸ್ವಾಮಿ ದೇವಾಲಯ, ರಾಮಕೃಷ್ಣ ಮಠ ಹಾಗೂ ಬುಲ್ ಟೆಂಪಲ್ ರಸ್ತೆಯ ಸೇರಿದಂತೆ ಅದರ ಸುತ್ತಮುತ್ತಲಿನ ಪ್ರದೇಶಗಳ ರಸ್ತೆಗಳ ಎರಡೂ ಬದಿಗಳಲ್ಲಿರುವ ಸಾಲು ಸಾಲು ಅಂಗಡಿಗಳಲ್ಲಿ ಜನ ಖರೀದಿಯಲ್ಲಿ ತೊಡಗಿದ್ದು ಕಂಡು ಬಂತು.
ಬಾದಾಮಿಕಾಯಿ, ಬೆಳಗಾಂಕಾಯಿ, ಸಾಮ್ರಾಟ್, ಗಡಂಗ್ ಸೇರಿ ದಂತೆ ತಹರೇವಾರಿ ತಳಿಗಳ ಕಡಲೆಕಾಯಿ ಖರೀದಿ ಯಲ್ಲಿ ಜನರು ನಿರತರಾಗಿದ್ದರು. ಕೆಲವು ಭೋಜನ ಪ್ರಿಯರು ಬಗೆ ಬಗೆ ತಿನಿಸುಗಳ ಅಂಗಡಿ ಒಳಹೊಕ್ಕರೆ ಮಾನಿನಿಯರು ಆಭರ ಣದ ಮಳಿಗೆಗಳಲ್ಲಿ ಮೇಳೈಸಿದ್ದರು. ಬಿಎಂಎಸ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಸ್ನೇಹಾ ಮಾತನಾಡಿ, ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಪರಿಷೆಗೆ ಜನರಿಗೆ ಅವಕಾಶವಿರಲಿಲ್ಲ.
ಹೀಗಾಗಿ ಈ ವರ್ಷ ಕಾಲೇಜು ಸ್ನೇಹಿತೆಯರ ಜತಗೂಡಿ ಬಂದಿರುವೆ. ಪರಿಷೆ ಹಳ್ಳಿಯ ಸೊಗಡನ್ನು ನೆನಪಿಸುತ್ತಿದ್ದು ಸುತ್ತಾಡಲು ಖುಷಿಯಾಗುತ್ತಿದೆ ಎಂದರು. ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್ ಹೀಗೆ ರಾಜ್ಯದ ಹಲವು ಭಾಗಗಳಿಂದ ಕಡ್ಲೆಕಾಯಿ ಪರಿಷೆಗೆ ಪೂರೈಕೆ ಆಗಿವೆ. ಜತೆಗೆ ನೆರೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಭಾಗಗಳಿಂದಲೂ ಕಡಲೆಕಾಯಿ ಪೂರೈಕೆ ಆಗಿದೆ.
representative image used
ಸೇರು ದರದಲ್ಲಿ ಕಡ್ಲೆಕಾಯ್ ಮಾರಾಟ: ಪರಿಷೆಯಲ್ಲಿ ಕಡ್ಲೆಕಾಯಿ ಸೇರು ಮತ್ತು ಲೀಟರ್ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸಾಧಾರಣ ಗುಣಮಟ್ಟದ ಕಡ್ಲೆಕಾಯ್ ಸೇರಿಗೆ 30 ರೂ.ಗೆ ಮಾರಾಟವಾದರೆ ಹೈಬ್ರೇಡ್ ತಳಿ 40ರಿಂದ 50 ರೂ. ಗೆ ಖರೀದಿಯಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಪರಿಷೆ ಅದ್ಧೂರಿಯಾಗಿ ನಡೆಯಲಿಲ್ಲ. ಈ ಬಾರಿ ಪರಿಷೆಗೆ ಪಾಲಿಕೆ ಅವಕಾಶ ನೀಡಿದ್ದು ಉತ್ತಮ ಮಾರಾಟ ನಿರೀಕ್ಷೆ ಮಾಡಿರುವುದಾಗಿ ಕಡ್ಲೆಕಾಯಿ ವ್ಯಾಪಾರಿ ಮಣಿಕಂಠನ್ ಹೇಳಿದರು.
ಇಂದು ಪರಿಷೆಗೆ ಚಾಲನೆ
ಮುಜರಾಯಿ ಇಲಾಖೆ ಮತ್ತು ಪಾಲಿಕೆ ಸಹಯೋಗದಲ್ಲಿ ನಡೆಯಲಿರುವ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು (ಸೋಮವಾರ) ಬೆಳಗ್ಗೆ 10.30ಕ್ಕೆ ಚಾಲನೆ ದೊರೆಯಲಿದೆ. ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದ ಬಳಿ ನಡೆಯುವ ಕಾರ್ಯಕ್ರಮದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಗೌರವ್ ಗುಪ್ತ ಸೇರಿದಂತೆ ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಹಾಗೆಯೇ ಕಡಲೆಕಾಯಿ ಪರಿಷೆಯ ವ್ಯಪಸ್ಥಾಪಕ ಸಮಿತಿಯವರು ಕೂಡ ಭಾಗವಹಿಸಲಿದ್ದಾರೆ.
ಅಪ್ಪು ಫೋಟೋ ಮುಂದೆ ಕ್ಲಿಕ್ಕಿಂಗ್
ಕಾಡ್ಲೆಕಾಯ್ ಪರಿಷೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ನೆನೆಯುವ ಕಾರ್ಯ ನಡೆದಿದೆ. ರಾಮಕೃಷ್ಣಾಶ್ರಮ ಮಠದ ಕಡೆಯಿಂದ ಬುಲ್ ಟೆಂಪ್ ರಸ್ತೆ ಕಡೆ ತೆರಳುವ ಮಾರ್ಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಭಾವಚಿತ್ರ ಅಳವಡಿಕೆ ಮಾಡಲಾಗಿದ್ದು ಅಪ್ಪು ಅಭಿಮಾನಿಗಳು ಭಾವಚಿತ್ರದ ಮುಂಭಾಗ ಪೋಟೋ ಕ್ಲಿಕ್ಕಿಸುತ್ತಿದ್ದ ದೃಶ್ಯ ಕಂಡು ಬಂತು.
ಈ ವೇಳೆ ಪ್ರತಿಕ್ರಿಯೆ ನೀಡಿದ ಅಪ್ಪು ಅಭಿಮಾನಿ ಹಾಗೂ ಹೊಸಕೆರೆಹಳ್ಳಿಯ ನಿವಾಸಿ ಸುಕೃತ್, ಅಪ್ಪು ಅವರನ್ನು ಜೀವಂತ ನೋಡಲಾಗಲಿಲ್ಲ. ಅಪ್ಪು ಅವರು ಆಗಾಗ್ಗೆ ಕಾಡುತ್ತಿದ್ದು ಆ ಹಿನ್ನೆಲೆಯಲ್ಲಿ ಅವರ ದೊಡ್ಡದಾದ ಭಾವಚಿತ್ರದ ಮುಂದೆ ನಿಂತು ಪೋಟೋ ತೆಗೆದುಕೊಂಡಿರುವುದಾಗಿ ಹೇಳಿದರು.
ಪರಿಷೆಗೆ ಪೊಲೀಸ್ ಬಂದೋಬಸ್ತ್
ಐತಿಹಾಸಿಕ ಬಸವನಗುಡಿ ಕಡ್ಲೆಕಾಯಿ ಪರಿಷೆ ಸುಸೂತ್ರವಾಗಿ ನಡೆಯಲು ಸಲುವಾಗಿ ಪೊಲೀಸ್ ಇಲಾಖೆ ಕೂಡ ಸಜ್ಜಾಗಿದೆ. ಇದಕ್ಕಾಗಿಯೇ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಹಾಗೂ ಜಯನಗರದ ಉಪ ವಿಭಾಗದ ಎಸಿಪಿ ಶ್ರೀನಿವಾಸ್ ನೇತೃತ್ವದಲ್ಲಿ ಬಂದೋಬಸ್ತ್ಗಾಗಿ ಪೊಲೀಸರನ್ನು ಕೂಡ ನಿಯೋಜಿಸಲಾಗಿದೆ. ಕಾನೂನು ಸುವಸ್ಥೆಗಾಗಿ 550 ಮಂದಿ ಪೊಲೀಸರನ್ನು ಹಾಗೆಯೇ ಸಂಚಾರ ನಿರ್ವಹಣೆಗಾಗಿ 250 ಮಂದಿ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ. ಜತೆಗೆ ಸಂಚಾರ ನಿಯಂತ್ರಣಕ್ಕಾಗಿ ಕೆಲವು ಮಾರ್ಗಗಳನ್ನು ಕೂಡ ಬದಲಾವಣೆ ಮಾಡಲಾಗಿದೆ.
ಮಾಸ್ಕ್ ಧರಿಸದೆ ಸುತ್ತಾಟ
ಕೋವಿಡ್ ನಿಯಮ ಪಾಲನೆ ಮಾಡಿಕೊಂಡು ಪರಿಷೆಗೆ ಆಚರಣೆ ಮಾಡಲಾಗುವುದು ಎಂದು ಪಾಲಿಕೆ ಹೇಳಿದೆ. ಆದರೆ ಭಾನುವಾರ ಪರಿಷೆಯಲ್ಲಿ ಪಾಲ್ಗೊಂಡಿದ್ದ ಹಲವು ಮಂದಿ ಮಾಸ್ಕ್ ಧರಿಸರಲಿಲ್ಲ. ಕೋವಿಡ್ ರೂಪಾಂತರ ತಳಿಗಳ ಬಗ್ಗೆ ಪಾಲಿಕೆ ಕೂಡ ಎಚ್ಚರಿಕೆ ವಹಿಸಿದ್ದು ಆ ಹಿನ್ನೆಲೆಯಲ್ಲಿ ಭಾನುವಾರ ಮಾರ್ಷಲ್‌ಗಳು ಪರಿಷೆಯ ಕೆಲವು ಕಡೆಗಳಲ್ಲಿ ಮಾಸ್ಕ್ ಧರಿಸದೇ ಸುತ್ತಾಟ ನಡೆಸಿದವರಿಗೆ ಮಾಸ್ಕ್ ಧರಿಸುವಂತೆ ಮನವಿ ಮಾಡಿದರು.