ಬೆಂಗಳೂರು: ಪ್ರೀತಿಸಿದ ಹುಡುಗಿ ದೂರವಾಗಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳ್ಳಂದೂರಿನ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಕುಮಾರ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ.
ಬೆಂಗಳೂರಿನಲ್ಲಿ ಕಾಲೇಜು ಓದುತ್ತಿದ್ದ ವೇಳೆ ಯುವಕ ಸತೀಶ್ ಕುಮಾರ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆ ವೇಳೆ ಯುವತಿಯೂ ಈತನನ್ನು ಪ್ರೀತಿಸುತ್ತಿದ್ದಳು. ವ್ಯಾಸಂಗ ಮುಗಿದ ಬಳಿಕ ಸತೀಶ್ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಆದರೆ, ಯುವತಿ ಕುಟುಂಬಸ್ಥರಿಗೆ ಇದು ಇಷ್ಟವಿರಲಿಲ್ಲ. ಈ ಸಂಬಂಧ 4 ತಿಂಗಳ ಹಿಂದೆ ಯುವತಿ ಕುಟುಂಬಸ್ಥರು ಸತೀಶ್ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಗೆ ಕಿರುಕುಳ ಆರೋಪದಡಿ ದೂರು ನೀಡಿದ್ದರು. ಪೊಲೀಸರು ಸತೀಶ್ನನ್ನು ಠಾಣೆಗೆ ಕರೆಯಿಸಿ ಬುದ್ಧಿವಾದ ಹೇಳಿದ್ದರು.
ನಂತರ ಯುವತಿಯಿಂದ ದೂರವಿದ್ದ ಸತೀಶ್ ಹೊಸ ವರ್ಷಕ್ಕೆ ಹೊಸ ಜೀವನ ಮಾಡಲು ನಿರ್ಧರಿಸಿದ್ದ. ಆದರೆ, ಹೊಸ ವರ್ಷದಂದು ಯುವತಿಗೆ ಕರೆ ಮಾಡಿ ಮತ್ತೆ ಪ್ರೀತಿ ಮುಂದುವರಿಸೋಣ ಎಂದು ಕೇಳಿಕೊಂಡಿದ್ದ. ಇದಕ್ಕೆ ಯುವತಿ ಒಪ್ಪದಿದ್ದಾಗ ಮನನೊಂದು ತಾನು ವಾಸಿಸುತ್ತಿದ್ದ ರೂಮ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.