ಬೆಂಗಳೂರು : ತಡವಾಗಿ ಬಂದಿದ್ದನ್ನ ಪ್ರಶ್ನಿಸಿದ್ದಕ್ಕೆ ಆನ್‍ಲೈನ್ ಫುಡ್ ಡೆಲಿವರಿ ಬಾಯ್ ಯುವತಿಯ ಮೇಲೆ ಹಲ್ಲೆ ಮಾಡಿರುವ ಘಟನೆ ಮಂಗಳವಾರ ( ಮಾರ್ಚ್ 9) ಬೆಂಗಳೂರಿನಲ್ಲಿ ನಡೆದಿದೆ. ಹಿತೇಶಾ ಚಂದ್ರಾಣಿ ಹಲ್ಲೆಗೊಳಗಾದ ಗ್ರಾಹಕಿ. ಕಾಮರಾಜ್ ಹಲ್ಲೆ ಮಾಡಿದ ಡೆಲಿವರಿ ಬಾಯ್.
ಹಿತೇಶಾ ಮಾರ್ಚ್ 9 ರ ಮಧ್ಯಾಹ್ನ 3.30ಕ್ಕೆ ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡಿದ್ದರು. 4.30 ಕ್ಕೆ ಅದು ಕೈಸೇರಬೇಕಿತ್ತು. ಆದರೆ, ನಿಗದಿತ ಸಮಯಕ್ಕೆ ಆರ್ಡರ್ ಮನೆಗೆ ಬಾರದ ಹಿನ್ನೆಲೆ ಕಸ್ಟಮರ್ ಕೇರ್ ಗೆ ಕರೆ ಮಾಡಿ ದೂರು ನೀಡಿದ್ದಾರೆ. ನಂತರ ಮನೆಗೆ ಬಂದ ಫುಡ್ ಸ್ವೀಕರಿಸಲು ನಿರಾಕರಿಸಿ ವಾಪಸ್ ತೆಗೆದುಕೊಂಡು ಹೋಗುವಂತೆ ಡೆಲಿವರಿ ಬಾಯ್‍ಗೆ ಸೂಚಿಸಿದ್ದಾರೆ. ಇದರಿಂದ ಕೋಪಗೊಂಡ ಆತ ಹಲ್ಲೆ ಮಾಡಿದ್ದಾನೆ ಎಂದು ಹಿತೇಶಾ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತಾಡಿರುವ ಅವರು, ಆರ್ಡರ್ ತಡವಾಗಿದ್ದಕ್ಕೆ ಕಸ್ಟಮರ್ ಕೇರ್ ಗೆ ದೂರು ನೀಡುತ್ತಿದ್ದೆ. ಇದೇ ವೇಳೆ ಡೆಲಿವರಿ ಬಾಯ್ ಬಾಗಿಲು ಬಳಿ ಬಂದಿದ್ದ. ಫೋನ್‍ನಲ್ಲಿ ಮಾತಾಡುತ್ತಿದ್ದರಿಂದ ಸ್ವಲ್ಪ ನಿಲ್ಲುವಂತೆ ಸೂಚಿಸಿದೆ. ಆದರೆ, ಆತ ‘ನನ್ನನ್ನು ನಿಮ್ಮ ಗುಲಾಮನೆಂದು ತಿಳಿದಿದ್ದೀರಾ ? ಎಂದು ಕೋಪದಿಂದ ನುಡಿದ. ಇದರಿಂದ ಗಾಬರಿಗೊಂಡು, ಆರ್ಡರ್ ವಾಪಾಸ್ ತೆಗೆದುಕೊಂಡು ಹೋಗುವಂತೆ ಸೂಚಿಸಿದೆ. ಇದರಿಂದ ಕೋಪಗೊಂಡ ಆತ ಕೆಟ್ಟದಾಗಿ ನಿಂದಿಸಿ, ನನ್ನ ಮೇಲೆ ಹಲ್ಲೆ ಮಾಡಿದ. ಆತನ ಹೊಡೆತಕ್ಕೆ ಮೂಗಿನ ಮೂಳೆ ಮುರಿದಿದೆ ಎಂದು ಹಿತೇಶಾ ಹೇಳಿದ್ದಾರೆ.
ಡೆಲಿವರಿ ಬಾಯ್ ಹೇಳೋದೇನು ?
ಹಿತೇಶಾ ಅವರ ಮೇಲೆ ಹಲ್ಲೆ ಮಾಡಿದ್ದನ್ನು ಒಪ್ಪಿಕೊಂಡಿರುವ ಕಾಮರಾಜ್, ಅವರೇ ಮೊದಲು ನಿಂದಿಸಿದರು. ಕೈಯಲ್ಲಿ ಚಪ್ಪಲಿ ಹಿಡಿದು ಹೊಡೆಯಲು ಬಂದರು. ನನ್ನ ರಕ್ಷಣೆಗಾಗಿ ಅವರ ಮೇಲೆ ಕೈ ಮಾಡಿದೆ ಎಂದಿದ್ದಾನೆ. ಇನ್ನು ಗ್ರಾಹಕಿ ಹಿತೇಶಾ ಅವರ ಕ್ಷಮೆ ಕೋರಿರುವ ಆನ್‍ಲೈನ್ ಫುಡ್ ಡೆಲಿವರಿ ಸಂಸ‍್ಥೆ, ಘಟನೆ ಕುರಿತು ತನಿಖೆ ನಡೆಸುವುದಾಗಿ ಹೇಳಿಕೊಂಡಿದೆ.