Advertisement

ಬೆಂಗಳೂರು-ವಾಸ್ಕೋ ರೈಲಿಗೆ ಹಸಿರು ನಿಶಾನೆ

09:08 AM Mar 01, 2020 | mahesh |

ಕುಂದಾಪುರ: ಮೂರು ದಿನಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಭಾರತೀಯ ರೈಲ್ವೇಯ ವೇಳಾಪಟ್ಟಿ ಸಮಿತಿ (ಐಆರ್‌ಟಿಸಿ)ಯ ಸಭೆಯಲ್ಲಿ ನೂತನ ಬೆಂಗಳೂರು – ಉಡುಪಿ- ಕುಂದಾಪುರ – ಕಾರವಾರ – ವಾಸ್ಕೋ ರೈಲಿನ ಸಂಚಾರಕ್ಕೆ ಹಸಿರು ನಿಶಾನೆ ಲಭಿಸಿದೆ. ಮಾ. 7ರಂದು ಬೆಂಗಳೂರಿನಲ್ಲಿ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್‌ ಅಂಗಡಿ ಚಾಲನೆ ನೀಡುವ ಮೂಲಕ ಕರಾವಳಿಗರ ಬಹು ನಿರೀಕ್ಷಿತ ರೈಲು ಸಂಚಾರ ಆರಂಭಿಸಲಿದೆ.

Advertisement

ಶುಕ್ರವಾರ ಸ್ವತಃ ಸಚಿವರೇ ಐಆರ್‌ಟಿಸಿ ಸಭೆಯಲ್ಲಿ ಭಾಗವಹಿಸಿ, ರೈಲು ಸಂಚಾರಕ್ಕೆ ಎದುರಾಗಿದ್ದ ತೊಡಕುಗಳನ್ನು ಪರಿಹರಿಸಿದ್ದು, ಮಾ. 7ರಿಂದ ರೈಲು ಸಂಚರಿಸಲಿದೆ ಎಂದು ಘೋಷಿಸಿದ್ದಾರೆ. ಬಳಿಕ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಯವರಿಗೆ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ.

ರೈಲು ಮಂಗಳೂರು ಸೆಂಟ್ರಲ್‌ ಮತ್ತು  ಜಂಕ್ಷನ್‌ ನಿಲ್ದಾಣಗಳಿಗೆ ತೆರಳದೆ ಪಡೀಲ್‌ ಮಾರ್ಗವಾಗಿ ಸಂಚಾರ ಮುಂದುವರಿಸುವುದರಿಂದ ಉಡುಪಿ ಮತ್ತು ಅದಕ್ಕೆ ಮುಂದಿನ ಭಾಗದ ಪ್ರಯಾಣಿಕರಿಗೆ 2 ತಾಸುಗಳು ಉಳಿತಾಯವಾಗುತ್ತವೆ.

ರೈಲಿನ ಕೋಚ್‌ ಗಳು ಬೆಂಗಳೂರಿಗೆ ಆಗಮಿಸಿ, ವೇಳಾಪಟ್ಟಿ ಪ್ರಕಟವಾಗಿ 15 ದಿನಗಳಾಗಿದ್ದವು. ಆದರೂ ಸಂಚಾರ ಆರಂಭಕ್ಕೆ ಸಂಬಂಧಪಟ್ಟ ರೈಲ್ವೇ ಅಧಿಕಾರಿಗಳು, ಕೊಂಕಣ ರೈಲ್ವೇ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದರ ಬಗ್ಗೆ ಕರಾವಳಿಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ಹಿತರಕ್ಷಣ ಸಮಿತಿ ಪ್ರಯತ್ನ
ಕರಾವಳಿಗೆ ಈ ಹೊಸ ರೈಲನ್ನು ನೀಡಬೇಕು ಎನ್ನುವ ಪ್ರಸ್ತಾವವನ್ನು ಮೊದಲಿಗೆ ಸಚಿವರ ಮುಂದೆ ಮಂಡಿಸಿದ್ದು ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಮತ್ತು ಕುಮಟಾ ರೈಲ್ವೇ ಯಾತ್ರಿಕರ ಸಂಘ. ರೈಲು ಘೋಷಣೆಯಾದಂದಿನಿಂದ ಹಿತರಕ್ಷಣ ಸಮಿತಿಯು ವೇಳಾಪಟ್ಟಿ, ತಾಂತ್ರಿಕ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಿರಂತರ ಶ್ರಮ ವಹಿಸಿದ್ದರಿಂದ ರೈಲು ಸಂಚಾರದ ಹಾದಿ ಸುಗಮಗೊಂಡಿದೆ.

Advertisement

ಈ ರೈಲು ಆರಂಭಕ್ಕೆ ರೈಲ್ವೇ ಸಚಿವರು ಮತ್ತು ಅಧಿಕಾರಿಗಳ ಪ್ರಯತ್ನ ಒಂದೆಡೆಯಾದರೆ, ಅದಕ್ಕಿಂತಲೂ ಮುಖ್ಯವಾಗಿ ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿಯ ಪ್ರಯತ್ನ ಪ್ರಮುಖ ಪಾತ್ರ ವಹಿಸಿದೆ. ಸರಿಯಾದ ಸಮಯದಲ್ಲಿ ಅವರು ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಿದ್ದರು.
– ಜಯಪ್ರಕಾಶ್‌ ಹೆಗ್ಡೆ, ಮಾಜಿ ಸಂಸದರು

Advertisement

Udayavani is now on Telegram. Click here to join our channel and stay updated with the latest news.

Next