ಬೆಂಗಳೂರು: 1988ರ ಮೋಟಾರು ವಾಹನ ಕಾಯ್ದೆ ಅಧಿನಿಯಮಕ್ಕೆ ಕೇಂದ್ರ ಸರಕಾರವು ತಿದ್ದುಪಡಿ ತಂದು ದೇಶಾದ್ಯಂತ ಜಾರಿಗೊಳಿಸಿದ ಬಳಿಕ ಇದೀಗ ಎಲ್ಲೆಡೆಯೂ ದಂಡ ವಸೂಲಾತಿಯದ್ದೇ ಸುದ್ದಿ. ಇತ್ತ ಉದ್ಯಾನ ನಗರಿ ಬೆಂಗಳೂರಿನಲ್ಲೂ ಸಹ ನಗರ ಸಂಚಾರ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರ ಮೇಲೆ ದಂಡ ವಿಧಿಸುತ್ತಿದ್ದಾರೆ.
ಬೆಂಗಳೂರು ನಗರ ಸಂಚಾರ ಪೊಲೀಸ್ ಪ್ರಕಟಿಸಿರುವ ಮಾಹಿತಿಯಂತೆ ಸೆಪ್ಟಂಬರ್ 14ರ ಶನಿವಾರ ಬೆಳಿಗ್ಗೆ 10.00 ಗಂಟೆಯಿಂದ ಸೆಪ್ಟಂಬರ್ 15ರ ಆದಿತ್ಯವಾರ ಬೆಳಗ್ಗಿನ 10.00 ಗಂಟೆಗಳವರೆಗೆ ನಗರದಲ್ಲಿ ವಿವಿಧ ಸಂಚಾರಿ ನಿಯಮ ಉಲ್ಲಂಘನೆಗಳಿಗಾಗಿ ವಾಹನ ಸವಾರರಿಂದ ಸಂಗ್ರಹಿಸಿದ ದಂಡ ಮೊತ್ತ ಬರೋಬ್ಬರಿ 34,72,500 ರೂಪಾಯಿಗಳು!
ಇದರಲ್ಲಿ ಹೆಲ್ಮೆಟ್ ರಹಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ಅತೀ ಹೆಚ್ಚಿನ ಅಂದರೆ 1909 ಪ್ರಕರಣಗಳು ದಾಖಲಾಗಿದ್ದು ಒಟ್ಟು 4,42,900 ರೂಪಾಯಿಗಳ ದಂಡ ಸಂಗ್ರಹವಾಗಿದೆ. ಇನ್ನು ಹಿಂಬದಿ ಸವಾರರು ಹೆಲ್ಮೆಟ್ ಧರಿಸದೇ ಇದ್ದ 1386 ಪ್ರಕರಣಗಳು ದಾಖಲುಗೊಂಡಿದ್ದು ಇದರಿಂದಾಗಿ ಒಟ್ಟು 4,60,800 ರೂಪಾಯಿಗಳ ದಂಡ ಸಂಗ್ರಹವಾಗಿದೆ.
ಅಸಮಂಜಸ ಪಾರ್ಕಿಂಗ್ ಗೆ ಸಂಬಂಧಪಟ್ಟಂತೆ 1259 ಪ್ರಕರಣಗಳು ದಾಖಲುಗೊಂಡಿದ್ದು ಇದರಿಂದಾಗಿ ಒಟ್ಟಾರೆ 2,84,300 ರೂಪಾಯಿಗಳ ದಂಡ ಸಂಗ್ರಹವಾಗಿದೆ.
ಇನ್ನುಳಿದಂತೆ ಟ್ರಾಫಿಕ್ ಸಿಗ್ನಲ್ ಉಲ್ಲಂಘನೆಯ 1229 ಪ್ರಕರಣ, ನೋ ಎಂಟ್ರಿಯಲ್ಲಿ ವಾಹನ ಚಲಾಯಿಸಿದ 639 ಪ್ರಕರಣ, ಸೀಟ್ ಬೆಲ್ಟ್ ಧರಿಸದಿರುವ 157 ಪ್ರಕರಣ, ಇನ್ಷ್ಯೂರೆನ್ಸ್ ಇಲ್ಲಿದಿರುವ 12 ಪ್ರಕರಣ, ನಂಬರ್ ಪ್ಲೇಟ್ ಇಲ್ಲದಿರುವ 32 ಪ್ರಕರಣ ಹೀಗೆ ಇನ್ನೂ ಹಲವು ಸಂಚಾರಿ ನಿಯಮ ಉಲ್ಲಂಘನೆಗಳಿಗಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸ್ ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.