ಬೆಂಗಳೂರು: ನಗರದ ವಿವಿಧೆಡೆ ಮನೆಗಳ್ಳತನ ನಡೆಸಿ ಕದ್ದ ಆಭರಣ ಸಮೇತ ಕಾಡಿಗೆ ಪರಾರಿಯಾಗಿ ತಲೆಮರೆಸಿಕೊಳ್ಳುತ್ತಿದ್ದ ಕಳ್ಳನೊಬ್ಬನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ನೆಲಮಂಗಲದ ಸೋಲೂರು ಮೂಲದ ಕುಖ್ಯಾತ ಕಳ್ಳ ನರಸಿಂಹ ರೆಡ್ಡಿ ಬಂಧಿತ. ಬಂಧಿತನಿಂದ 81.25 ಲಕ್ಷ ರೂ. ಮೌಲ್ಯದ 1 ಕೆಜಿ 141 ಗ್ರಾಂ ಚಿನ್ನ, 275 ಗ್ರಾಂ ನಕಲಿ ಒಡವೆಗಳು, 2 ಕಾರುಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಆರೋಪಿಯು ಒಂಟಿ ಮನೆಗಳು, ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ ಮಾಡುತ್ತಿದ್ದ. ಕದ್ದ ಚಿನ್ನಾಭರಣ ಸಮೇತ ನೆಲಮಂಗಲ ಬಳಿಯ ಗುಡೇಮಾರನಹಳ್ಳಿ ಹಾಗೂ ಕೃಷ್ಣಗಿರಿಯ ದಟ್ಟ ಕಾಡುಗಳಿಗೆ ತೆರಳಿ ತಲೆಮರೆಸಿಕೊಳ್ಳುತ್ತಿದ್ದ. ಈ ಕಾಡುಗಳನ್ನೇ ತನ್ನ ವಾಸಸ್ಥಾನವಾಗಿ ಮಾಡಿಕೊಂಡಿದ್ದ. ಕಾಡಿನ ಬಂಡೆಗಳ ಮೇಲೆ ಮಲಗುತ್ತಿದ್ದ. ಸುಮಾರು 50 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕದ್ದ ದುಡ್ಡಲ್ಲಿ ಕಾರು ಖರೀದಿ ಮಾಡಿದ್ದ. ಕಾರಿನಲ್ಲಿ ಓಡಾಡುತ್ತಾ ಐಷಾರಾಮಿ ಜೀವನ ನಡೆಸುವ ಕನಸು ಕಂಡಿದ್ದ. ಪೊಲೀಸರಿಗೆ ಈತನನ್ನು ಬಂಧಿಸುವುದೇ ದೊಡ್ಡ ತಲೆನೋವಾಗಿತ್ತು.
ಕದ್ದ ಚಿನ್ನ ಬಂಡೆ ಕೆಳಗೆ ಹೂತಿಟ್ಟಿದ್ದ ಆರೋಪಿ: ಗಿರಿನಗರ ನಿವಾಸಿ ಮಹಿಳೆಯೊಬ್ಬರು ಮೇ 10ರಂದು ಮನೆಗೆ ಬೀಗ ಹಾಕಿಕೊಂಡು ಪತಿಯ ಜೊತೆಗೆ ಕಣ್ಣಿನ ಆಪರೇಷನ್ ಸಲುವಾಗಿ ಕನಕಪುರ ರಸ್ತೆಯ ಆಸ್ಪತ್ರೆಯೊಂದಕ್ಕೆ ತೆರಳಿದ್ದರು. ಆ ವೇಳೆ ಆರೋಪಿ ನರಸಿಂಹ ರೆಡ್ಡಿ ಇವರ ಮನೆಯ ಬಾಗಿಲು ಮುರಿದು ಚಿನ್ನಾಭರಣ ಹಾಗೂ 2 ಕೆಜಿ ಬೆಳ್ಳಿ ಕದ್ದು ಪರಾರಿಯಾಗಿದ್ದ. ಮೇ 11ರಂದು ಮನೆಕೆಲಸದಾಕೆ ಬಂದು ನೋಡಿದಾಗ ಕಳ್ಳತನವಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಮನೆ ಮಾಲೀಕರು ಗಿರಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಗಿರಿನಗರ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ನರಸಿಂಹ ರೆಡ್ಡಿ ಕಳ್ಳತನ ಮಾಡಿರುವ ಸುಳಿವು ಸಿಕ್ಕಿತ್ತು.
ಇತ್ತ ನರಸಿಂಹ ರೆಡ್ಡಿ ಕದ್ದ ಆಭರಣ ಸಮೇತ ಕಾಡಿಗೆ ಪರಾರಿಯಾಗಿದ್ದ. ಆತ ಗುಡೇಮಾರನಹಳ್ಳಿ ಕಾಡಿನಲ್ಲಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಕೂಡಲೇ ಆತನನ್ನು ಹೆಡೆಮುರಿ ಕಟ್ಟಿ ಜೈಲಿಗೆ ಕಳಿಸಿದ್ದಾರೆ. ಕದ್ದ ಚಿನ್ನಾಭರಣವನ್ನು ಕಾಡಿನ ಬಂಡೆ ಕೆಳಗೆ ಹೂತಿಟ್ಟಿದ್ದ. ಸದ್ಯ ಪೊಲೀಸರು ಅದನ್ನು ಜಪ್ತಿ ಮಾಡಿಕೊಂಡಿದ್ದಾರೆ.