Advertisement

Bengaluru: ತನ್ನ ಖಾಸಗಿ ಕ್ಷಣಗಳಿದ್ದ ಮೊಬೈಲ್‌ ಕದಿಯಲು ಸುಪಾರಿ!

03:54 PM Sep 29, 2024 | Team Udayavani |

ಬೆಂಗಳೂರು: ಮಾಜಿ ಪ್ರಿಯಕರನ ಬಳಿ ತನ್ನ ಖಾಸಗಿ ಕ್ಷಣಗಳ ವಿಡಿಯೋಗಳು ಮತ್ತು ಫೋಟೋಗಳಿದ್ದ ಮೊಬೈಲ್‌ ಕದಿಯಲು ಸುಪಾರಿ ಕೊಟ್ಟು ಸುಲಿಗೆ ಮಾಡಿಸಿದ್ದ ಯುವತಿ ಸೇರಿ ಐವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

Advertisement

ಕೊಡತಿ ನಿವಾಸಿ ಪಿ.ಶೃತಿ(29), ಸುಪಾರಿ ಪಡೆದು ಕೊಂಡಿದ್ದ ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿಗಳಾದ ಮನೋಜ್‌ ಕುಮಾರ್‌(25), ಸುರೇಶ್‌ ಕುಮಾರ್‌ (26), ಹೊನ್ನಪ್ಪ(25) ಹಾಗೂ ವೆಂಕಟೇಶ್‌(27) ಬಂಧಿತರು.

ಸಿಂಗಸಂದ್ರದ ಎಇಸಿಎಸ್‌ ಲೇಔಟ್‌ ನಿವಾಸಿ ಮಾಜಿ ಪ್ರಿಯಕರ ದೂಂಪಾ ವಂಶಿಕೃಷ್ಣ ರೆಡ್ಡಿ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡು ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಏನಿದು ಪ್ರಕರಣ?: ಒಡಿಶಾ ಮೂಲದ ವಂಶಿಕೃಷ್ಣ ರೆಡ್ಡಿ ಮತ್ತು ತಮಿಳುನಾಡು ಮೂಲದ ಆರೋಪಿ ಶೃತಿ ಟೆಕ್ಕಿಗಳಾಗಿದ್ದು ನಗರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಇಬ್ಬರು ಪರಸ್ಪರ ಪರಿಚಿತರಾಗಿ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕುಟುಂಬದವರ ಅನುಮತಿ ಪಡೆದು ಮದುವೆಗೂ ನಿರ್ಧರಿಸಿದ್ದರು. ಈ ನಡುವೆ ಶೃತಿ ಕೆಲ ವರ್ಷಗಳ ಹಿಂದೆ ಬೇರೊಬ್ಬ ಯುವಕನ ಜತೆಗೆ ತನಗೆ ಸಂಬಂಧ ಇದ್ದ ವಿಚಾರವನ್ನು ವಂಶಿಕೃಷ್ಣನ ಬಳಿ ಹೇಳಿಕೊಂಡಿದ್ದಳು. ಅದರಿಂದ ಅಸಮಾಧಾನಗೊಂಡ ವಂಶಿಕೃಷ್ಣ, ಶೃತಿಯನ್ನು ಮದುವೆಯಾಗಲು ನಿರಾಕರಿಸಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿತ್ತು.

ಮೊಬೈಲ್‌ ಸುಲಿಗೆಗೆ ಸುಪಾರಿ: ಆದರೆ ಮಾಜಿ ಪ್ರಿಯಕರ ವಂಶಿಕೃಷ್ಣನ ಮೊಬೈಲ್‌ನಲ್ಲಿ ತನ್ನ ಖಾಸಗಿ ವಿಡಿಯೋಗಳು ಹಾಗೂ ಫೋಟೋಗಳು ಇರುವ ಬಗ್ಗೆ ಅನುಮಾನಗೊಂಡಿದ್ದ ಶೃತಿ, ಮುಂದೆ ತೊಂದರೆಯಾಗಲಿದೆ ಎಂದು ಭಾವಿಸಿದ್ದಳು. ಅದರಿಂದ ದೂರುದಾರನ ಮೊಬೈಲ್‌ ಪಡೆಯಲು ನಿರ್ಧರಿಸಿ ತನಗೆ ಪರಿಚಯವಿದ್ದ ಆರೋಪಿ ಮನೋಜ್‌ ಕುಮಾರ್‌ನನ್ನು ಸಂಪರ್ಕಿಸಿ, ವಂಶಿಕೃಷ್ಣನಿಂದ ಮೊಬೈಲ್‌ ಸುಲಿಗೆ ಮಾಡಲು 1.15 ಲಕ್ಷ ರೂ.ಗೆ ಸುಪಾರಿ ನೀಡಿದ್ದಳು. ಅದರಂತೆ ಮನೋಜ್‌ ಹಾಗೂ ಆತನ ಮೂವರು ಸ್ನೇಹಿತರು ದೂರುದಾರನ ಮೊಬೈಲ್‌ ಸುಲಿಗೆಗೆ ಸಂಚು ರೂಪಿಸಿದ್ದರು.

Advertisement

ಇಬ್ಬರ ಮೊಬೈಲ್‌ ಸುಲಿಗೆ: ಆರೋಪಿ ಶೃತಿ, ಸೆ.20ರಂದು ವಂಶಿಕೃಷ್ಣನ ಸಂಪರ್ಕಿಸಿ ಮಾತ ನಾಡಲು ಭೋಗನಹಳ್ಳಿಯ ಗುರು ನ್ಪೋರ್ಟ್ಸ್ ಸಮೀಪದ ಪಾರ್ಕಿಂಗ್‌ ಸ್ಥಳಕ್ಕೆ ಬರುವಂತೆ ಹೇಳಿದ್ದು, ಅದೇ ದಿನ ಸಂಜೆ ವಂಶಿಕೃಷ್ಣ ಮತ್ತು ಶೃತಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ ರಾತ್ರಿ 8.15ಕ್ಕೆ ಮನೆಗೆ ತೆರಳಲು ಇಬ್ಬರು ದ್ವಿಚಕ್ರ ವಾಹನ ಏರಿ ಹೊರಟ್ಟಿದ್ದಾರೆ. ಗುರು ನ್ಪೋರ್ಟ್ಸ್ ಸಮೀಪದ ವೈ ಜಂಕ್ಷನ್‌ನಲ್ಲಿ ಹೋಗುವಾಗ, ಹಿಂದಿನಿಂದ ಬಂದ ಬಿಳಿ ಬಣ್ಣದ ಕಾರೊಂದು ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಬಳಿಕ ಇಬ್ಬರು ಅಪರಿಚಿತರು ಕಾರಿನಿಂದ ಕೆಳಗೆ ಇಳಿದು ವಂಶಿಕೃಷ್ಣನ ಮೇಲೆ ಹಲ್ಲೆ ಮಾಡಿ, ಮೊಬೈಲ್‌ ಕಿತ್ತುಕೊಂಡಿದ್ದಾರೆ. ಪ್ರಕರಣ ತಿರುಚಲು ಶೃತಿಯ ಮೊಬೈಲ್‌ ಸಹ ಕಿತ್ತುಕೊಂಡು ಕಾರಿನಲ್ಲಿ ಪರಾರಿಯಾಗಿದ್ದರು.

ಈ ಘಟನೆ ಬಳಿಕ ಶೃತಿ, ಬೆಂಗಳೂರಿನಲ್ಲಿ ಈ ರೀತಿ ಘಟನೆಗಳು ಸಾಮಾನ್ಯ, ಈ ಸಂಬಂಧ ಪೊಲೀಸರಿಗೆ ಯಾವುದೇ ದೂರು ನೀಡುವುದು ಬೇಡ ಎಂದು ವಂಶಿಕೃಷ್ಣಗೆ ಹೇಳಿದ್ದಾಳೆ. ಆದರೂ, ವಂಶಿಕೃಷ್ಣ ಬೆಳ್ಳಂದೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದನು. ಸಿಸಿ ಕ್ಯಾಮೆರಾ ಸುಳಿವು ಆಧರಿಸಿ ಸೆರೆ: ಬಳಿಕ ತನಿಖೆಗೆ ಇಳಿದ ಪೊಲೀಸರು, ಘಟನಾ ಸ್ಥಳದ ಸುತ್ತಲ ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಸಿಕ್ಕಿ ಸುಳಿವಿನ ಮೇರೆಗೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಮೊಬೈಲ್‌ ಕದಿ ಯಲು ಶೃತಿ ಸುಪಾರಿ ವಿಚಾರ ಬೆಳಕಿಗೆ ಬಂದಿದೆ.

ಸಿಂಗಸಂದ್ರ ಕೆರೆಗೆ ಮೊಬೈಲ್‌ ಎಸೆದರು ಆರೋಪಿಗಳು ವಂಶಿಕೃಷ್ಣನ ಮೊಬೈಲ್‌ ಸುಲಿಗೆ ಬಳಿಕ ಮೊಬೈಲ್‌ ತೆರೆಯಲು ಪ್ರಯತ್ನಿಸಿದ್ದಾರೆ. ಆದರೆ, ಪಾಸ್‌ವರ್ಡ್‌ನಿಂದಾಗಿ ತೆರೆಯಲು ಸಾಧ್ಯವಾಗಿಲ್ಲ. ಹೀಗಾಗಿ ಸಿಂಗ ಸಂದ್ರ ಕೆರೆ ಯ ಲ್ಲಿ ವಂಶಿಕೃಷ್ಣ ಮೊಬೈಲ್‌ ಎಸೆದು ಪರಾರಿಯಾಗಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next