ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಇಂದು ನಗದ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2021ದಲ್ಲಿ ಭಾಗವಹಿಸಿದರು. ಎಲ್ ಸಿಎ ತೇಜಸ್ ಯುದ್ದ ವಿಮಾನದಲ್ಲಿ ಸುಮಾರು 15 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿದರು.
ನಂತರ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಇದೊಂದು ಅದ್ಭುತವಾದ ಅನುಭವ. ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. 15 ಸಾವಿರ ಎತ್ತರದಲ್ಲಿ ಒಂದು ಸಾವಿರ ಕಿಲೋ ಮೀಟರ್ ವೇಗದಲ್ಲಿ ಹಾರಾಟ ಮಾಡಲಾಯಿತು ಎಂದು ಅನುಭವಗಳನ್ನು ಹೇಳಿಕೊಂಡರು.
ಇದನ್ನೂ ಓದಿ:ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭಕ್ತರಿಗೆ ವೀಕ್ಷಿಸಲು ಸಾಧ್ಯವಿಲ್ಲ, ಯಾಕೆ?
ಎಲ್ ಸಿಎ ಏರ್ ಕ್ರಾಫ್ಟ್ ನಮ್ಮ ಭಾರತದವರೇ ನಿರ್ಮಾಣ ಮಾಡಿದ್ದಾರೆ. ಡಿಆರ್ ಡಿಓ ದಲ್ಲಿ ಇದರ ವಿನ್ಯಾಸ ಮಾಡಿದ್ದಾರೆ. ಬೆಂಗಳೂರಿನಲ್ಲಿ 250ಕ್ಕೂ ಹೆಚ್ಚು ಕಂಪನಿಗಳು ಈ ಏರ್ ಕ್ರಾಫ್ಟ್ ಉತ್ಪಾದನೆಗೆ ಮುಂದಾಗಿವೆ. 48 ಸಾವಿರ ಕೋಟಿ ರೂ. ಈ ಏರ್ ಕ್ರಾಫ್ಟ್ ಗಳ ಪರವಾಗಿ ಅನುಮತಿ ನೀಡಿದ್ದಾರೆ. ಅತಿ ಹೆಚ್ಚಿನ ಉತ್ಪಾದನೆ ಬೆಂಗಳೂರಿನಲ್ಲೇ ಆಗುತ್ತಿದೆ. ಅಂತಾರಾಷ್ಟ್ರೀಯ ಫೈಟರ್ ಜೆಟ್ ಗಳನ್ನು ನಿರ್ಮಾಣ ಮಾಡುವ ಶಕ್ತಿಯಿದೆ. ಭಾರತೀಯ ನಿರ್ಮಾಣದ ಏರ್ ಕ್ರಾಫ್ಟ್ ಅದ್ಭುತವಾಗಿದೆ. ಲಘು ಯುದ್ಧ ವಿಮಾನ ನಿರ್ಮಾಣ ಮಾಡಿದ ಇಂಜಿನಿಯರ್, ಸಿಬ್ಬಂದಿಗಳಿಗೆ ಗೌರವ ಸಲ್ಲಿಸಬೇಕಾಗುತ್ತದೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ತುಂಬಾ ಸಂತಸವಾಗಿದೆ: ಕೆಲವು ವರ್ಷಗಳ ಹಿಂದೆ ಏರೋ ಇಂಡಿಯಾ ಶೋ ನೋಡಲು ಪಾಸ್ ಸಿಗುತ್ತಿರಲಿಲ್ಲ. ಆದರೆ ಇವತ್ತಿನ ಅವಕಾಶ ನೋಡಿದರೆ ಖುಷಿಯಾಗುತ್ತದೆ. ಬೆಂಗಳೂರಿನ ಜನ ಆಶೀರ್ವಾದ ಮಾಡಿದ್ದಾರೆ. ಇವತ್ತು ನಾನೇ ಏರೋ ಇಂಡಿಯಾ ಶೋ ನ ವಿಮಾನದಲ್ಲಿ ಹಾರಾಡುತ್ತಿರುವುದು ತುಂಬಾ ಸಂತಸ ತಂದಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಇದನ್ನೂ ಓದಿ:ಸಿನಿಮಾ ಮಂದಿ ಒಕ್ಕೊರಲ ಪ್ರಶ್ನೆಗೆ ಮಣಿದ ಸರ್ಕಾರ: ಉದಯವಾಣಿ ವರದಿಗೆ ಎಲ್ಲೆಡೆಯಿಂದ ಸ್ಪಂದನೆ