Advertisement

ಬೆಂಗಳೂರು ಸರಣಿ ಬಾಂಬ್‌ ಸ್ಫೋಟ ಪ್ರಕರಣ : ಪತ್ರಕರ್ತೆ ಸಹಿತ ಮೂವರ ಅರ್ಜಿ ವಜಾ

07:46 PM Dec 27, 2021 | Team Udayavani |

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ 2008ರಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಪ್ರಮುಖ ರೂವಾರಿ ಎನ್ನಲಾದ ಪಿಡಿಪಿ ನಾಯಕ ಅಬ್ದುಲ್‌ ನಾಸೀರ್‌ ಮದನಿ ವಿರುದ್ಧ ಸಾಕ್ಷ್ಯ ಹೇಳದಂತೆ ಬೆದರಿಕೆಯೊಡ್ಡಿದ್ದ ಆರೋಪದಿಂದ ಕೈಬಿಡುವಂತೆ ಕೇರಳದ ಪತ್ರಕರ್ತೆ ಕೆ.ಕೆ.ಶಹೀನಾ ಸಹಿತ ಮೂವರು ಸಲ್ಲಿಸಿದ್ದ ಕ್ರಿಮಿನಲ್‌ ಪುನರ್‌ ಪರಿಶೀಲನಾ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ.

Advertisement

ಪ್ರಕರಣ ಸಂಬಂಧ ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2018ರ ಫೆ.28ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆ.ಕೆ.ಶಹೀನಾ, ಸುಬೇರ ಪಡುಪು ಮತ್ತು ಉಮರ್‌ ಮೌಲ್ವಿ ಸಲ್ಲಿಸಿದ್ದ ಕ್ರಿಮಿನಿಲ್‌ ಪುನರ್‌ ಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಿ ಇತ್ತೀಚಿಗೆ ಆದೇಶ ಹೊರಡಿಸಿರುವ ನ್ಯಾಯಮೂರ್ತಿ ಎನ್‌.ಕೆ. ಸುಧೀಂದ್ರ ರಾವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆರೋಪಿಗಳನ್ನು ಪ್ರಕರಣದಿಂದ ಕೈಬಿಡಲು ನಿರಾಕರಿಸಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಅರ್ಜಿದಾರರು ತಾವು ಎತ್ತಿರುವ ಅಂಶಗಳಿಗೆ ಸೂಕ್ತ ಪುರಾವೆಯನ್ನು ಒದಗಿಸಿಲ್ಲ. ಅಲ್ಲದೆ, ಅರ್ಜಿದಾರರು ತಾವು ನಿರಪರಾಧಿಗಳೆಂದು ಸಾಬೀತುಪಡಿಸಲು ವಿಚಾರಣ ನ್ಯಾಯಾಲಯದಲ್ಲಿ ಅವಕಾಶವಿದ್ದು, ಅಲ್ಲಿ ಅವರು ತಮ್ಮ ವಾದ, ಸಾಕ್ಷÂಗಳನ್ನು ಮಂಡಿಸಬಹುದು. ಹಾಗಾಗಿ, ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಬೇಕಾದ ಅಂಶಗಳು ಕಾಣುತ್ತಿಲ್ಲ ಎಂದು ನ್ಯಾಯಪೀಠ ಹೇಳಿದೆ. ಆರೋಪಿಗಳ ವಿರುದ್ಧ “ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ (ಯುಎಪಿಎ) ಅಡಿ ದಾಖಲಿಸಿರುವ ಪ್ರಕರಣದಿಂದ ಕೈಬಿಡುವಂತೆ ಕೋರಿ ಆರೋಪಿಗಳು ಸಲ್ಲಿಸಿದ ಅರ್ಜಿಗಳನ್ನು ವಜಾಗೊಳಿಸಿದೆ.

ಅಲ್ಲದೆ, ಸಕ್ಷಮ ಪ್ರಾಧಿಕಾರ ಆರೋಪಿಗಳ ವಿರುದ್ಧ ಕಠಿನ ಯುಎಪಿಎ ಹೇರಲು ವಿವೇಚನೆ ಬಳಸಿಲ್ಲವೆಂದು ಈ ಹಂತದಲ್ಲಿಯೇ ಹೇಳಲಾಗದು. ಜತೆಗೆ ಆರೋಪವನ್ನು ಪುಷ್ಟೀಕರಿಸುವ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್‌ ಒದಗಿಸಿದೆ. ಹಾಗಾಗಿ ಅಧೀನ ನ್ಯಾಯಾಲಯ ನೀಡಿರುವ ಆದೇಶ ಸರಿ ಇದೆ, ಅದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಇದನ್ನೂ ಓದಿ : ಕಾವೇರಿ ತಾಯಿ ಮುಂದೆ ನಿಂತು ನಾಟಕ: ಡಿಕೆಶಿ ವಿರುದ್ಧ ಹೆಚ್ ಡಿಕೆ ತೀವ್ರ ವಾಗ್ದಾಳಿ
****
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಬೆದರಿಕೆ ಆರೋಪಕ್ಕೆ ಕಠಿಣ ಯುಎಪಿಎ ಕಾಯ್ದೆ ಹೇರಲಾಗಿದೆ, ಅಲ್ಲದೇ, ಕಾಯ್ದೆ ಹೇರಲು ಪ್ರಾಸಿಕ್ಯೂಷನ್‌ ಸೂಕ್ತ ಸಾಕ್ಷ್ಯವನ್ನು ಒದಗಿಸಿಲ್ಲ. ಮುಖ್ಯವಾಗಿ ಪ್ರಾಧಿಕಾರ ಕೂಡ ತನ್ನ ವಿವೇಚನೆ ಬಳಕೆ ಮಾಡಿಲ್ಲ. ಆರೋಪಿಗಳ ವಿರುದ್ಧ ಸಾಕ್ಷ್ಯಧಾರಗಳಿಲ್ಲದಿದ್ದರೂ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಹಾಗಾಗಿ ಅವರನ್ನು ಪ್ರಕರಣದಿಂದ ಕೈಬಿಡಬೇಕು ಎಂದು ಮನವಿ ಮಾಡಿದರು.

Advertisement

ಪ್ರಾಸಿಕ್ಯೂಷನ್‌ ಪರ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಆರ್‌. ಸುಬ್ರಮಣ್ಯ ವಾದ ಮಂಡಿಸಿ, ಆರೋಪಿಗಳ ವಿರುದ್ಧ ಯುಎಪಿಎ ಹೇರಿರುವುದು ಸರಿ ಇದೆ ಎಂದು ವಿಚಾರಣಾ ನ್ಯಾಯಾಲಯ ಈಗಾಗಲೇ ಹೇಳಿದೆ ಮತ್ತು ಅದಕ್ಕೆ ಕಾರಣಗಳನ್ನೂ ನೀಡಿದೆ. ಸಕ್ಷಮ ಪ್ರಾಧಿಕಾರ ಕೂಡ ತನ್ನ ವಿವೇಚನೆ ಬಳಸಿಯೇ ಯುಎಪಿಎ ವಿಧಿಸಲು ಅನುಮತಿ ನೀಡಿದೆ. ಅರ್ಜಿದಾರರು ತಮ್ಮ ವಾದ, ಸಾಕ್ಷ್ಯ ಏನೇ ಇದ್ದರೂ ವಿಚಾರಣಾ ನ್ಯಾಯಾಲಯದ ಮುಂದೆ ಮಂಡಿಸಬಹುದು. ಈ ಹಂತದಲ್ಲಿ ಯಾವುದೇ ಕಾರಣಕ್ಕೂ ಆರೋಪಿಗಳನ್ನು ಪ್ರಕರಣದಿಂದ ಕೈಬಿಡಬಾರದು ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: ತೆಹಲ್ಕಾ ಪತ್ರಕರ್ತೆ ಎಂದು ಹೇಳಿಕೊಂಡು ಕೆ.ಕೆ.ಶಹೀನಾ ಮತ್ತಿತರು ಮೂವರು ಮಡಿಕೇರಿಯಲ್ಲಿ ಯೋಗಾನಂದ್‌ ಮತ್ತು ಕೆ.ಬಿ.ರಫೀಕ್‌ ಅವರನ್ನು ಭೇಟಿ ಮಾಡಿ 2008ರ ಬೆಂಗಳೂರು ಸರಣಿ ಬಾಂಬ್‌ ನ್ಪೋಟ ಪ್ರಕರಣದ ಬಗ್ಗೆ ವಿಚಾರಿಸಿದ್ದಲ್ಲದೆ, ಕೇರಳದ ಪಿಡಿಪಿ ಸಂಘಟನೆಯ ಮುಖಂಡ ಹಾಗೂ ಪ್ರಕರಣದಲ್ಲಿ ಬಂಧಿತನಾಗಿರುವ ಅಬ್ದುಲ್‌ ನಾಸೀರ್‌ ಮದನಿ ವಿರುದ್ಧ ಸಾಕ್ಷ್ಯ ಹೇಳಬಾರದು, ಹೇಳಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರಾಣಬೆದರಿಕೆಯೊಡ್ಡಿದ್ದರು. ಆ ಕುರಿತು ನೀಡಿದ್ದ ದೂರು ದಾಖಲಿಸಿಕೊಂಡಿದ್ದ ಸೋಮವಾರಪೇಟೆ ಮತ್ತು ಸಿದ್ದಾಪುರ ಠಾಣಾ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಕಲಂ 34, 120ಬಿ ಮತ್ತು 506 ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) 1967 ಸೆಕ್ಷನ್‌ 22ರಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣದಿಂದ ಕೈಬಿಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿತ್ತು. ಅದಕ್ಕೆ ಆರೋಪಿಗಳ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next