Advertisement

Bengaluru;ಮಳೆಗೆ ತತ್ತರಿಸಿದ ರಾಜಧಾನಿ: ಶಾಲೆಗಳಿಗೆ ರಜೆ, ಐಟಿಗೆ ವರ್ಕ್‌ ಫ್ರಂ ಹೋಮ್‌

09:38 AM Oct 16, 2024 | Team Udayavani |

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ವ್ಯಾಪಕ ಮಳೆ ಸುರಿಯುತ್ತಿದ್ದು, ಸೋಮವಾರ ತಡ ರಾತ್ರಿಯಿಂದ ಎಡೆಬಿಡದೆ ಸುರಿದ ವರ್ಣಾರ್ಭಟಕ್ಕೆ ರಾಜಧಾನಿ ಬೆಂಗಳೂರು ಮಂಗಳವಾರ ಅಕ್ಷರಶಃ ಮಳೆಯೂರಿನಿಂತಾಗಿತ್ತು. ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನ ತನಕ ಮಳೆ ಸುರಿದ ಹಿನ್ನೆಲೆಯಲ್ಲಿ ನಗರದ ಹಲವು ರಸ್ತೆಗಳು ನೀರು ತುಂಬಿ ಹೊಳೆಯಂತಾಗಿವೆ. ಭಾರೀ ಟ್ರಾಫಿಕ್ ಜಾಮ್, ತಗ್ಗು ಪ್ರದೇಶಗಳು ಜಲಾವೃತವಾಗಿ ಜನರು ಪರದಾಡುವಂತಾಗಿದೆ. ಬುಧವಾರ(ಅ16) ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಐಟಿ, ಬಿಟಿ ಮತ್ತು ಖಾಸಗಿ ಕಂಪನಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚನೆ ನೀಡಲಾಗಿದೆ.

Advertisement

ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಎಲ್ಲ ಅಂಗನವಾಡಿ ಹಾಗೂ ಖಾಸಗಿ ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಅ.16ರಂದು ಜಿಲ್ಲಾಧಿಕಾರಿ ಜಗದೀಶ್‌ ರಜೆ ಘೋಷಿಸಿದ್ದಾರೆ. ಉಳಿದಂತೆ ಎಲ್ಲ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್‌, ಐಟಿಬಿಟಿ ಗಳಿಗೆ ರಜೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಅ.16ರಿಂದ 2 ದಿನ ಬೆಂಗಳೂರು ನಗರ ಜಿಲ್ಲಾದ್ಯಂತ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಣೆ ಮುನ್ಸೂಚನೆ ನೀಡಿದೆ.

ಮಳೆ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗಿದೆ. ಮಳೆಯ ಮಂಜಾಗರೂಕತಾ ಕ್ರಮವಾಗಿ ರಜೆಯನ್ನು ನೀಡಿ ಉಂಟಾಗಿರುವ ಕಲಿಕಾ ಸಮಯದ ಕೊರತೆಯನ್ನು ಶನಿವಾರ ಮಧ್ಯಾಹ್ನ ಅಥವಾ ಭಾನುವಾರ ಹೆಚ್ಚುವರಿ ತರಗತಿಗಳನ್ನು ನಡೆಸುವ ಮೂಲಕ ನಷ್ಟವನ್ನು ಸರಿದೂಗಿಸುವಂತೆ ತಿಳಿಸಿದೆ.

Advertisement

ಕಾಲೇಜು ಮುಖ್ಯಸ್ಥರಿಗೆ ಸೂಚನೆ: ಕಾಲೇಜುಗಳಲ್ಲಿ ತರಗತಿ ನಡೆಸುವಾಗ ಕಾಲೇಜಿನ ಮುಖ್ಯಸ್ಥರು ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸುವಾಗ ಮತ್ತು ಮನೆಗೆ ತೆರಳುವ ಸಂದರ್ಭದಲ್ಲಿ ಅಪಾಯವಿಲ್ಲದೆ ಸುರಕ್ಷಿತವಾಗಿ ತಲುಪುವ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿಗಳು ಕಾಲೇಜಿನ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ. ಶಿಥಿಲ ಕಟ್ಟಡಗಳು ಇದ್ದಲ್ಲಿ ಅಂತಹ ಕಟ್ಟಡಗಳಲ್ಲಿ ತರಗತಿ ನಡೆಸುವಂತಿಲ್ಲ ಎಂದು ಸೂಚಿಸಿದ್ದಾರೆ

ವರ್ಕ್‌ ಫ್ರಂ ಹೋಮ್‌
ಆರೆಂಜ್‌ ಅಲರ್ಟ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಎಲ್ಲ ಐಟಿ, ಬಿಟಿ ಮತ್ತು ಖಾಸಗಿ ಕಂಪನಿಗಳಿಗೆ ಮನೆಯಿಂದ ಕೆಲಸ ಮಾಡಲು (ವರ್ಕ್‌ ಫ್ರಂ ಹೋಮ್‌) ಅನುಮತಿ ನೀಡುವಂತೆ ಕರ್ನಾಟಕ ನಾವಿನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯು ಸೂಚಿಸಿದೆ. ಬೆಂಗಳೂರಿಗೆ ಅ.16ರಂದು ಆರೆಂಜ್‌ ಅಲರ್ಟ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಐಟಿ, ಬಿಟಿ ಮತ್ತು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಎಲ್ಲ ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ನಾವು ಆದ್ಯತೆ ನೀಡುತ್ತಿದ್ದೇವೆ. ಪ್ರವಾಹ, ಜಲಾವೃತ ಮತ್ತು ಸಂಚಾರ ದಟ್ಟಣೆಯಿಂದಾಗಿ ಸಾರಿಗೆ ವ್ಯವಸ್ಥೆಗಳು ಅಸ್ತವ್ಯಸ್ತವಾಗಬಹುದು. ಕಚೇರಿ ಆವರಣಕ್ಕೆ ಪ್ರಯಾಣಿಸುವುದು ಅಪಾಯವನ್ನುಂಟುಮಾಡುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಐಟಿ, ಬಿಟಿ ಮತ್ತು ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಅ.16ರಂದು ರಂದು ಮನೆಯಿಂದ ಕೆಲಸ ಮಾಡಲು ಅನುಮತಿ ನೀಡುವಂತೆ ಶಿಫಾರಸು ಮಾಡಲಾಗಿದೆ.

ಟಾಸ್ ವಿಳಂಬ
ಇಂದು ಆರಂಭವಾಗಬೇಕಾದಿದ್ದ ಪ್ರವಾಸಿ ನ್ಯೂಜಿ ಲ್ಯಾಂಡ್ ವಿರುದ್ದದ ಸರಣಿಯ ಮೊದಲ ಟೆಸ್ಟ್ ಪಂದ್ಯ ಮಳೆಯಿಂದಾಗಿ ಟಾಸ್ ಪ್ರಕ್ರಿಯೆ ವಿಳಂಬವಾಗಿದೆ. ಪಂದ್ಯಕ್ಕೆ ಮಳೆ ಆದಿಯಾಗುವ ಎಲ್ಲ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next