Advertisement

Bengaluru Rain: ಮನೆ ಬಾಗಿಲು ಮುರಿದಾದ್ರೂ ಕಾರ್ಯಾಚರಣೆ ಮುಂದುವರಿಸಿ: ಡಿಸಿಎಂ ಶಿವಕುಮಾರ್

10:57 PM Oct 23, 2024 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಧಾರಾಕಾರ ಮಳೆಯಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿ ಯಲಹಂಕದ ಕೇಂದ್ರೀಯ ವಿಹಾರ, ಥಣಿಸಂದ್ರ ಮತ್ತು ಸಾಯಿಬಾಬಾ ಲೇಔಟ್​ಗೆ  ಬುಧವಾರ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K.Shivakumar)  ಭೇಟಿ ನೀಡಿ, ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ.

Advertisement

ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ ನಲ್ಲಿನ ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆಗಾಗಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದ ವೇಳೆ, ಸುಮಾರು 20 ಮನೆಗಳ ಮಾಲೀಕರು ಒಳಗೆ ಬೀಗ ಹಾಕಿಕೊಂಡು ಸ್ಥಳಾಂತರ ಕಾರ್ಯಾಚರಣೆಗೆ ಸಹಕಾರ ನೀಡಲು ನಿರಾಕರಿಸಿದ್ದಾರೆ. ಈ ವೇಳೆ ಬಾಗಿಲು ಮುರಿದು ಕಾರ್ಯಾಚರಣೆ ಮುಂದುವರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಗೆ ಡಿಸಿಎಂ ಶಿವಕುಮಾರ್‌ ಸೂಚನೆ ನೀಡಿದ್ದಾರೆ.

ಮನೆ ಮಾಲೀಕರ ಆರೋಗ್ಯಕ್ಕೆ ಹಾನಿ: 
ಮಾಧ್ಯಮದವರ ಉದ್ದೇಶಿಸಿ ಮಾತನಾಡಿದ ಅವರು, ಶೇ.95ರಷ್ಟು ಸ್ಥಳಾಂತರ ಕಾರ್ಯ ಪೂರ್ಣಗೊಂಡಿದ್ದು, ಶೇ.5ರಷ್ಟು ಮಾತ್ರ ಬಾಕಿ ಉಳಿದಿದೆ. “603 ಫ್ಲ್ಯಾಟ್‌ಗಳಲ್ಲಿ ಸಾವಿರಾರು ಜನರ ವಸತಿ ಇದೆ. ಅವರಲ್ಲಿ ಹೆಚ್ಚಿನವರು ಕೇಂದ್ರ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಾಗಿದ್ದು ಹೆಚ್ಚಿನವರ ಸ್ಥಳಾಂತರಿಸಲಾಗಿದೆ. “ಅಪಾರ್ಟ್‌ಮೆಂಟ್‌  ಆಡಳಿತದೊಂದಿಗಿನ ಮಾತುಕತೆ ನಂತರ, ತುರ್ತು ಕಾಮಗಾರಿಗಳಿಂದಾಗಿ ಬಿಬಿಎಂಪಿ ಅಪಾರ್ಟ್ಮೆಂಟ್ ನ್ನು ಸ್ವಾಧೀನಪಡಿಸಿಕೊಂಡಿದೆ. ನೀರು, ವಿದ್ಯುತ್ ಮತ್ತು ಆಹಾರವಿಲ್ಲದೇ ಮನೆಗಳಿಗೆ ಬೀಗ ಹಾಕಿಕೊಂಡಿರುವ ಸುಮಾರು 20 ಮಂದಿ ಮನೆ ಮಾಲೀಕರ ಆರೋಗ್ಯಕ್ಕೆ ಹಾನಿಯಾಗುವ ಭೀತಿಯಿಂದ ನಿವಾಸಿಗಳ ಸಂಘ ಮತ್ತು ಪೊಲೀಸರ ನೆರವು ಪಡೆದು ಬಾಗಿಲು ಒಡೆದು ರಕ್ಷಿಸುವಂತೆ ಬಿಬಿಎಂಪಿಗೆ ಆದೇಶ ನೀಡಲಾಗಿದೆ” ಎಂದರು.

ನಿವಾಸಿಗಳು ತಮ್ಮ ಮನೆಗಳ ಬಗ್ಗೆ ಭಾವನಾತ್ಮಕವಾಗಿರಬಹುದು ಮತ್ತು ಆದ್ದರಿಂದ ಹೊರಗೆ ಬರಲು ನಿರಾಕರಿಸಬಹುದು ಆದರೆ ಅವರ ಸುರಕ್ಷತೆಯೂ ಮುಖ್ಯ ಎಂದು ಡಿಸಿಎಂ ಹೇಳಿದರು. ಅವರನ್ನು ಒಂದು ವಾರದವರೆಗೆ ಹತ್ತಿರದ ಹೋಟೆಲ್‌ಗಳಲ್ಲಿ ಇರಿಸಲಾಗುವುದು ಮತ್ತು ಪರಿಸ್ಥಿತಿ ಸಹಜವಾದ ನಂತರ ಅವರನ್ನು ತಮ್ಮ ಮನೆಗಳಿಗೆ ಹಿಂತಿರುಗಲು ಹೇಳಲಾಗುವುದು ಎಂದು ಡಿಸಿಎಂ ಶಿವಕುಮಾರ್‌ ತಿಳಿಸಿದ್ದಾರೆ.

Advertisement

ಎನ್‌ಡಿಎಂಎಫ್‌ನೊಂದಿಗೆ ಮಳೆನೀರು ಚರಂಡಿಗಳ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲು ಕ್ರಮಗಳ ತೆಗೆದುಕೊಳ್ಳಲಾಗುವುದು ಮತ್ತು ವಿಶ್ವಬ್ಯಾಂಕ್‌ನಿಂದ ನೆರವು ಪಡೆಯಲಾಗುವುದು. ಮರುವಿನ್ಯಾಸವನ್ನು ನಗರದಾದ್ಯಂತ ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳಲಾಗುವುದು. ಕೆರೆಗಳ ಪುನಶ್ಚೇತನ ಹಾಗೂ ಒತ್ತುವರಿ ತೆರವು ಮಾಡುತ್ತೇವೆ ಎಂದೂ ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next