ಬೆಂಗಳೂರು: “ಬೆಂಗಳೂರು ಓಪನ್’ ಟೆನಿಸ್ ಪಂದ್ಯಾವಳಿಯಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್ ಅಗ್ರ ಶ್ರೇಯಾಂಕದ ಆಟಗಾರ, ಇಟಲಿಯ ಲುಕಾ ನಾರ್ಡಿ ಅವರಿಗೆ ಆಘಾತವಿಕ್ಕಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ವೈಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದ ರಾಮ್‌ಕುಮಾರ್ 1-6, 6-4, 6-4 ಅಂತರದಿಂದ ನಾರ್ಡಿ ಅವರ ಆಟವನ್ನು ಕೊನೆಗೊಳಿಸಿದರು. 2 ಗಂಟೆಗಳ ತನಕ ಇವರ ಹೋರಾಟ ಸಾಗಿತು.
ರಾಮ್‌ಕುಮಾರ್ ಅವರ ಕ್ವಾರ್ಟರ್ ಫೈನಲ್ ಎದುರಾಳಿ ದಕ್ಷಿಣ ಕೊರಿಯಾದ ಹಾಂಗ್ ಸಿಯಾಂಗ್ ಚಾನ್. ಇನ್ನೊಂದು ಪಂದ್ಯದಲ್ಲಿ ಚಾನ್ 6-4, 7-5ರಿಂದ ರಷ್ಯಾದ ಅಲೆಕ್ಸಿ ಝಕರೋವ್‌ಗೆ ಸೋಲುಣಿಸಿದರು.
ಆದರೆ 4ನೇ ಶ್ರೇಯಾಂಕದ ಫ್ರಾನ್ಸ್ ಆಟಗಾರ ಬೆಂಜಮಿನ್ ಬೊಂಝಿ ಸೋಲನುಭವಿಸಿದ್ದಾರೆ. ಇವರೆದುರು ಪೋಲೆಂಡ್‌ನ ಮ್ಯಾಕ್ಸ್ ಕಸ್ತಿಕೊವಸ್ಕಿ 6-3, 6-4 ಅಂತರದ ಜಯ ಸಾಧಿಸಿದರು. ಸ್ಪೇನ್‌ನ ರೋಕಾ ಬಟಲ್ಲ 7-5, 6-3ರಿಂದ ಅಮೆರಿಕದ ಟ್ರಿಸ್ಟಿನ್ ಬಾಯರ್ ಅವರನ್ನು ಮಣಿಸಿದರು.