ಬೆಂಗಳೂರು: ಬೆಂಗಳೂರಿನ ಕೆಎಸ್‌ಎಲ್‌ಟಿಎ ಮೈದಾನದಲ್ಲಿ ಫೆ. 20ರಿಂದ 26ರ ವರೆಗೆ “ಬೆಂಗಳೂರು ಓಪನ್ ಟೆನಿಸ್’ ಪಂದ್ಯಾವಳಿ ನಡೆಯಲಿದೆ. ಇದರಲ್ಲಿ ವಿಶ್ವದ ಮಾಜಿ ನಂ.10 ಆಟಗಾರ ಲೂಕಾಸ್ ಪೌಲೆ, ಕಳೆದ ವರ್ಷದ ಚಾಂಪಿಯನ್ ಚುನ್ ಹ್ಸಿನ್ ತ್ಸೆಂಗ್ ಭಾಗವಹಿಸಲಿದ್ದು, ಕೂಟದ ಮುಖ್ಯ ಆಕರ್ಷಣೆ ಆಗಲಿದ್ದಾರೆ.
ಈ ಪ್ರತಿಷ್ಠಿತ ಎಟಿಪಿ ಚಾಲೆಂಜರ್ ಟೆನಿಸ್ ಕೂಟವನ್ನು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಆಯೋಜಿಸುತ್ತಿದೆ.
“ಬೆಂಗಳೂರು ವಿಶ್ವದ ಟೆನಿಸ್ ಆಟಗಾರರಿಗೆ ಮೆಚ್ಚಿನ ಸ್ಥಳ. ಈ ವರ್ಷವೂ ನಮಗೆ ವಿಶ್ವಾದ್ಯಂತ ಉತ್ತಮ ಪ್ರತಿಕ್ರಿಯೆ ಬಂದಿರುವುದಕ್ಕೆ ಸಂತೋಷವಾಗಿದೆ. ಹಲವು ಪ್ರಮುಖ ಆಟಗಾರರು ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ.
ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಕಣಕ್ಕಿಳಿಯಲು, ಎಟಿಪಿ ಟೂರ್‌ಗಳಲ್ಲಿ ಆಡಲು ಈ ಕೂಟ ಅಡಿಗಲ್ಲಿನಂತೆ ನೆರವಾಗುತ್ತದೆ. ಈ ಬಾರಿ 5ನೇ ಆವೃತ್ತಿ ಯಶಸ್ವಿಯಾಗುತ್ತದೆ ಎಂಬ ಭರವಸೆ ನಮಗಿದೆ’ ಎಂದು ಕೂಟದ ನಿರ್ದೇಶಕ ಸುನೀಲ್ ಯಜಮಾನ್ ಹೇಳಿದ್ದಾರೆ.
ಈ ಬಾರಿ ಆಡಲಿರುವ ಫ್ರೆಂಚ್ ಆಟಗಾರ ಲೂಕಾಸ್ ಪೌಲೆ 2016ರ ಅಮೆರಿಕ ಗ್ರ್ಯಾನ್‌ಸ್ಲಾಮ್‌ನ 4ನೇ ಸುತ್ತಿನಲ್ಲೇ ರಫೆಲ್ ನಡಾಲ್ ಅವರನ್ನು ಮಣಿಸಿದ್ದರು.