Advertisement

ಬೆಂಗಳೂರು ಉತ್ತರ: ಹೊರ ಊರಿನವರಿಗೇ ಮಣೆ ಹಾಕಿದ ಘಟಾನುಘಟಿಗಳ ಕ್ಷೇತ್ರ

12:52 AM Mar 22, 2024 | Team Udayavani |

ಬೆಂಗಳೂರು: ಹಲವು ಬಾರಿ ಹೆಸರು ಬದಲಾವಣೆ ಹಾಗೂ ಪುನರ್ವಿಂಗಡಣೆಗೆ ಒಳಗಾದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವು ಮೂವರು ಕೇಂದ್ರ ಮಂತ್ರಿಗಳನ್ನು ಕೊಟ್ಟಿದ್ದು, ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಸಂಸದರಾಗುವ ಅವಕಾಶ ಮಾಡಿಕೊಟ್ಟ ಕ್ಷೇತ್ರ. ಘಟಾನುಘಟಿಗಳ ಸೋಲು ಹಾಗೂ ಗೆಲುವಿಗೆ ಕಾರಣವಾದ ಈ ಕ್ಷೇತ್ರದಲ್ಲಿ 2004ರಿಂದ ಬಿಜೆಪಿ ಪಾರುಪತ್ಯ ಸಾಧಿಸಿದೆ.

Advertisement

1952ರ ಮೊದಲ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ನ ಕೇಶವ ಅಯ್ಯಂಗಾರ್‌ ಈ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದರೆ, ವಿಧಾನಸೌಧ ನಿರ್ಮಾತೃ, ಮಾಜಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರು ಇದೇ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದಲ್ಲದೆ, ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದರು. ಅದರಲ್ಲೂ ರೈಲ್ವೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ಬರೋಬ್ಬರಿ 7 ಬಾರಿ ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿದ್ದ ಸಿ.ಕೆ. ಜಾಫ‌ರ್‌ ಷರೀಫ್ ಕೂಡ ಕೇಂದ್ರದಲ್ಲಿ ರೈಲ್ವೆ ಸಹಿತ ವಿವಿಧ ಖಾತೆಗಳನ್ನು ನಿಭಾಯಿಸಿದ್ದರು. 1996ರಲ್ಲಿ ಮಾತ್ರ ಜೆಡಿಎಸ್‌ನ ಸಿ.ನಾರಾಯಣ ಸ್ವಾಮಿ ಗೆದ್ದಿದ್ದು ಬಿಟ್ಟರೆ, ಸುಮಾರು 46 ವರ್ಷಗಳ ಕಾಲ ಕಾಂಗ್ರೆಸ್‌ ಭದ್ರವಾಗಿ ನೆಲೆಯೂರಿತ್ತು. 2004ರಲ್ಲಿ ಎಚ್‌.ಟಿ. ಸಾಂಗ್ಲಿಯಾನ ಗೆಲ್ಲುವ ಮೂಲಕ ಬಿಜೆಪಿಯ ಖಾತೆ ತೆರೆದರಲ್ಲದೆ, ಅಂದಿನಿಂದ ಈವರೆಗೆ ಬಿಜೆಪಿಯೇ ಗೆಲ್ಲುತ್ತಾ ಬಂದಿದೆ. ಡಿ.ಬಿ. ಚಂದ್ರೇಗೌಡರ ಬಳಿಕ ಎರಡು ಬಾರಿ ಬಿಜೆಪಿಯಿಂದಲೇ ಗೆದ್ದ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಇತ್ತೀಚಿನವರೆಗೆ ಕೇಂದ್ರ ಮಂತ್ರಿಯಾಗಿಯೂ ಇದ್ದರು.

ವಲಸಿಗರ ಕೈ ಹಿಡಿದದ್ದೇ ಹೆಚ್ಚು
ಬಹುತೇಕ ವಲಸಿಗರನ್ನೇ ಗೆಲ್ಲಿಸಿರುವ ಇಲ್ಲಿನ ಮತದಾರರು ಸ್ಥಳೀಯರನ್ನು ಕೈ ಹಿಡಿದದ್ದು ಕಡಿಮೆ. ಮಾಜಿ ಸಿಎಂ ಕೆಂಗಲ್‌ ಹನುಮಂತಯ್ಯ ಅವರು ಮೂಲತಃ ರಾಮನಗರದವರಾದರೆ, ಜಾಫ‌ರ್‌ ಷರೀಫ್ ಚಳ್ಳಕೆರೆಯವರು. ಡಿ.ಬಿ. ಚಂದ್ರೇಗೌಡ ಚಿಕ್ಕಮಗಳೂರಿನವರಾಗಿದ್ದರೆ, ಡಿ.ವಿ. ಸದಾನಂದ ಗೌಡ ದಕ್ಷಿಣ ಕನ್ನಡ ಜಿಲ್ಲೆಯವರು. ಮೊದಲೆರಡು ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯದ ಕೇಶವ ಅಯ್ಯಂಗಾರ್‌ ಅವರಿಗೆ ಮಣೆ ಹಾಕಿದ್ದ ಮತದಾರರು, ಅಲ್ಪಸಂಖ್ಯಾಕ ಸಮುದಾಯದ ಜಾಫ‌ರ್‌ ಷರೀಫ್, ಸಾಂಗ್ಲಿಯಾನರಿಗೂ ವಿಜಯಮಾಲೆ ತೊಡಿಸಿದ್ದರು. ಉಳಿದಂತೆ ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದ್ದು, ಇದೇ ಲೆಕ್ಕಾಚಾರದಲ್ಲಿ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳಿಗಾಗಿಯೇ ರಾಜಕೀಯ ಪಕ್ಷಗಳೂ ಒಲವು ತೋರುತ್ತಿವೆ.

ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಗೆದ್ದಿದ್ದರೆ, ಮೂರರಲ್ಲಿ ಕಾಂಗ್ರೆಸ್‌ ಬಲವಿದೆ. ಆದರೆ ಯಶವಂತಪುರದ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಅಡ್ಡ ಮತದಾನ ಮಾಡಿದ್ದು, ಬಿಜೆಪಿಯಿಂದ ಹೊರಬಂದಂತಾಗಿದೆ. ಅಧಿಕೃತವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಯಶವಂತಪುರದಲ್ಲಿ ಉಪಚುನಾವಣೆ ಎದುರಿಸುವುದು ಕಷ್ಟವಿದೆ. ಅದರ ಬದಲು ಲೋಕಸಭೆಗೇ ಸ್ಪರ್ಧಿಸುವ ಅವಕಾಶವನ್ನು ಕಾಂಗ್ರೆಸ್‌ ನೀಡಲು ಚಿಂತನೆ ನಡೆಸಿದೆ. ಸೋಮಶೇಖರ್‌ ಕೂಡ ಇದಕ್ಕೆ ತಯಾರಾಗುತ್ತಿದ್ದಾರೆ. ಚುನಾವಣೆ ಕಾವೇರಿದ ಬಳಿಕ ಕ್ಷೇತ್ರದ ರಾಜಕೀಯ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಆಗುವ ಸಾಧ್ಯತೆಗಳಿವೆ.

Advertisement

ಡಿ.ವಿ. ಸದಾನಂದ ಗೌಡ, ಹಾಲಿ ಸಂಸದ
ಪಕ್ಷ: ಬಿಜೆಪಿ
ಪಡೆದ ಮತ: 8,24,500
ಗೆಲುವಿನ ಅಂತರ: 1,47,518

ಮತದಾರರ ವಿವರ
ಮತದಾರರು 2024 2019
ಪುರುಷರು 16.08 ಲಕ್ಷ 14.8 ಲಕ್ಷ
ಮಹಿಳೆಯರು 15.21 ಲಕ್ಷ 13.66 ಲಕ್ಷ
ಇತರ 593 498
ಒಟ್ಟು 31.30 ಲಕ್ಷ 28.48 ಲಕ್ಷ

 ಸಾಮಗ ಶೇಷಾದ್ರಿ

Advertisement

Udayavani is now on Telegram. Click here to join our channel and stay updated with the latest news.

Next