ಬೆಂಗಳೂರು : ಇತ್ತೀಚೆಗೆ ನಡೆದ ಮೆಟ್ರೋ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನಿಲ್ ಕುಮಾರ್ ಅವರು ಬೆಂಗಳೂರು ಮೆಟ್ರೋ ಗೆ ನೋಟಿಸ್ ನೀಡಿದ್ದಾರೆ.
ಈ ಕುರಿತು ಮೆಟ್ರೋ ಅಧಿಕಾರಿಗಳಿಗೆ ನೀಡಿದ ನೋಟಿಸ್ ನಲ್ಲಿ : ಆಗಸ್ಟ್ 29 ರಂದು ನಾಯಂಡಹಳ್ಳಿ – ಕೆಂಗೇರಿ ನಡುವಿನ ಮೆಟ್ರೋ ರೈಲು ಸಂಚಾರದ ಉದ್ಘಾಟನಾ ಸಮಾರಂಭದ ಮುಖ್ಯ ವೇದಿಕೆಯ ಫಲಕಗಳಲ್ಲಿ ಹಾಗೂ ಹಿಂಬದಿಯ ಪರದೆಯಲ್ಲಿ ಕನ್ನಡ ಭಾಷೆಯನ್ನು ಬಳಸದಿರುವುದು ನಿಜಕ್ಕೂ ಗಂಭೀರವಾದ ಸಂಗತಿಯಾಗಿದೆ, ರಾಜ್ಯ ರಾಜಧಾನಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯದ ಅಧಿಕೃತ ಆಡಳಿತ ಭಾಷೆಯನ್ನು ಕಡೆಗಣಿಸಿದ್ದು ಗಂಭೀರವಾದ ಲೋಪವಾಗಿದೆ ಎಂದಿದ್ದಾರೆ.
ಈಗಾಗಲೇ ಆಡಳಿತ ಭಾಷೆಯಾಗಿ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದರೂ ಇಂತಹ ಕರ್ತವ್ಯ ಲೋಪವಾಗಿರುವುದು ದುರದೃಷ್ಟಕರ ಈ ಬಗ್ಗೆ ಗಮನಹರಿಸುವುದು ನಿಮ್ಮ ಹಾಗೂ ನಮ್ಮ ಅಧೀನದಲ್ಲಿರುವ ಅಧಿಕಾರಿಗಳ ಕರ್ತವ್ಯವಾಗಿದೆ. ಆದರೂ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿರುವುದನ್ನು ಸಹಿಸಲಾಗದು, ಭಾಷೆ ಒಂದು ಭಾವನಾತ್ಮಕ ವಿಚಾರ, ಅದರಲ್ಲಿಯೂ ಆಡಳಿತ ಭಾಷೆಯ ಬಗ್ಗೆ ನಿರ್ಲಕ್ಷ್ಯ ತೋರಿದ್ದೇ ಆದರೆ ಅದು ಜನತೆಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಬೇಕಾದ ಸರಕಾರದ ಇಲಾಖೆಗಳು ಈ ರೀತಿಯ ಲೋಪವೆಸಗುವುದು ಗಂಭೀರ ಕರ್ತವ್ಯಲೋಪವೆಂದು ಪರಿಗಣಿಸಲ್ಪಡುತ್ತದೆ.
ಇದನ್ನೂ ಓದಿ :ಕುಟುಂಬದ ಜೊತೆ ಮಾಲ್ಡೀವ್ಸ್ ಪ್ರವಾಸ : ಬ್ಲೂ ಬಿಕಿನಿಯಲ್ಲಿ ಸನ್ನಿ ಲಿಯೋನ್
ಆದುದರಿಂದ ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಸೂಕ್ತ ವಿವರಣೆಯನ್ನು ನೀಡಬೇಕೆಂದು ಬೆಂಗಳೂರು ಮೆಟ್ರೋ ಗೆ ಸಚಿವರು ನೋಟಿಸ್ ಜಾರಿಮಾಡಿದ್ದಾರೆ.