Advertisement

Bengaluru: ವಿಧಾನಸೌಧದ ಎದುರೇ ಬೈಕ್‌ಗೆ ಬೆಂಕಿ ಹಚ್ಚಿದ ಭೂಪ!

01:27 PM Aug 15, 2024 | Team Udayavani |

ಬೆಂಗಳೂರು: ನಾಪತ್ತೆ ದೂರು ನೀಡಲು ಹೋದ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪೊಲೀಸರ ಮೇಲಿನ ಕೋಪಕ್ಕೆ ಯುವಕನೊಬ್ಬ ವಿಧಾನಸೌಧ ಮುಂಭಾಗ ತನ್ನ ಎಲೆಕ್ಟ್ರಿಕ್‌ ಬೈಕ್‌ಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈ ಸಂಬಂಧ ಯುವಕನನ್ನು ಬಂಧಿಸಲಾಗಿದೆ.

Advertisement

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಪೃಥ್ವಿರಾಜ್‌(27) ಬಂಧಿತ ಆರೋಪಿ.

ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧ ಮುಂಭಾಗ ಬೈಕ್‌ಗೆ ಬೆಂಕಿ ಹಚ್ಚಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈ ಸಂಬಂಧ ಸಾರ್ವಜನಿಕ ಸ್ಥಳದಲ್ಲಿ ಬೆಂಕಿ ಹಾಕಿ ದುರ್ವರ್ತನೆ ತೋರಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ವಿಧಾನಸೌಧ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಡಿಪ್ಲೊಮಾ ಪದವಿ ಪಡೆದಿರುವ ಪೃಥ್ವಿರಾಜ್‌ ಯಶವಂತ ಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ. 15 ದಿನಗಳ ಹಿಂದೆ ಸ್ನೇಹಿತರ ಜತೆಗೆ ಪ್ರವಾಸಕ್ಕೆ ತೆರಳಿದ್ದ. 3 ದಿನ ಕಳೆದರೂ ಚಳ್ಳಕೆರೆಯಲ್ಲಿದ್ದ ತಾಯಿಗೆ ಕರೆ ಮಾಡಿರಲಿಲ್ಲ. ತಾಯಿ ಕರೆ ಮಾಡಿದಾಗ ಈತನ ಮೊಬೈಲ್‌ ಸ್ವಿಚ್ಡ್ ಆಫ್ ಆಗಿತ್ತು. ಅದರಿಂದ ಗಾಬರಿಗೊಂಡಿದ್ದ ತಾಯಿ, ಚಳ್ಳಕೆರೆ ಪೊಲೀಸ್‌ ಠಾಣೆಗೆ ತೆರಳಿ ಮಗನ ನಾಪತ್ತೆ ಪ್ರಕರಣ ದಾಖಲಿಸುವಂತೆ ಕೋರಿ ದ್ದರು. ದೂರು ಸ್ವೀಕರಿದ ಪೊಲೀಸರು, ಆಕೆಯನ್ನು ನಿಂದಿಸಿ ವಾಪಸ್‌ ಕಳುಹಿಸಿದ್ದರು ಎಂದು ಹೇಳಲಾಗಿದೆ.

ಇನ್ನು ವಾರದ ಬಳಿಕ ಪೃಥ್ವಿರಾಜ್‌ ಮನೆಗೆ ಬಂದಿದ್ದ. ಆಗ ಪೊಲೀಸರು ದೂರು ಸ್ವೀಕರಿಸದೇ ನಿಂದಿಸಿ ಕಳುಹಿಸಿದ್ದರು ಎಂದು ತಾಯಿ ಹೇಳಿದ್ದರು. ಅದರಿಂದ ಸಿಟ್ಟಿಗೆದ್ದ ಪೃಥ್ವಿರಾಜ್‌, ತಾಯಿಯೊಂದಿಗೆ ಠಾಣೆಗೆ ತೆರಳಿ ನಾಪತ್ತೆ ದೂರು ಏಕೆ ಸ್ವೀಕರಿಸಿಲ್ಲ ಎಂದು ಪ್ರಶ್ನಿಸಿದ್ದ. ಆಗ ಪೊಲೀಸರು ಮೊಬೈಲ್‌ ಕಸಿದುಕೊಂಡು ಠಾಣೆಯೊಳಗೆ ಕರೆದೊಯ್ದಿದ್ದರು. ಇದರಿಂದ ಸಿಟ್ಟಿಗೆದ್ದು ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

Advertisement

ವಿಧಾನಸೌಧ ಸ್ಪೋಟಿಸುವುದಾಗಿ ಬೆದರಿಕೆ

ಆರೋಪಿ ಪೃಥ್ವಿರಾಜ್‌ ಕೆಲ ದಿನಗಳ ಹಿಂದೆ ವಿಧಾನಸೌಧ, ಐಐಎಸ್‌ಸಿ ಸೇರಿ ಕೆಲ ಕಟ್ಟಡ ಗಳನ್ನು ಸ್ಫೋಟಿಸುವುದಾಗಿ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮ ಗಳಲ್ಲಿ ಹರಿಬಿಟ್ಟಿದ್ದ. ಅದನ್ನು ಗಮನಿಸಿದ ಚಳ್ಳ ಕೆರೆ ಡಿವೈಎಸ್ಪಿ ಠಾಣೆಗೆ ಕರೆಸಿ ಪ್ರಶ್ನಿಸಿದಾಗ, ಆಗ ಯುವಕ “ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳಿ. ಇಲ್ಲವೇ ಪಿಸ್ತೂಲ್‌ನಿಂದ ಪಿಎಸ್‌ಐಗೆ ಗುಂಡು ಹಾರಿಸುತ್ತೇನೆ’ ಎಂದು ಬೆದರಿಕೆ ಒಡ್ಡಿದ್ದ.

ಆಗ ಪೃಥ್ವಿ ಹಾಗೂ ಅವರ ತಾಯಿಗೆ ಡಿವೈಎಸ್ಪಿ ಎಚ್ಚರಿಕೆ ನೀಡಿ ಕಳುಹಿಸಿ ದ್ದರು. ಬುಧವಾರ ಯಶವಂತ ಪುರಕ್ಕೆ ಮನೆಗೆ ಬಂದು ಸ್ವಂತ ಬೈಕ್‌ ಅನ್ನು ವಿಧಾನಸೌಧ ಎದುರು ತಂದು ಬೆಂಕಿ ಹಾಕಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಏನಿದು ಘಟನೆ?

● ಇತ್ತೀಚೆಗೆ 15 ದಿನ ಕಾಲ ಪ್ರವಾಸಕ್ಕೆ ತೆರಳಿದ್ದ ಯುವಕ, ಆಗ ತಾಯಿಗೆ ಕರೆ ಮಾಡಿರಲಿಲ್ಲ, ಮೊಬೈಲ್‌ ಕೂಡ ಸ್ವಿಚ್ಡ್ ಆಫ್ ಆಗಿತ್ತು

● ಮಗನ ನಾಪತ್ತೆ ಕುರಿತು ಚಳ್ಳಕೆರೆ ಠಾಣೆಗೆ ದೂರು ನೀಡಲು ತೆರಳಿದ್ದ ತಾಯಿ

● ಆಗ ದೂರು ಸ್ವೀಕರಿಸದೇ ಪೊಲೀಸರಿಂದ ತಾಯಿಗೆ ನಿಂದನೆ: ಆರೋಪ

● ಪ್ರವಾಸದಿಂದ ವಾಪಸ್‌ ಬಂದ ಬಳಿಕ ಠಾಣೆ ತೆರಳಿ ಪೊಲೀಸರನ್ನು ಪ್ರಶ್ನಿಸಿದ್ದ ಯುವಕ

● ಆಗ ಪೊಲೀಸರು ಯುವಕನಿಂದ ಮೊಬೈಲ್‌ ಕಸಿದುಕೊಂಡಿದ್ದರು: ಆರೋಪ

● ಪೊಲೀಸರ ಮೇಲಿನ ಸಿಟ್ಟಿನಿಂದಾಗಿ ವಿಧಾನಸೌಧ ಬಳಿ ಬೈಕ್‌ಗೆ ಬೆಂಕಿ ಹಚ್ಚಿದ

Advertisement

Udayavani is now on Telegram. Click here to join our channel and stay updated with the latest news.

Next