Advertisement

Bengaluru: 5 ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ: ಸಿಎಂ

12:16 PM Sep 13, 2024 | Team Udayavani |

ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Advertisement

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಾರಿಗೆ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಎಂಟಿಸಿಗೆ ಸೇರ್ಪಡೆಯಾದ 100 ನೂತನ ಬಿಎಸ್‌-6 ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

ಬಡವ ಮತ್ತು ಶ್ರೀಮಂತರ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿ ತಂದಿದೆ. “ಶಕ್ತಿ’ ಯೋಜನೆ ಕಾರ್ಯಗತದ ನಂತರ ಸರ್ಕಾರಿ ಬಸ್‌ನಲ್ಲಿ ಓಡಾಡುವರ ಸಂಖ್ಯೆ ಹೆಚ್ಚಾಗಿದೆ. ಮೆಟ್ರೋ ಗಿಂತಲೂ ನಾಲ್ಕೈದು ಪಟ್ಟು ಜನರು ಪ್ರತಿ ದಿನ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ ಎಂದು ತಿಳಿಸಿದರು.

ಬಿಎಂಟಿಸಿ ಬಸ್‌ಗಳಲ್ಲಿ ಪ್ರತಿದಿನ 40 ಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಓಡಾಡುತ್ತಿದ್ದಾರೆ. ಶೀಘ್ರದಲ್ಲಿ ಶಕ್ತಿ ಯೋಜನೆಯಡಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ 300 ಕೋಟಿಗೆ ತಲುಪಲಿದೆ ಎಂದು ಹೇಳಿದರು.

ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಾಗಲೂ ಅತ್ತೆ- ಸೊಸೆಗೆ ಜಗಳ ತಂದಿಡಲು ಕಾಂಗ್ರೆಸ್‌ ಹೊರಟಿದೆ ಎಂದು ಟೀಕಿಸಿದ್ದರು. ಆದರೆ ಈ ರಾಜ್ಯದ 1ಕೋಟಿ 23 ಲಕ್ಷ ಕುಟುಂಬಗಳಿಗೆ ತಿಂಗಳಿಗೆ 2 ಸಾವಿರ ರೂ. ನೀಡಲಾಗುತ್ತಿದೆ. ಇತ್ತೀಚೆಗೆ ಅತ್ತೆಯೇ ಗೃಹಲಕ್ಷಿ ಯೋಜನೆಯಡಿ ತನ್ನ ಸೊಸೆಗೆ ಬಳೆ ಅಂಗಡಿ ನಿರ್ಮಿಸಿ ಕೊಟ್ಟಿದ್ದಾರೆ ಎಂದು ತಿಳಿಸಿದರು.

Advertisement

336 ಕೋಟಿ ರೂ. ವೆಚ್ಚದಲ್ಲಿ ಬಸ್‌ ಖರೀದಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, 336 ಕೋಟಿ ರೂ. ವೆಚ್ಚದಲ್ಲಿ 840 ಬಿಎಸ್‌-6 ಬಸ್‌ಗಳನ್ನು ಖರೀದಿಸ ಲಾಗಿದೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಾನಿಕ್‌ ಸೇರಿದಂತೆ ಮತ್ತಷ್ಟು ಬಸ್‌ಗಳು ರಸ್ತೆಗಿಳಿಯಲಿವೆ ಎಂದರು.

ಈ ವೇಳೆ ವಸತಿ ಸಚಿವ ಜಮೀರ್‌ ಅಹಮದ್‌, ಇಂಧನ ಸಚಿನ ಕೆ.ಜೆ.ಜಾರ್ಜ್‌, ಕೆಕೆಆಡಿರ್‌ಬಿ ಅಧ್ಯಕ್ಷರಾದ ಅಜಯ್‌ ಸಿಂಗ್‌, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್‌ ಅಹಮದ್‌ ಇತರರಿದ್ದರು.

ನೂತನ ಬಸ್‌ನ ವಿಶೇಷತೆಗಳೇನು?

 ಪರಿಸರ ಸ್ನೇಹಿ ಬಸ್‌ಗಳಾಗಿವೆ.

 ಬಿಎಸ್‌ -4 ಬಸ್‌ ಗೆ ಹೋಲಿಸಿದರೆ ಹೊಗೆ ಹೊರಸುಸುವಿಕೆ ಕಡಿಮೆ

 11 ಮೀಟರ್‌ ಉದ್ದ, ಹವಾನಿಯಂತ್ರಣರಹಿತ, ಡೀಸೆಲ್‌ ಚಾಲಿತ ಬಸ್‌ಗಳಾಗಿವೆ

 ಪ್ರಯಾಣಿಕರ ಸುರಕ್ಷತೆಗಾಗಿ ಬಸ್‌ನೊಳಗೆ 3 ಸಿಸಿ ಕ್ಯಾಮೆರಾ ಅಳವಡಿಕೆ

 3 ಎಲ್‌.ಇ.ಡಿ ಬೋರ್ಡ್‌

 ವಾಯ್ಸ್ ಅನೌನ್‌‌ಸ್ಮೆಂಟ್‌ ವ್ಯವಸ್ಥೆ

 ಮಹಿಳೆಯರ ಸುರಕ್ಷತೆಗೆ ತುರ್ತು ಪ್ಯಾನಿಕ್‌ ಅಲಾರ್ಮ್ ಬಟನ್‌

 ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರ ನಿಲುಗಡೆಗೆ ಸ್ಟಾಪ್‌ ಬಟನ್‌

Advertisement

Udayavani is now on Telegram. Click here to join our channel and stay updated with the latest news.