ಬೆಂಗಳೂರು: ಕಾರಿನಲ್ಲಿ ಪೆಪ್ಪರ್ ಸ್ಪ್ರೆ ಇಟ್ಟುಕೊಳ್ಳುವುದು ತಪ್ಪಾ?! ಹೀಗೊಂದು ಪ್ರಶ್ನೆ ಹುಟ್ಟಿಕೊಂಡಿದೆ.
ಇತ್ತೀಚೆಗೆ ಆಡುಗೋಡಿ ಠಾಣೆ ಪೊಲೀಸರು ವಾಹನಗಳ ತಪಾಸಣೆ ವೇಳೆ ಕಾರಿನಲ್ಲಿ ಪೆಪ್ಪರ್ ಸ್ಪ್ರೆ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿರುವ ಸ್ವಾರಸ್ಯಕರ ಪ್ರಸಂಗ ಬೆಳಕಿಗೆ ಬಂದಿದೆ.
ಈ ಕುರಿತು ವಿಚಾರಣೆಗೊಳಗಾದ ವ್ಯಕ್ತಿ ಆಡುಗೋಡಿ ಠಾಣೆ ಪೊಲೀಸರ ವರ್ತನೆ ಬಗ್ಗೆ ಬೇಸರಗೊಂಡು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಘಟನೆಯನ್ನು ವಿವರಿಸಿದ್ದಾರೆ. ಅಲ್ಲದೆ, ಕಾರಿನಲ್ಲಿ ಪೆಪ್ಪರ್ ಸ್ಪ್ರೆ ಇಟ್ಟುಕೊಳ್ಳುವುದು ತಪ್ಪಾ? ಎಂದು ಪ್ರಶ್ನಿಸಿ ನಗರ ಪೊಲೀಸ ಆಯುಕ್ತರು, ಡಿಜಿಪಿ-ಐಜಿಪಿಗೆ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ:ಭಾರತೀಯ ದೃಷ್ಟಿಕೋನದಿಂದ ಇತಿಹಾಸ ಬರೆಯುವ ಸಮಯ ಬಂದಿದೆ: ಅಮಿತ್ ಶಾ
ಜ.8ರಂದು ದೂರುದಾರ ವ್ಯಕ್ತಿ ಕೋರಮಂಗಲದ ಮಾಲ್ ಎಂದುರು ಕಾರಿನಲ್ಲಿ ಸ್ನೇಹಿತರಿಗಾಗಿ ಕಾಯುತ್ತಾ ಕುಳಿತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಆಡುಗೋಡಿ ಠಾಣೆ ಕಾನ್‌ಸ್ಟೇಬಲ್, ಭದ್ರತಾ ತಪಾಸಣೆಗಾಗಿ ಕಾರು ಪರಿಶೀಲಿಸಿದ್ದಾರೆ. ಆಗ ಕಾರಿನಲ್ಲಿ ಪೆಪ್ಪರ್ ಸ್ಪ್ರೆ ಪತ್ತೆಯಾಗಿದೆ. ಆಗ ಕಾರು ಮಾಲೀಕನಿಗೆ ಯಾವ ಕಾರಣಕ್ಕೆ ಪೆಪ್ಪರ್ ಸ್ಪ್ರೆ ಇಟ್ಟುಕೊಂಡಿದ್ದಿರಾ? ಎಂದು ಪ್ರಶ್ನಿಸಿದ್ದಾರೆ. ಕಾರು ಮಾಲೀಕ ಸುರಕ್ಷತೆಗಾಗಿ ಇಟ್ಟುಕೊಂಡಿದ್ದೇನೆ ಪ್ರತಿಕ್ರಿಯಿಸಿದ್ದಾರೆ. ಆಗ ಕಾನ್ ಸ್ಟೇಬಲ್ ಈ ರೀತಿ ಅನಗತ್ಯವಾಗಿ ಪೆಪ್ಪರ್ ಸ್ಪ್ರೆ ಇಟ್ಟುಕೊಳ್ಳುವುದು ತಪ್ಪು ಎಂದಿದ್ದಾರೆ. ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಅದನ್ನು ವಿಡಿಯೋ ಮಾಡಿಕೊಳ್ಳುವಾಗ ಸ್ಥಳಕ್ಕೆ ಬಂದ ಮತ್ತೂಬ್ಬ ಕಾನ್ ಸ್ಟೇಬಲ್ ಮೊಬೈಲ್ ಕಸಿದುಕೊಂಡು ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕೂರಿಸಿ, ಬಳಿಕ ತನ್ನ ಮೊಬೈಲ್ ನಲ್ಲಿದ್ದ ವಿಡಿಯೋ ಡಿಲೀಟ್ ಮಾಡಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ಆರೋಪಿಸಿ ಡಿಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಖಾತೆಗೆ ಟ್ಯಾಗ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಳಿಕ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಅವರಿಗೆ ತನಿಖೆ ನಡೆಸುವಂತೆ ಸೂಚಿಸಲಾಗಿತ್ತು. ಈ ಸಂಬಂಧ ಮಡಿವಾಳ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆಎಂದು ಪೊಲೀಸರು ಹೇಳಿದರು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಗ್ನೇಯ ವಿಭಾಗದ ಪೊಲೀಸರು ಜನವರಿ 8ರಂದು ರಾತ್ರಿ ದೂರು ನೀಡಿರುವ ವ್ಯಕ್ತಿ ಅನುಮಾನಸ್ಪಾದವಾಗಿ ಕಂಡಿದ್ದರ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಆತನನ್ನು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಮಡಿವಾಳ ವಿಭಾಗದ ಎಸಿಪಿ ತನಿಖೆ ನಡೆಸುತ್ತಿದ್ದು ವರದಿ ಬಂದ ಬಳಿಕ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.