ಮಣಿಪಾಲ:ಕೊಂಕಣ ರೈಲು ಹಳಿ ದ್ವಿಪಥ ಹಾಗೂ ಬೆಂಗಳೂರಿನಿಂದ ಕಾರವಾರಕ್ಕೆ ರಾತ್ರಿ 10 ಕ್ಕೆ ವಿಶೇಷ ರೈಲು ಸೇವೆ ಒದಗಿಸಲು ಪ್ರಸ್ತಾವವನ್ನು ಶೀಘ್ರವೇ ರೈಲ್ವೇ ಇಲಾಖೆಗೆ ಸಲ್ಲಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೊಂಕಣ ರೈಲ್ವೇ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿ ಸಂಕೀರ್ಣದಲ್ಲಿನ ತಮ್ಮ ಕಚೇರಿಯಲ್ಲಿ ರೈಲ್ವೇ ಅಧಿಕಾರಿಗಳ ಸಭೆ ನಡೆಸಿದ ಅವರು, ಕರಾವಳಿಗರ ಅನುಕೂಲಕ್ಕೆ ರಾತ್ರಿ 10 ಕ್ಕೆ ಬೆಂಗಳೂರಿನಿಂದ ಕಾರವಾರಕ್ಕೆ ಹೊರಡುವ ಒಂದು ರೈಲು ಅಗತ್ಯವಿದೆ. ಇದಕ್ಕಾಗಿ ಶೀಘ್ರವೇ ಪ್ರಸ್ತಾವ ಸಲ್ಲಿಸಿದ ಕೂಡಲೇ ರೈಲ್ವೇ ಸಚಿವರೊಂದಿಗೆ ಚರ್ಚಿ ಸಲಾಗುವುದು. ಜತೆಗೆ 111 ಕಿ.ಮೀ. ರೈಲು ಹಳಿ ದ್ವಿಪಥಕ್ಕೂ ಇನ್ನೊಮ್ಮೆ ಪ್ರಸ್ತಾವ ಸಲ್ಲಿಸಲು ನಿರ್ದೇಶಿಸಿದರು.
ವಂದೇ ಭಾರತ್ ರೈಲು ಕುಂದಾಪುರ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಬೇಕು. ಈ ರೈಲು ಸೇವೆಯನ್ನು ಮಂಗಳೂರಿನಿಂದ ಬೆಂಗಳೂರಿನವರೆಗೆ ಹಾಗೂ ಕಾರವಾರದಿಂದ ಮುಂಬಯಿವರೆಗೂ ವಿಸ್ತರಿಸಲು ಕೇಂದ್ರ ರೈಲ್ವೇ ಮಂಡಳಿಗೆ ಪ್ರಸ್ತಾವ ಸಲ್ಲಿಸಬೇಕು ಎಂದರು.
ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಡಿ ಇಂದ್ರಾಳಿ ರೈಲು ನಿಲ್ದಾಣವನ್ನು ಸ್ಥಳೀಯ ಸಾಂಪ್ರದಾಯಿಕ ಹಿನ್ನೆಲೆಗೆ ಸೂಕ್ತವಾಗಿ ಅಭಿವೃದ್ಧಿಪಡಿಸಲು ರೈಲ್ವೇ ಸಚಿವರೊಂ ದಿಗೆ ಚರ್ಚಿಸಲಾಗುವುದು. ಕುಂದಾಪುರ ರೈಲು ನಿಲ್ದಾಣ ಅಭಿವೃದ್ಧಿ ಪ್ರಸ್ತಾವ ಸಲ್ಲಿಸಬೇಕು. ರೈಲಿಗೆ ನೀರು ತುಂಬಿಸಲು ಬೇಕಾದ ವ್ಯವಸ್ಥೆ ನಿಲ್ದಾಣಗಳಲ್ಲಿ ಕಲ್ಪಿಸಬೇಕು. ರೈಲು ಪಾರ್ಕ್, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವಂತೆ ಸೂಚಿಸಿದರು.
ಉಡುಪಿಯಿಂದ ಈ ಹಿಂದೆ ಹಬ್ಬದ ಸಂದರ್ಭದಲ್ಲಿ ಸಂಚರಿಸುತ್ತಿದ್ದ ವಾಸ್ಕೋ- ವೇಲಂ ಕಣಿ ರೈಲನ್ನು ಮತ್ತೆ ಆರಂಭಿಸಬೇಕು. ಇಲ್ಲಿನ ಯಾತ್ರಾರ್ಥಿಗಳಿಗೆ ಉಡುಪಿ- ವಾರಾಣಸಿ-ಅಯೋಧ್ಯೆ-ತಿರುಪತಿ ರೈಲು ಸೇವೆ ಒದಗಿಸಬೇಕು ಎಂದರು. ಶಾಸಕ ಯಶ್‌ಪಾಲ್ ಸುವರ್ಣ ಅವರು ಉಡುಪಿ ರೈಲು ನಿಲ್ದಾಣದ ಅಭಿವೃದ್ಧಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೊಂಕಣ ರೈಲು ನಿಗಮದ ಮುಖ್ಯಸ್ಥ ಹಾಗೂ ಎಂಡಿ ಸಂತೋಷ್ ಕುಮಾರ್ ಝಾ ಮಾತನಾಡಿ, ರೈಲು ಹಳಿ ದ್ವಿಪಥ, ಹೊಸ ರೈಲು, ರೈಲು ವಿಸ್ತರಣೆ, ಸಮಯ ಬದಲಾ ವಣೆ ಹಾಗೂ ನಿಲುಗಡೆ ಬಗ್ಗೆ ಪ್ರಸ್ತಾವಗಳನ್ನು ಸಲ್ಲಿಸಲಿದ್ದು, ರೈಲ್ವೇ ಮಂಡಳಿ ನಿರ್ಧರಿಸಬೇಕು ಎಂದರು. ನಿಗಮದ ಹಿರಿಯ ಅಧಿಕಾರಿಗಳಾದ ನಾಗದತ್ ರಾವ್, ಬಿ.ಬಿ.ನಿಕಂ, ದಿಲೀಪ್ ಡಿ.ಭಟ್, ಎಸ್.ಕೆ. ಬಾಲ, ಆರ್.ಡಿ.ಗೋಲಬ್, ಸುಧಾಕೃಷ್ಣಮೂರ್ತಿ, ಜಿ.ಡಿ. ಮೀನಾ ಮೊದಲಾದವರು ಉಪಸ್ಥಿತರಿದ್ದರು.