Advertisement
ಗ್ರಾಮ ಮಟ್ಟದಿಂದ ಹಿಡಿದು ಜಗತ್ತಿನ ಮಟ್ಟದ ವರೆಗೆ ಅನುಸರಣೀಯ ಕ್ಷೇತ್ರದಲ್ಲಿ ತಮ್ಮದೇ ಆಗಿರುವ ಛಾಪುಗಳನ್ನು ಮೂಡಿಸಿದ ಹೆಗ್ಗಳಿಕೆ ಕರಾವಳಿ ಕನ್ನಡಿಗರದ್ದು. ಹೀಗಾಗಿ, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಎಂದರೆ ಕೇಳಬೇಕೇ? ಅದರಲ್ಲಿಯೂ ಹೊಟೇಲ್ ಉದ್ಯಮ ಎಂದರೆ ಕರಾವಳಿ ಕನ್ನಡಿಗರದ್ದೇ ಪ್ರಾಬಲ್ಯ ಎಂದರೆ ಅತಿಶಯೋಕ್ತಿ ಎಂದು ಅನಿಸಲಾರದು.
Related Articles
Advertisement
ಜೀವನ ಬಂಡಿಯನ್ನು ಸುಲಲಿತವಾಗಿ ಸಾಗಿಸುವ ನಿಟ್ಟಿನಲ್ಲಿ ಕರ್ನಾಟಕದ ರಾಜಧಾನಿಗೆ ಉದ್ಯೋಗಾರ್ಥವಾಗಿ ಬಂದವರು ಕರಾವಳಿ ಕನ್ನಡಿಗರು. ಹೀಗಾಗಿ, ಅವರು ತಮ್ಮ ಸಾಂಸ್ಕೃತಿಕ ವಲಯದಲ್ಲಿ ಹೊಂದಿರುವ ಛಾಪುಗಳನ್ನು ಮತ್ತು ಒಲವನ್ನು ಬಿಟ್ಟುಕೊಟ್ಟಿಲ್ಲ ಎನ್ನುತ್ತಾರೆ ಉದ್ಯಮಿ ಅವಿನಾಶ್ ಶೆಟ್ಟಿ. ಬೆಂಗಳೂರಿನ ಸಾಂಸ್ಕೃತಿಕ, ಶಿಕ್ಷಣ, ಉದ್ಯೋಗ, ವ್ಯವಹಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಕರಾವಳಿ ಕನ್ನಡಿಗರ ಕೊಡುಗೆ ದೊಡ್ಡದು ಎನ್ನುತ್ತಾರೆ ಅವರು. ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆಯೇ ಸರಿ ಸುಮಾರು 35 ಒಕ್ಕೂಟಗಳು ಕಾರ್ಯ ನಿರ್ವಹಿಸುತ್ತಿವೆ.
ಹೀಗಾಗಿ, ರಾಜಧಾನಿಯ ಸಾಂಸ್ಕೃತಿಕ ವಲಯವನ್ನು ಮತ್ತಷ್ಟು ಶ್ರೀಮಂತಗೊಳಿಸಿದ ಹೆಗ್ಗಳಿಕೆ ಕರಾವಳಿ ಕನ್ನಡಿಗರದ್ದು ಎಂಬ ಅಭಿಪ್ರಾಯ ಶೆಟ್ಟಿಯವರದ್ದು ಹೇಳಿ ಕೇಳಿ ಬೆಂಗಳೂರಿನ ವ್ಯಾಪ್ತಿ ಈಗ ಹಿರಿದಾಗಿದೆ. ಬೆಂಗಳೂರಿನಲ್ಲಿ ಇರುವ ಕರಾವಳಿ ಕನ್ನಡಿಗರು ಸರಿ ಸುಮಾರು ಐದರಿಂದ ಆರು ತಲೆಮಾರುಗಳ ವರೆಗಿನ ಲೆಕ್ಕಾಚಾರ ನೋಡಿದರೆ ಹಲವರು ಇಲ್ಲಿಯೇ ಹುಟ್ಟಿ ಬೆಳೆದಿದ್ದಾರೆ. ಹೀಗಾಗಿ, ಊರಿನ ಸಂಪರ್ಕ ಇರಲಿ ಎಂಬ ದೃಷ್ಟಿಕೋನದಿಂದ ಹಲವು ಭಾಗಗಳಲ್ಲಿ ತಮ್ಮದೇ ಆದ ಸಾಂಸ್ಕೃತಿಕ ಸೇರಿದಂತೆ ಹಲವು ಸಂಘಟನೆಗಳನ್ನು ಸ್ಥಾಪಿಸಿದ್ದಾರೆ.
ಬೆಂಗಳೂರು ಕಂಬಳದ ಹಿನ್ನೆಲೆಯಲ್ಲಿ ನೋಡುವುದಿದ್ದರೆ ಕರಾವಳಿ ಕನ್ನಡಿಗರ ಸಂಘಟನಾ ಶಕ್ತಿ ನ ಭೂತೋ ನ ಭವಿಷ್ಯತಿ ಎಂಬ ನೆಲೆಯಲ್ಲಿ ಅನಾವರಣಗೊಂಡಿದೆ ಎಂದು ಹೇಳಿದರೆ ನಿಜಕ್ಕೂ ತಪ್ಪಾಗಲಾರದು. ಬರೋಬ್ಬರಿ 60ಕ್ಕೂ ಅಧಿಕ ಸಂಘಸಂಘ ಸಂಸ್ಥೆಗಳು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ತುಳುನಾಡಿನ ಜಾನಪದ ಉತ್ಸವ ಕಂಬಳ ಯಶಸ್ಸು ಪಡೆಯಬೇಕು ಎಂದು ಕಂಕಣಬದ್ಧರಾಗಿರುವಂತೆ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕರಾವಳಿ ಕನ್ನಡಿಗರ ಸಂಘಟನೆಗಳ ಕಾರ್ಯವಿಧಾನ ಮತ್ತು ಸಾಧನೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಕರಾವಳಿ ಕನ್ನಡಿಗ ಮತ್ತು ಯಕ್ಷಗಾನ ಸಂಘಟಕ ಗಣೇಶ್ ಭಟ್ ಬಾಯಾರು, ರಾಜ್ಯದ ರಾಜಧಾನಿಯ ಅರ್ಥವ್ಯವಸ್ಥೆಗೆ ಗಣನೀಯ ಕೊಡುಗೆ ನೀಡುವಲ್ಲಿ ಕರಾವಳಿಗರದ್ದು ಅದ್ವಿತೀಯ ಪಾತ್ರ ಎನ್ನುತ್ತಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳು, ಉದ್ದಿಮೆಗಳ ಸ್ಥಾಪನೆ, ರಾಜಧಾನಿಯ ಲಕ್ಷಾಂತರ ಮಂದಿಯ ಹೊಟ್ಟೆಯನ್ನು ತಣಿಸುವಂಥ ಶುಚಿ-ರುಚಿಯಾದ ಊಟ-ಉಪಾಹಾರಗಳನ್ನು ಸಿದ್ಧಪಡಿಸಿ, ನೀಡುವ ಹೊಟೇಲ್ ಉದ್ಯಮ ಇರಬಹುದು, ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕರಾವಳಿ
ಕನ್ನಡಿಗರು ಛಾಪು ಮೂಡಿಸಿದ್ದಾರೆ ಎನ್ನುತ್ತಾರೆ ಅವರು ಇದರ ಜತೆಗೆ ಸಂಘಟನಾ ಶಕ್ತಿಯನ್ನು ಪ್ರದರ್ಷಿಸುವ ನಿಟ್ಟಿನಲ್ಲಿ
ತಾವು ವಾಸಿಸುತ್ತಿರುವ ಪ್ರದೇಶಗಳಲ್ಲಿಯೇ ಹಲವಾರು ಸಂಘಟನೆಗಳನ್ನು ಸ್ಥಾಪಿಸಿ ತಾವು ಇರುವ ಊರಿನಲ್ಲಿಯೇ ಮನೆಯ ಹಬ್ಬಗಳನ್ನು ಆಚರಿಸುತ್ತಾರೆ. ತುಳುವೆರೆಂಕುಲು, ದಕ್ಷಿಣ ಕನ್ನಡಿಗರ ಸಂಘ… ಹೀಗೆ ಹತ್ತು ಹಲವು ಸಂಘಟನೆಗಳನ್ನು ಸ್ಥಾಪಿಸಿ ಕರಾವಳಿ ಕನ್ನಡಿಗರು ಮಾತ್ರವಲ್ಲದೆ, ರಾಜಧಾನಿಯ ಇತರರಿಗೂ ಕೂಡ ಸಂಘಟನೆ ಹೇಗೆ ಇರಬೇಕು ಎಂಬುದರ ಬಗ್ಗೆ ಮಾದರಿಯಾಗಿದ್ದಾರೆ ಎಂದು ಗಣೇಶ್ ಭಟ್ ಅಭಿಪ್ರಾಯಪಡುತ್ತಾರೆ. ವಿವಿಧ ಭಾಷಿಕ ಸಂಘಟನೆಗಳೂ ಕೂಡ ಇವೆ. ಅವುಗಳು ಕೂಡ ತಮ್ಮ ತಮ್ಮ ಸಮುದಾಯದ ಆಚರಣೆಗಳನ್ನು ರಾಜಧಾನಿಯ ಇತರ ಎಲ್ಲರ ಜತೆಗೆ ಹೊಂದಿಕೊಂಡು ಬಾಳುತ್ತಿವೆ. ನಮ್ಮ ದೇಶದ ಇತರ ಮಹಾನಗರಗಳು, ಸಣ್ಣ ಪುಟ್ಟ ನಗರಗಳಿಗೆ ಹೋಲಿಕೆ ಮಾಡಿದರೆ ಇಂಥ ಕಾಸ್ಮೋಪಾಲಿಟನ್ ಲುಕ್ ಇರುವ ಸಂಘಟನಾತ್ಮಕ ಜೀವನ ಇರಲಾರದೇನೋ ಎನ್ನಿಸುವಷ್ಟು ಛಾಪನ್ನು ಕರಾವಳಿ ಕನ್ನಡಿಗರು ಭಾರತದ ಸಿಲಿಕಾನ್ ಸಿಟಿ, ಬೆಂಗಳೂರಿನಲ್ಲಿ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಸಂಘೇ ಶಕ್ತಿಃ ಕಲೌ ಯುಗೈ ಎಂದು ಸಂಸ್ಕೃತ ಸೂಕ್ತಿ ಇದೆ. ಅದಕ್ಕೆ ಅನುಸಾರವಾಗಿ ಕರಾವಳಿಯ ಕನ್ನಡಿಗರು ತಾವು ಇರುವ ಸ್ಥಳದ ಆರ್ಥಿಕಾಭಿವೃದ್ಧಿಗೆ ಕೊಡುಗೆ ನೀಡುವುದಲ್ಲದೆ, ತಾವೂ ಅಭಿವೃದ್ಧಿ ಹೊಂದುವ ಮೂಲಕ ಮಾದರಿಯಾಗಿ ಇರುವುದು ಸ್ತುತ್ಯರ್ಹ ವಿಚಾರವೇ ಹೌದು. ಸದಾಶಿವ ಕೆ.