ಬೆಂಗಳೂರು: ಕೈಯೆತ್ತದ ತಂದೆ, ಜೋರು ಮಾಡದ ಬಂಧುಗಳು…. ರಕ್ತ ಸಂಬಂಧಿಯಲ್ಲದಿದ್ದರೂ ಯಾವುದೇ ಫಲಾಪೇಕ್ಷೆಯಿಲ್ಲದ ಲಕ್ಷಾಂತರ ರೂಪಾಯಿ ವ್ಯಯಿಸಿದ ಜನಕನ ಪ್ರತಿಷ್ಠೆಗಾಗಿ ಶಕ್ತಿ ಮೀರಿ ಓಡುವ ಕೋಣಗಳು. ಸೋತು-ಗೆದ್ದ ತಂದೆ ಮಗನ ಮಾತಿನ ಸನ್ನೆ ನೋಡಿದರೆ ಎಂತವರ ಕಣ್ಣಗಳು ಒದ್ದೆಯಾಗುತ್ತದೆ. ಇಂತಹ ಅಪರೂಪದ ದೃಶ್ಯ ಬೆಂಗಳೂರು ಕಂಬಳದಲ್ಲಿ ಕಂಡು ಬಂತು.
ಕಂಬಳ ಎಂದಾಕ್ಷಣ ಹೆಚ್ಚಿನವ ರಿಗೆ ಕಣ್ಣುಂದೆ ಬರೋದು ಅರ ಚಾಟ, ಏಟುಗಳು, ಶಿಳ್ಳೆ -ಕೇಕೆ ಹಾಗೂ ಮನೋರಂಜನೆ ಮಾತ್ರ. ಆದರೆ, ಒಮ್ಮೆ ಕೋಣಗಳ ಮಾಲೀಕರು ಮತ್ತವರ ಮಕ್ಕಳ ( ಕೋಣ)ನ್ನು ದಿಟ್ಟಿಸಿ ನೋಡಬೇಕು. ಎಂದೂ ಹೊಡೆಯದ ತಂದೆ ಒಂದೇಟು ಹಾಕುತ್ತಾನೆ, ಒಂದು ಮುಳ್ಳು ಚುಚ್ಚದಂತೆ ನೋಡಿಕೊಳ್ಳುವವರು ಕೋಲಿನಿಂದ ಅಲ್ಲೊಂದು ಇಲ್ಲೊಂದು ಮೆಲ್ಲಗೆ ಹೊಡೆಯುತ್ತಾರೆ. ಏನಾಗುತ್ತಿದೆ ಎಂದು ಯೋಚಿಸುವ ಷ್ಟರಲ್ಲಿ ಪಕ್ಕಲ್ಲಿ ಇನ್ನೊಂದು ಜೋಡಿಯನ್ನು ನೋಡಿದಾಗಲೇ, ಕೋಣಗಳಿಗೆ ಕಂಬಳದ ಕಣದಲ್ಲಿ ಓಡಬೇಕೆಂದು ಅರಿವಾಗೋದು.
ಅರಮನೆ ಮೈದಾನದ ಕಂಬಳ ಕ್ರೀಡಾಕೂಟದಲ್ಲಿ ಕೋಣಗಳನ್ನು ಪ್ರೀತಿಯಿಂದ ಸಾಕುವ ಮಾಲೀಕರು ಹಾಗೂ ಬಂಧುಗಳು ಕಂಬಳ ಸ್ಪರ್ಧಾ ಕಣಕ್ಕೆ ಇಳಿಸುವಾಗ ಅವರಲ್ಲಿನ ಆಂತಕ, ಭಯವನ್ನು ದೂರ ಮಾಡಲು, ತನ್ನನ್ನು ತಾನೇ ಓಟಕ್ಕೆ ಸಿದ್ಧಪಡಿಸಿಕೊಂಡಿತ್ತು. ಮುಖದಲ್ಲಿ ರೋಷಾ, ಹುರುಪು, ಗೆಲುವಿನ ಆತ್ಮವಿಶ್ವಾಸ, ಗುಟುರು ಹಾಕುವ ಸದ್ದು ಅಕ್ಕ- ಪಕ್ಕದವರನ್ನು ಬೆಚ್ಚಿ ಬೀಳಿಸುವಂತಿತ್ತು. ಒಮ್ಮೆಲೇ ವೀಕ್ಷಕರ ಮೇಲೆ ಹಾಯುತ್ತದೆಯೇ ಎಂದು ಊಹಿಸುವಷ್ಟರಲ್ಲಿ, ಸಿದ್ಧವಾಗಿ ನಿಂತ ಜಾಕಿಯೊಂದಿಗೆ( ಕೋಣ ಓಡಿಸುವವರು) ನೇರವಾಗಿ ಗಮ್ಯವನ್ನು ಸೇರಲು ಜೀವದ ಹಂಗ ತೊರೆದು ಇತರೆ ಜೋಡಿಗಳಿಗಿಂತ ಮುಂಚಿತವಾಗಿ ತಲುಪಲು ಪ್ರಯತ್ನಿಸುವ ದೃಶ್ಯಗಳು.
ಗೆಲುವಿನ ಪಾಂಚಜನ್ಯ: ಕಂಬಳದ ಕರೆಯಲ್ಲಿ ಗೆದ್ದ ಮಗನಿಗೆ ಬೆನ್ನು ತಟ್ಟಿ ಪಾಂಚಜನ್ಯ ಊದಿ, ಚಪ್ಪಾಳೆ ತಟ್ಟಿ ಸಂಭ್ರಮವನ್ನು ವ್ಯಕ್ತಪಡಿದ್ದರು. ಇನ್ನೂ ಸೋತ ಮಗನಿಗೆ (ಕೋಣಕ್ಕೆ) ತಂದೆ (ಮಾಲೀಕ) ಬೆನ್ನು ತಟ್ಟಿ, ಮುತ್ತಿಟ್ಟು, ಕಣ್ಣಿನಲ್ಲಿ ನೀರಿದ್ದರೂ ಮುಂದಿನ ಸ್ಪರ್ಧೆಯಲ್ಲಿ ಗೆಲ್ಲೋಣ ಎನ್ನುವ ಸನ್ನೆ ಮಾಡಿದರೂ, ಇಬ್ಬರಲ್ಲಿಯೂ ನಿರಾಶೆ ನೋವು ಕಾಣುತ್ತಿತ್ತು.
ಸನ್ನೆಯ ಮಾತು!: ಮನುಷ್ಯರಾದ ನಾವು ಮಕ್ಕಳನ್ನು ಪೋಷಿಸುವಾಗ ಮುಂದೆ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ ಎನ್ನುವ ಕಿಂಚಿತ್ತಾದರೂ ಸ್ವಾರ್ಥ ಇರುತ್ತದೆ. ಆದರೆ, ಇಂತಹ ದೂರ(ರಾ)ಲೋಚನೆಯು ಕೋಣ ಮತ್ತವರ ಮಾಲೀಕರ ನಡುವೆ ಇರಲಿಲ್ಲ. ಮಾತು ಬಾರದ ಮೂಕ ಪ್ರಾಣಿ- ಯಾಜಮಾನ ನಿಷ್ಕಲ್ಮಶವಾದ ಪ್ರೀತಿ ಸನ್ನೆ ಮಾತುಗಳು ಕಂಡವರ ಕಣ್ಣುಗಳಲ್ಲಿ ನೀರು ತುಂಬಿರುವುದು ಅಂತೂ ಸತ್ಯ.
ಮಗ ಮೊದಲ ಬಾರಿಗೆ ಬೆಂಗಳೂರು ನೋಡಿದ್ದಾನೆ
ಮಗ(ಕೋಣ) ಹುಟ್ಟಿನಿಂದ ಕರಾವಳಿ ಬಿಟ್ಟು ಬೇರೆಲ್ಲೂ ಹೋಗಿಲ್ಲ. ಈ ಬಾರಿ ಬೆಂಗಳೂರು ನೋಡಿದ್ದಾನೆ. ಬಹುಮಾನ ಸಿಗದಿದ್ದರೂ, ಅವನಿಗೆ ಹೊಸ ಪ್ರದೇಶ ಪರಿಚಯ ಮಾಡಿದ್ದೇನೆ ಎನ್ನುವ ಖುಷಿ ಇದೆ. ಅವನಿಗೂ(ಕೋಣ) ಸೋತಿರುವ ಅರಿವಿದೆ. ಏನ್ ಮಾಡೋದು ಗೆಲುವು ಎಲ್ಲ ಬಾರಿ ಸಿಗೋದಿಲ್ಲ ಎಂದು ಕೋಣದ ಮಾಲೀಕರು ಉದಯವಾಣಿಯೊಂದಿಗೆ ಅನುಭವ ಹಂಚಿಕೊಂಡರು.
●
ತೃಪ್ತಿ ಕುಮ್ರಗೋಡು