ಪುತ್ತೂರು: ಬೆಂಗಳೂರು ಕಂಬಳಕ್ಕೆ ಅವಕಾಶ ನೀಡಬಾರದು ಎಂದು ಪೆಟಾ ಸಂಘಟನೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಕಂಬಳದ ಪರವಾಗಿ ವೈಯಕ್ತಿಕ ನೆಲೆಯಲ್ಲಿ ತಾನು ಕಾನೂನು ಹೋರಾಟಕ್ಕೆ ಮುಂದಾಗಿದ್ದೇನೆ ಎಂದು ಬೆಂಗಳೂರು ಕಂಬಳಕೂಟದ ಗೌರವಾಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ವಕೀಲ ಧ್ಯಾನ್ ಚಿನ್ನಪ್ಪ ಅವರು ಹೈಕೋರ್ಟ್‌ನ ಮುಖ್ಯ ನ್ಯಾಯ ಮೂರ್ತಿ ಎನ್.ವಿ ಅಂಜಾರಿಯಾ ಮತ್ತು ನ್ಯಾ| ಕೆ.ವಿ. ಅರವಿಂದ್ ಅವರ ಪೀಠದ ಮುಂದೆ ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಕೋಣಗಳನ್ನು ತರುವುದು ತ್ರಾಸದಾ ಯಕವಾಗಿದ್ದು, ಇದರಿಂದ ಕೋಣಗಳಿಗೆ ತೊಂದರೆಯಾಗುತ್ತಿದೆ ಎಂದು ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಪತ್ರಕರ್ತರ ಜತೆ ಮಾತನಾಡಿದ ಶಾಸಕ ರೈ, ಬೆಂಗಳೂರಿನಲ್ಲಿ ಕಂಬಳ ಕೂಟಕ್ಕೆ ತಯಾರಿ ನಡೆಸುತ್ತಿದ್ದ ಹೊತ್ತಿನಲ್ಲೇ ಈ ಬೆಳವಣಿಗೆಗೆ ನಡೆದಿದೆ. ಹಿಂದೆ ನಾವು ನ್ಯಾಯಾಲಯಕ್ಕೆ ಅಫಿದವಿತ್ ಸಲ್ಲಿಸಿದ್ದಾಗ ದ.ಕ., ಉಡುಪಿ ಜಿಲ್ಲೆಯಲ್ಲಿ ಕಂಬಳ ನಡೆಯುವುದು ಎಂದು ಉಲ್ಲೇಖಿಸಿದ್ದೆವು. ಈ ಅಂಶವನ್ನು ಇಟ್ಟುಕೊಂಡು ಪೆಟಾದವರು ಕಂಬಳ ಉಡುಪಿ, ದ.ಕ.ಜಿಲ್ಲೆಗೆ ಮಾತ್ರ ಸೀಮಿತ. ಬೇರೆ ಕಡೆ ಅವಕಾಶ ನೀಡಬಾರದು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ನಾವು ಅಪಿಧವಿತ್‌ನಲ್ಲಿ ಬೇರೆ ಕಡೆ ಕಂಬಳ ಮಾಡಬಾರದು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ ಎಂದರು.
ಈ ಬಗ್ಗೆ ನಾನು ವೈಯಕ್ತಿಕ ನೆಲೆಯಲ್ಲಿ ನ್ಯಾಯವಾದಿಗಳ ಮೂಲಕ ಹೈಕೋರ್ಟ್‌ಗೆ ಅ.22ರಂದು ಅರ್ಜಿ ಹಾಕಿದ್ದು, ಸರಕಾರದ ಪರವಾಗಿ ಪೂರಕ ಮಾಹಿತಿ ನೀಡಲು ನನ್ನನ್ನು ಪ್ರತಿವಾದಿಯನ್ನಾಗಿ ಪರಿಗಣಿಸಬೇಕು ಎಂದು ಕೋರಿದ್ದೇನೆ. ಬೆಂಗಳೂರಿನಲ್ಲಿ ಕಂಬಳ ನಡೆಸಲು ಅವಕಾಶ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಕಾನೂನು ಹೋರಾಟ ಮುಂದುವರಿಸಲಿದ್ದೇನೆ ಎಂದರು.
ಬೆಂಗಳೂರು ಕಂಬಳ ವಿರುದ್ಧ ಪೆಟಾ ತಗಾದೆ
ತುಳುನಾಡಿನ ಜಾನಪದ ಕ್ರೀಡೆ ಕಂಬಳವನ್ನು ನಿಷೇಧಿಸುವಂತೆ ಈ ಹಿಂದೆ ಪೆಟಾ ಸಂಘಟನೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಇದರ ವಿರುದ್ಧ ಕಂಬಳ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಅಧ್ಯಾದೇಶ ಮೂಲಕ ಕಂಬಳಕ್ಕೆ ಅವಕಾಶ ನೀಡಿ ಬಳಿಕ ಕಾನೂನಿನಲ್ಲಿ ತಿದ್ದುಪಡಿ ತಂದು ಕಂಬಳ ಕ್ರೀಡೆಗೆ ಅವಕಾಶ ನೀಡಲಾಗಿತ್ತು. ಈಗ ಬೆಂಗಳೂರು ಕಂಬಳ ವಿರುದ್ಧ ಪೆಟಾ ಮತ್ತೆ ತಗಾದೆ ತೆಗೆದಿರುವುದು ಕಂಬಳ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.