ಬೆಂಗಳೂರು: ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರ ದಾಳಿಗೂ ಮೊದಲು ಪರಪ್ಪನ ಅಗ್ರಹಾರ ಕಾರಾಗೃಹದ ಕೊಠಡಿಯಲ್ಲಿದ್ದ ಕೆಲ ವಸ್ತುಗಳ ಸ್ಥಳಾಂತರ ಪ್ರಕರಣ ಸಂಬಂಧ ಗುರುವಾರ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ಮಂಜುನಾಥ್ ಅವರು ಜೈಲಿನ ಮೂವರು ಅಧಿಕಾರಿಗಳು ಹಾಗೂ ಒಬ್ಬ ಸಜಾಬಂಧಿಯನ್ನು ವಿಚಾರಣೆ ನಡೆಸಿದ್ದಾರೆ.
ಜೈಲು ಸಿಬ್ಬಂದಿ ಸುದರ್ಶನ್, ಪರಮೇಶ್ ನಾಯಕ್, ಕೆ.ಬಿ.ರಾಯಮನೆ ಹಾಗೂ ಶಿಕ್ಷಾಬಂಧಿ ಮುಜೀಬ್‌ನನ್ನು ಪ್ರತ್ಯೇಕವಾಗಿ ಸುಮಾರು 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಿಸಿಬಿ ಪೊಲೀಸರು ತಪಾಸಣೆಗೆಂದು ಬಂದಾಗ “ನಾಲ್ಕು ರಟ್ಟಿನ ಬಾಕ್ಸ್‌ಗಳಲ್ಲಿ ಕಸ ಇದೆ’ ಎಂದು ಹೊರಗೆ ತೆಗೆದುಕೊಂಡು ಹೋಗಿದ್ದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಈ ವೇಳೆ ಸಜಾಬಂಧಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕೆಲ ಆರೋಪಿಗಳ ಕೊಠಡಿಯಲ್ಲಿದ್ದ ವಸ್ತುಗಳನ್ನು ಹೊರಗಡೆ ಹಾಕಿದ್ದೇನೆ. ಅದರಲ್ಲಿ ಕೆಲವು ಟೀ ಕಪ್‌ಗ್ಳು ಹಾಗೂ ಇತರೆ ವಸ್ತುಗಳು ಇತ್ತು ಎಂದಿದ್ದಾನೆ.
ಇನ್ನು ಮೂವರು ಅಧಿಕಾರಿಗಳಿಗೆ ಸಿಸಿಬಿ ಪೊಲೀಸರು ಬಂದ ಸಂದರ್ಭದಲ್ಲಿ ಯಾಕೆ ತಡೆದೀರಿ? ಕಸದ ಬಾಕ್ಸ್‌ಗಳನ್ನು ಎಲ್ಲಿ ತೆಗೆದುಕೊಂಡು ಹೋಗಿ ಹಾಕಲಾಗಿದೆ? ಅದರಲ್ಲಿ ಯಾವ ರೀತಿಯ ಕಸ ಇತ್ತು? ಪ್ರತಿದಿನ ಹೀಗೆ ಮಾಡು¤ದ್ದೀರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗಿದೆ. ಆದರೆ, ಅಧಿಕಾರಿಗಳು ವ್ಯತಿರಿಕ್ತವಾದ ಹೇಳಿಕೆ ನೀಡುತ್ತಿದ್ದಾರೆ. ವಿಚಾರಣೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಸಿಸಿಬಿ ದಾಳಿ ನಡೆಸಿದ್ದು ಏಕೆ?
ಜೈಲಿನಲ್ಲಿ ಮೊಬೈಲ್ ಹಾಗೂ ಮಾದಕವಸ್ತು ಸೇರಿ ನಿಷೇಧಿತ ವಸ್ತುಗಳ ಬಳಕೆ ಹಿನ್ನೆಲೆ ಸಿಸಿಬಿ ಪೊಲೀಸರು ಆ. 24 ರಂದು ದಾಳಿ ನಡೆಸಿದ್ದರು. ಅದಕ್ಕೂ ಮುನ್ನ ಸಿಸಿಬಿ ದಾಳಿ ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ ಆ.23 ರ ರಾತ್ರಿ 10.58 ರಿಂದ 11.30ರ ವರೆಗೆ ಆರೋಪಿಗಳು ಕೆಲ ವಸ್ತುಗಳನ್ನು ಸಾಗಿಸುತ್ತಿ ರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅನುಮಾನಾಸ್ಪದ ರೀತಿಯಲ್ಲಿ ಸಾಗಿಸಿರುವ ಬಗ್ಗೆ ಪ್ರಶ್ನಿಸಿದಾಗ ಕಸ ಎಂದು ಸಿಬ್ಬಂದಿ ಸಮಜಾಯಿಷಿ ನೀಡಿದ್ದರು. ಅಲ್ಲದೆ, ಸಿಸಿಬಿ ದಾಳಿ ವೇಳೆ ನಿಷೇಧಿತ ವಸ್ತುಗಳು ಸಿಗದಿರು ವುದಕ್ಕೆ ಜೈಲು ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.ಈ ಸಂಬಂಧ ಅಂದಿನ ಡಿಐಜಿ ಸೋಮಶೇಖರ್ ದಾಖಲಿಸಿದ್ದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.