Advertisement
ಸ್ಟಾರ್ ಏರ್ ವಿಮಾನಯಾನ ಆರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ವಿಮಾನಯಾನ ಆರಂಭದಿಂದ ಕೃಷಿ ಉತ್ಪನ್ನಗಳ ರಫ್ತಿಗೆ ಅವಕಾಶ ದೊರೆತು ಉತ್ತಮ ಮೌಲ್ಯ ದೊರೆಯಲಿದೆ. ಅದೇ ರೀತಿ ಉದ್ಯಮ ವಲಯ ಬೆಳವಣಿಗೆಗೂ ಸಹಕಾರಿ ಆಗಲಿದೆ. ಕಲಬುರಗಿ, ಕೊಪ್ಪಳ ಇನ್ನಿತರ ಕಡೆ ಉದ್ಯಮ ಬರುತ್ತಿಲ್ಲ, ಬೆಳೆಯುತ್ತಿಲ್ಲ ಎಂಬ ಕೂಗು ಇದೆ. ಮೂಲಸೌಕರ್ಯಗಳೇ ಇಲ್ಲವೆಂದಾದರೆ ಉದ್ಯಮಗಳು ಬರುವುದಾದರೂ ಹೇಗೆ? ಮೂಲಸೌಲಭ್ಯಗಳು ಅಭಿವೃದ್ಧಿಯ ಕೀಲಿ ಕೈ ಆಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೂಲಸೌಲಭ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ. ಹುಬ್ಬಳ್ಳಿಯಲ್ಲಿ ವಿಮಾನಯಾನ ಹೆಚ್ಚಳದಿಂದ ಉದ್ಯಮ ಉತ್ತಮ ಬೆಳವಣಿಗೆಯತ್ತ ಸಾಗುತ್ತಿದೆ. ಅದೇ ರೀತಿ ಬೆಳಗಾವಿಯಿಂದಲೂ ವಿಮಾನಯಾನ ಇನ್ನಷ್ಟು ಹೆಚ್ಚಳವಾಗಬೇಕಾಗಿದೆ. ಸ್ಟಾರ್ ಏರ್ ಶೀಘ್ರವೇ ಬೆಳಗಾವಿಗೂ ಸಂಪರ್ಕ ಕಲ್ಪಿಸಲಿ ಎಂದರು.
Related Articles
Advertisement
ಶ್ರೀನಿಧಿ ಘೋಡಾವತ ಪ್ರಾಸ್ತಾವಿಕ ಮಾತನಾಡಿ, ಘೋಡಾವತ ಗ್ರೂಪ್ ವಿವಿಧ ಉದ್ಯಮ ನಿರ್ವಹಿಸುತ್ತಿದೆ. ಸುಮಾರು 400 ಎಕರೆ ತೋಟದಲ್ಲಿ ಹೂ ಬೆಳೆಯುಲಾಗುತ್ತಿದ್ದು, ನಿತ್ಯ 5 ಲಕ್ಷ ಹೂ ರಫ್ತಾಗುತ್ತಿದೆ. 15 ಸಾವಿರ ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲಿ ಓದುತ್ತಿದ್ದಾರೆ. ವಿಮಾನ ಸೇವೆಯಲ್ಲಿ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇನ್ನೂ ಬೆಳೆಯಬೇಕಾಗಿದೆ ಎಂದರು.
ಪ್ರಸ್ತುತ ಶೇ.2-3 ಜನರು ಮಾತ್ರ ವಿಮಾನಯಾನ ಕೈಗೊಳ್ಳುತಿದ್ದು, ಇದು ಶೇ. 20ಕ್ಕೆ ಹೆಚ್ಚಿದರೆ ಇನ್ನೂ 700-800 ವಿಮಾನಗಳು ಬೇಕಾಗುತ್ತವೆ. ಎರಡನೇ-ಮೂರನೇ ಹಂತದ ನಗರಗಳಿಗೆ ವಿಮಾನಯಾನ ಸಂಪರ್ಕಕ್ಕೆ ಒತ್ತು ನೀಡುತ್ತೇವೆ. ದೊಡ್ಡ ವಿಮಾನಯಾನ ಕಂಪೆನಗಳೊಂದಿಗೆ ದರ ಪೈಪೋಟಿಗೆ ಇಳಿಯುವುದಿಲ್ಲ ಎಂದರು.
ಉದ್ಯಮಿ ಗಣೇಶ ಶಾಮನೂರು ಮಾತನಾಡಿದರು. ಶಾಸಕರಾದ ಅರವಿಂದ ಬೆಲ್ಲದ, ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ, ಮುಖಂಡರಾದ ಎ.ಎಂ.ಹಿಂಡಸಗೇರಿ, ಮಹೇಂದ್ರ ಸಿಂಘಿ ಇನ್ನಿತರರಿದ್ದರು.