Advertisement

ಬೆಂಗಳೂರು-ಹಾಸನ ‘ಇಂಟರ್‌ ಸಿಟಿ ‘ರೈಲು ಸಂಚಾರಕ್ಕೆ ಚಾಲನೆ

03:45 AM Mar 25, 2017 | Team Udayavani |

ಬೆಂಗಳೂರು: ಸುಮಾರು ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು-ಹಾಸನ ಮಾರ್ಗದಲ್ಲಿ   ವೇಗದ ಪ್ರಯಾಣಕ್ಕೆ ಹೆಸರಾದ ಇಂಟರ್‌ ಸಿಟಿ ನೂತನ ರೈಲು ಸಂಚಾರದ ಸೇವೆ ಭಾನುವಾರದಿಂದ ಲಭ್ಯವಾಗಲಿದೆ.

Advertisement

ರೈಲ್ವೆ ಸಚಿವ ಸುರೇಶ್‌ ಪ್ರಭು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾ.26ರಂದು ಬೆಳಗ್ಗೆ 11 ಗಂಟೆಗೆ ನಗರದ ಯಶವಂತಪುರ ರೈಲು ನಿಲ್ದಾಣದಲ್ಲಿ ನೂತನ ರೈಲು ಸಂಚಾರಕ್ಕೆ  ಚಾಲನೆ ನೀಡಲಿದ್ದಾರೆ. ಬೆಂಗಳೂರು-ಹಾಸನ ರೈಲು ಮಾರ್ಗ ನಿರ್ಮಾಣಕ್ಕೆ ಈ ಹಿಂದೆ ಮಂಜೂರಾತಿ ನೀಡಿದ್ದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ. ಸದಾನಂದ ಗೌಡ, ರಮೇಶ್‌ ಜಿಗಜಿಣಗಿ, ನಿರ್ಮಲಾ ಸೀತಾರಾಮನ್‌, ರಾಜ್ಯದ  ಹಿರಿಯ ಸಚಿವರಾದ ಆರ್‌.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್‌, ಟಿ.ಬಿ. ಜಯಚಂದ್ರ, ಡಿ.ಕೆ. ಶಿವಕುಮಾರ್‌, ಕೃಷ್ಣ ಬೈರೇಗೌಡ, ಎಂ. ಕೃಷ್ಣಪ್ಪ, ಎ. ಮಂಜು, ಬಿಬಿಎಂಪಿ ಮೇಯರ್‌ ಜಿ. ಪದ್ಮಾವತಿ ಭಾಗವಹಿಸಲಿದ್ದಾರೆ. ಅಲ್ಲದೆ, ರಾಜ್ಯದ ಸಂಸದರು, ಶಾಸಕರು ಹಾಗೂ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಒಂದೂವರೆ ತಿಂಗಳ ಹಿಂದೆಯಷ್ಟೇ ಚಿಕ್ಕಬಾಣಾವರದಿಂದ ಹಾಸನವರೆಗಿನ ಸುಮಾರು 167 ಕಿಮೀ. ಮಾರ್ಗದಲ್ಲಿ ರೈಲ್ವೆ ಸುರಕ್ಷತಾ ವಿಭಾಗದವರು ಪ್ರಾಯೋಗಿಕ ರೈಲು ಸಂಚಾರ ನಡೆಸಿದ್ದರು. ಬಳಿಕ ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿಯು ತನ್ನ ಅನುಮತಿಯನ್ನು ನೀಡಿತ್ತು. ಸದ್ಯಕ್ಕೆ ಬೆಂಗಳೂರು-ಹಾಸನ ಮಾರ್ಗದಲ್ಲಿ ಬೆಂಗಳೂರಿನಿಂದ ಚಿಕ್ಕಬಾಣಾವರ ವರೆಗಿನ ಮಾರ್ಗದಲ್ಲಿ ಬೆಂಗಳೂರು-ನೆಲಮಂಗಲ ಇಂಟರ್‌ ಸಿಟಿ ರೈಲು ಸಂಚಾರ ನಡೆಯುತ್ತಿದೆ. ಇದೀಗ, ಹಾಸನವರೆಗಿನ ಮಾರ್ಗದ ಕಾಮಗಾರಿ ಪೂರ್ಣಗೊಂಡಿರುವುದರಿಂದ ಬೆಂಗಳೂರು-ಹಾಸನ ನಡುವೆ ನೂತನ ಇಂಟರ್‌ ಸಿಟಿ ರೈಲು ಸಂಚಾರಕ್ಕೆ ಚಾಲನೆ ನೀಡಲಾಗುತ್ತಿದೆ.

ಕರಾವಳಿ ಜನತೆಗೆ ನಿರಾಸೆ
ಬೆಂಗಳೂರು-ಹಾಸನ ಇಂಟರ್‌ ಸಿಟಿ ರೈಲು ಸೇವೆ ಜತೆಗೆ ಬೆಂಗಳೂರು-ಮಂಗಳೂರು ನಡುವೆ ಹಾಸನ ಮಾರ್ಗವಾಗಿ ಹೊಸ ಇಂಟರ್‌ ಸಿಟಿ ರೈಲು ಸಂಚಾರಕ್ಕೂ ಚಾಲನೆ ದೊರೆಯಲಿದೆ ಎನ್ನುವುದು ಕರಾವಳಿ ಭಾಗದ ಜನರ ಬಹುದೊಡ್ಡ ನಿರೀಕ್ಷೆಯಾಗಿತ್ತು. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವಲಯ ಕೂಡ ಬೆಂಗಳೂರು-ಹಾಸನದ ಜತೆಗೆ ಬೆಂಗಳೂರು-ಮಂಗಳೂರಿಗೂ ಕುಡ್ಲ ಎಕ್ಸ್‌ಪ್ರೆಸ್‌ ರೈಲು ಅನ್ನು ಇಂಟರ್‌ ಸಿಟಿ ರೈಲು ಆಗಿ ಪರಿವರ್ತಿಸಿ ವಾರದಲ್ಲಿ ಮೂರು ದಿನ ಓಡಿಸುವುದಕ್ಕೆ ವೇಳಾಪಟ್ಟಿಯನ್ನೂ ಸಿದ್ಧಪಡಿಸಿ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಬೆಂಗಳೂರು-ಮಂಗಳೂರು ಇಂಟರ್‌ ಸಿಟಿ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮತಿ ನೀಡದೆ ಕರಾವಳಿ ಭಾಗಕ್ಕೆ ಅನ್ಯಾಯವೆಸಗಿದೆ.

ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ರೈಲು ಪ್ರಯಾಣಿಕರು ಇದೀಗ ದಕ್ಷಿಣ ರೈಲ್ವೆ ವಲಯದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಏಕೆಂದರೆ, ಮಂಗಳೂರು ರೈಲು ವಿಭಾಗವು ಕೇರಳದ ದಕ್ಷಿಣ ರೈಲ್ವೆ ವಲಯದ ವ್ಯಾಪ್ತಿಗೆ ಸೇರಿಕೊಂಡಿದೆ. ಈ ಕಾರಣಕ್ಕೆ ನೈಋತ್ಯ ರೈಲ್ವೆ ವಲಯವು ಬೆಂಗಳೂರು-ಮಂಗಳೂರು ನಡುವೆ ಇಂಟರ್‌ ಸಿಟಿ ರೈಲು ಸಂಚಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ, ದಕ್ಷಿಣ ರೈಲ್ವೆ ವಲಯ ಅದಕ್ಕೆ ತನ್ನ ಸಮ್ಮತಿ ಸೂಚಿಸಿಲ್ಲ ಎನ್ನಲಾಗಿದೆ. ಈ ರೈಲಿಗೆ ಮಂಗಳೂರು ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಸ್ಥಳಾವಕಾಶದ ಕೊರತೆಯ ಕಾರಣ ನೀಡಲಾಗಿದೆ. ಹೀಗಾಗಿ, ರೈಲ್ವೆ ಮಂಡಳಿಯು ಅಂತಿಮ ಹಂತದಲ್ಲಿ ಬೆಂಗಳೂರು-ಮಂಗಳೂರು ನಡುವೆ ಕುಡ್ಲ ಎಕ್ಸ್‌ಪ್ರೆಸ್‌ ರೈಲು ಸಂಚಾರ ಪ್ರಾರಂಭಿಸುವುದಕ್ಕೆ ಸದ್ಯಕ್ಕೆ ಅನುಮತಿ ನಿರಾಕರಿಸಿದೆ ಎನ್ನುವುದು ಕರಾವಳಿ ಭಾಗದ ರೈಲು ಪ್ರಯಾಣಿಕರ ಆರೋಪ.

Advertisement
Advertisement

Udayavani is now on Telegram. Click here to join our channel and stay updated with the latest news.

Next