Advertisement

ಗೆಲುವಿನೊಂದಿಗೆ ಲೀಗ್‌ ಮುಗಿಸಿದ ಬೆಂಗಳೂರು

06:35 AM Dec 28, 2018 | |

ಕೋಲ್ಕತಾ: ಪ್ಲೇ ಆಫ್ಗೆ ತೇರ್ಗಡೆಯಾಗಬೇಕಾದರೆ ಗೆಲ್ಲಲೇಬೇಕಾದ ಪ್ರೊ ಕಬಡ್ಡಿಯ ಕೋಲ್ಕತಾ ಚರಣದ ಅಂತಿಮ ಲೀಗ್‌ ಪಂದ್ಯದಲ್ಲಿ ಯುಪಿ ಯೋಧಾ ತಂಡವು ತನ್ನ ವಲಯದ ದ್ವಿತೀಯ ಸ್ಥಾನಿ ಬಂಗಾಲ್‌ ವಾರಿಯರ್ ತಂಡವನ್ನು 41-25 ಅಂಕಗಳಿಂದ ಭರ್ಜರಿಯಾಗಿ ಸೋಲಿಸಿದೆ. 

Advertisement

ಈ ಗೆಲುವಿನ ಮೂಲಕ ಯುಪಿ ಯೋಧಾ ತಂಡವು “ಬಿ’ ವಲಯದಿಂದ ಮೂರನೇ ತಂಡವಾಗಿ ಪ್ಲೇ ಆಫ್ಗೆ ತೇರ್ಗಡೆಯಾಗಿದೆ ಮಾತ್ರವಲ್ಲದೇ ಪ್ಲೇ ಆಫ್ಗೆ ತೇರ್ಗಡೆಯಾಗುವ ಕನಸು ಕಾಣುತ್ತಿದ್ದ ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ತಂಡವನ್ನು ಕೂಟದಿಂದ ಹೊರಗಟ್ಟಿದೆ. ಯೋಧಾ ತಂಡ ಒಟ್ಟು 57 ಅಂಕ ಗಳಿಸಿದ್ದರೆ ಪಾಟ್ನಾ 55 ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆಯಲಷ್ಟೇ ಶಕ್ತವಾಯಿತು. ಪಾಟ್ನಾ ಬುಧವಾರದ ಪಂದ್ಯದಲ್ಲಿ ಗುಜರಾತ್‌ಗೆ ಶರಣಾಗಿದ್ದು ದೊಡ್ಡ ಹೊಡೆತವಾಗಿದೆ.

ರಿಶಾಂಕ್‌ ದೇವಾಡಿಗ, ಶ್ರೀಕಾಂತ್‌ ಜಾಧವ್‌, ನಿತೇಶ್‌ ಕುಮಾರ್‌ ಮತ್ತು ಸಚಿನ್‌ ಕುಮಾರ್‌ ಅವರ ಅಮೋಘ ಆಟದಿಂದಾಗಿ ಯುಪಿ ಸುಲಭ ಗೆಲುವು ಕಾಣುವಂತಾಯಿತು.

ಬುಲ್ಸ್‌ಗೆ ಅಗ್ರಸ್ಥಾನ
ಪ್ರೊ ಕಬಡ್ಡಿ ಆರನೇ ಆವೃತ್ತಿ ಕೋಲ್ಕತಾ ಚರಣದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ 40-32 ಅಂಕಗಳ ಅಂತರದಿಂದ ಜೈಪುರ ಪಿಂಕ್‌ ಪ್ಯಾಂಥರ್ ತಂಡವನ್ನು ಸೋಲಿಸಿದೆ. ಇದರೊಂದಿಗೆ “ಬಿ’ ಗುಂಪಿನಲ್ಲಿರುವ ಬೆಂಗಳೂರು ತಂಡದ ಒಟ್ಟಾರೆ ಗೆಲುವು 13ಕ್ಕೆ ಏರಿದೆ. ಬುಲ್ಸ್‌ ಈಗಾಗಲೇ ನಾಕೌಟ್‌ ಸುತ್ತಿಗೆ ಲಗ್ಗೆ ಇರಿಸಿದ್ದು ಯಶಸ್ವಿಯಾಗಿ ಲೀಗ್‌ ಹಂತವನ್ನು ಮುಗಿಸಿದ್ದು ಅಗ್ರಸ್ಥಾನವನ್ನು ಅಲಂಕರಿಸಿದೆ. ಹೀಗಾಗಿ ಡಿ.31ರಂದು ಕೊಚ್ಚಿಯಲ್ಲಿ ನಡೆಯಲಿರುವ ಕ್ವಾಲಿಫೈಯರ್‌ 1 ಪಂದ್ಯದಲ್ಲಿ ಬೆಂಗಳೂರು ತಂಡವು “ಎ’ ಗುಂಪಿನ ಅಗ್ರಸ್ಥಾನಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯದ ವಿಜೇತ ತಂಡವು ನೇರವಾಗಿ ಜ. 5ರಂದು ನಡೆಯುವ ಫೈನಲಿಗೇ ತೇರ್ಗಡೆಯಾಗಲಿದ್ದರೆ ಸೋತ ತಂಡಕ್ಕೆ ಫೈನಲಿಗೇರಲು ಇನ್ನೊಂದು ಅವಕಾಶ ಲಭಿಸಲಿದೆ.

ಪವನ್‌ ಅಬ್ಬರದ ರೈಡಿಂಗ್‌
ಪವನ್‌ ಸೆಹ್ರಾವತ್‌ (16 ಅಂಕ) ತಮ್ಮ ಎಂದಿನ ಶೈಲಿಯಲ್ಲಿಯೇ ರೈಡಿಂಗ್‌ ನಡೆಸಿದರು. ಇವರ ಅಬ್ಬರದ ಎದುರು ಜೈಪುರ ಮಂಕಾಯಿತು. ರೋಹಿತ್‌ ಕುಮಾರ್‌ (5 ಅಂಕ) ಹಾಗೂ ಸುಮಿತ್‌ ಸಿಂಗ್‌ (4 ಅಂಕ) ರೈಡಿಂಗ್‌ನಿಂದ ಗಮನ ಸೆಳೆದರು. ಅಮಿತ್‌, ಆಶಿಷ್‌ ಹಾಗೂ ಮಹೇಂದ್ರ ಸಿಂಗ್‌ ಭರ್ಜರಿ ಟ್ಯಾಕಲ್‌ ನಡೆಸಿ ಜೈಪುರ ಓಟಕ್ಕೆ ಬ್ರೇಕ್‌ ಹಾಕಿದರು. ಜೈಪುರ ಪರ ದೀಪಕ್‌ (13 ಅಂಕ) ಹಾಗೂ ಸೆಲ್ವಮಣಿ (8 ಅಂಕ) ರೈಡಿಂಗ್‌ನಿಂದ ಅಬ್ಬರಿಸಿದರೂ ತಂಡ ಗೆಲ್ಲಲಿಲ್ಲ.

Advertisement

ಎರಡು ದಿನ ವಿಶ್ರಾಂತಿ
ಗುರುವಾರಕ್ಕೆ ಲೀಗ್‌ ಹಂತದ ಪಂದ್ಯಗಳು ಮುಗಿದಿದ್ದು ಡಿ. 30ರಿಂದ ಪ್ಲೇ ಆಫ್ ಪಂದ್ಯಗಳು ನಡೆಯಲಿವೆ. ಡಿ. 30ರಂದು ಎಲಿಮಿನೇಟರ್‌ 1 ಮತ್ತು 2 ಪಂದ್ಯಗಳು ಕೊಚ್ಚಿಯಲ್ಲಿ ನಡೆಯಲಿದೆ. ಡಿ. 28 ಮತ್ತು 29 ಪ್ರೊ ಕಬಡ್ಡಿಗೆ ವಿಶ್ರಾಂತಿ.

Advertisement

Udayavani is now on Telegram. Click here to join our channel and stay updated with the latest news.

Next