ಬೆಂಗಳೂರು: ಸಾಮಾನ್ಯವಾಗಿ ಮಾನಸಿಕ ಅಸ್ವಸ್ಥರಿಗೆ ನಾಲ್ಕು ಗೋಡೆಯ ಮಧ್ಯೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಇಲ್ಲೊಂದು ಸಂಸ್ಥೆಯು ಆಸ್ಪತ್ರೆಯಿಂದ ಆಚೆ ಕರೆತಂದು ಪ್ರಕೃತಿ ಚಿಕಿತ್ಸೆಯೊಂದಿಗೆ ಬುದ್ಧಿಮಾಂದ್ಯ, ಮಾನಸಿಕ ಅಸ್ವಸ್ಥ, ದಿವ್ಯಾಂಗರಿಗೆ ತೋಟಗಾರಿಕೆ ತರಬೇತಿ ನೀಡುವುದರೊಂದಿಗೆ ಹೂ-ತರಕಾರಿ, ಔಷಧಿ ಗಿಡಗಳನ್ನು ಹೊಂದಿರುವ ವನವನ್ನು ನಿರ್ಮಿಸುತ್ತಿದೆ.
“ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಸಂಸ್ಥೆ (ಎಪಿಡಿ) ಯು ನೂತನ ಹಾಗೂ ವಿಶೇಷವಾದ ಪ್ರಕೃತಿ ಚಿಕಿತ್ಸೆಯನ್ನು ನಿಮ್ಹಾನ್ಸ್ ಹಿಂಭಾಗದಲ್ಲಿರುವ ಸಮನ್ವಯ ಸುಸ್ಥಿರ ತೋಟಗಾರಿಕೆ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದೆ. 18 ರಿಂದ 60 ವರ್ಷದವರೆಗಿನ ಮಹಿಳೆಯರು ಮತ್ತು ಪುರುಷರು ಸೇರಿದಂತೆ ಒಟ್ಟು 116 ಮಂದಿ ಪ್ರಸ್ತುತ ಪ್ರಕೃತಿ ಚಿಕಿತ್ಸೆಯೊಂದಿಗೆ ತೋಟಗಾರಿಕೆ ತರಬೇತಿ ಪಡೆಯುತ್ತಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಪ್ರಾರಂಭವಾದ ಈ ಕೇಂದ್ರಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಒಂದೂಕಾಲು ಎಕರೆ ಭೂಮಿಯನ್ನು ನೀಡುವುದರೊಂದಿಗೆ ಉಸ್ತುವಾರಿ ವಹಿಸಿಕೊಂಡಿದೆ. “ತೋಟಗಾರಿಕೆ ತರಬೇತಿ ಮತ್ತು ಪ್ರಕೃತಿ ಚಿಕಿತ್ಸೆ’ ಎಂಬ ನೂತನ ಯೋಜನೆಗೆ ಬಾಷ್ ಎಂಬ ಖಾಸಗಿ ಕಂಪನಿಯು ಆರ್ಥಿಕ ನೆರವು ನೀಡುತ್ತಿದೆ. ಒಟ್ಟು 525 ಫಲಾನುಭವಿಗಳಲ್ಲಿ 116 ಮಂದಿ ತೋಟಗಾರಿಕೆ ತರಬೇತಿಗೆ ಸೂಕ್ತವಾಗಿದ್ದು, 30 ಮಂದಿ ಮಾನಸಿಕ ಅಸ್ವಸ್ಥರು ಜತೆಗೆ ವ್ಹೀಲ್‌ಚೇರ್ ಬಳಸುತ್ತಿರುವ 22 ಮಂದಿ ಮಾನಸಿಕ ಅಸ್ವಸ್ಥರು ಸೇರಿದಂತೆ 14 ವರ್ಷ ಮತ್ತು ಮೇಲ್ಪಟ್ಟವರು ಇಕೋಥೆರಪಿಯನ್ನು ಪಡೆಯುತ್ತಿದ್ದಾರೆ.
ತರಬೇತಿ ಉಪಯೋಗ: ಮಾನಸಿಕ ಅಸ್ವಸ್ಥರು, ಬುದ್ಧಿಮಾಂದ್ಯರು ಹಾಗೂ ದಿವ್ಯಾಂಗರು ಆಸ್ಪತ್ರೆ ಚಿಕಿತ್ಸೆ ಜತೆಗೆ ಪ್ರಕೃತಿಯೊಂದಿಗೆ ಬೆರೆತು ತೋಟಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಕೊಂಡು ದೈಹಿಕವಾಗಿ ಕೆಲಸ ಮಾಡಿದಾಗ ಅವರ ಮಾನಸಿಕ ಅಸ್ವಸ್ಥತೆ ನಿವಾರಣೆಗೆ ಸಹಕಾರಿಯಾಗಿದೆ. ಮನಸ್ಸು ಉಲ್ಲಾಸಗೊಳ್ಳುತ್ತದೆ. ತರಕಾರಿ ಹಾಗೂ ಔಷಧಿ ಗಿಡಗಳನ್ನು ಅವರಿಂದಲೇ ನಾಟಿ ಮಾಡಿಸುವುದರಿಂದ ಒತ್ತಡ ಕಡಿಮೆಯಾಗುವ ಜತೆಗೆ ಆರೋಗ್ಯದಲ್ಲಿಯೂ ಸುಧಾರಣೆ ಕಾಣಲಿದೆ.
ಪ್ಯಾಕೇಟ್‌ಗಳಿಗೆ ಮಣ್ಣು ತುಂಬುವುದು, ಸಸಿ ನಾಟಿ ಮಾಡುವುದು, ಕಳೆ ತೆಗೆಯುವುದು, ಸಾವಯವ ಗೊಬ್ಬರ ಹಾಕುವುದು, ಸಸಿಗಳ ಪೋಷಣೆಯೊಂದಿಗೆ ತೋಟಗಾರಿಕಾ ಕೃಷಿ ಚಟುವಟಿಕೆಗಳ ಕುರಿತು ತರಬೇತಿ ನೀಡಲಾಗುತ್ತದೆ. ಈ ಯೋಜನೆ ಅವರ ಮುಂದಿನ ದಿನಗಳಲ್ಲಿ ಸ್ವಾವಲಂಬಿ ಜೀವನೋಪಾಯಕ್ಕೂ ಸಹಕಾರಿಯಾಗಲಿದೆ.
“ಮಾನಸಿಕ ಅಸ್ವಸ್ಥರು, ದಿವ್ಯಾಂಗರು ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ಈ ಯೋಜನೆ ತುಂಬಾ ಉಪಯುಕ್ತ ವಾಗಿದ್ದು, ಪ್ರಕೃತಿ ಚಿಕಿತ್ಸೆಯಿಂದ ಅವರ ಚಲನ-ವಲನವು ಕ್ರಿಯಾಶೀಲತೆಯನ್ನು ಹೆಚ್ಚಿಸುವ ಜತೆಗೆ ನೆಮ್ಮದಿ ಸಿಗುತ್ತದೆ. ತೋಟದಲ್ಲಿನ ದೈಹಿಕ ಶ್ರಮದಿಂದಾಗಿ ಅವರಲ್ಲಿ ನವಚೈತನ್ಯ, ಜೀವನೋತ್ಸಾಹದ ಆಶಾಭಾವನೆ ಮೂಡುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ.”
-ಡಾ.ಎಸ್.ಸಿದ್ದರಾಮಣ್ಣ, ಉಪ ನಿರ್ದೇಶಕ, ಮಹಿಳಾ, ಮಕ್ಕಳ ಇಲಾಖೆ
– ಭಾರತಿ ಸಜ್ಜನ್