ಬೆಂಗಳೂರು: ಮಲಗಿದ್ದ ಸುಮಾರು ನಾಲ್ಕು ತಿಂಗಳ ನಾಯಿ ಮೇಲೆ ಕಾರು ಹತ್ತಿಸಿ ಕ್ರೌರ್ಯ ಮೆರೆದಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕರ್ನಾಟಕ ಪ್ರಾಣಿದಯಾ ಮಂಡಳಿ ಸದಸ್ಯ ಅನಿರುದ್ಧ ಎಂಬುವರು ನೀಡಿದ ದೂರಿನ ಮೇರೆಗೆ ಕಾರು ಚಾಲಕ ಮಂಜು ನಾಥ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಜೆ.ಪಿ.ನಗರದ 8ನೇ ಹಂತದ ಶೇಖರ್ ಲೇಔಟ್ನಲ್ಲಿ ಡಿ.31 ರಂದು ಸಂಜೆ ಸುಮಾರು 4.30ಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ರಸ್ತೆಯಲ್ಲಿ ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿಕೊಂಡು ಹೋಗುವ ದೃಶ್ಯ ಘಟನಾ ಸ್ಥಳದ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಕಾರು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಏನಿದು ಘಟನೆ?: 3 ನಾಯಿಗಳ ಪೈಕಿ 1 ನಾಯಿ ರಸ್ತೆಯಲ್ಲಿ ಮಲ ಗಿತ್ತು. ಉಳಿದ ಎರಡು ನಾಯಿಗಳು ರಸ್ತೆ ಬದಿಯ ಮನೆ ಎದುರು ಮಲಗಿದ್ದವು. ಈ ವೇಳೆ ಆರೋಪಿ ಮಂಜುನಾಥ್ ರಸ್ತೆ ಬದಿ ಮಲ ಗಿದ್ದ ನಾಯಿ ಮೇಲೆ ಕಾರು ಚಲಾಯಿಸಿಕೊಂಡು ಮುಂದೆ ಹೋಗಿದ್ದಾನೆ. ದೇಹದ ಮೇಲೆಯೇ ಚಕ್ರ ಹರಿದ ಪರಿಣಾಮ ಆ ನಾಯಿ ನರಳಾಡಿ ಸ್ಥಳದಲ್ಲೇ ಪ್ರಾಣಬಿಟ್ಟಿದೆ.
ಉದ್ದೇಶ ಪೂರ್ವಕವಾಗಿಯೇ ನಾಯಿಯ ಮೇಲೆ ಕಾರು ಚಲಾಯಿಸಿ ಸಾಯಿಸಿರುವ ಸಾಧ್ಯತೆಯಿದೆ. ಕಾರು ಚಾಲಕನಿಗೆ ಮಾನವೀಯತೆಯೇ ಇಲ್ಲ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ. ಈ ಬೆನ್ನಲ್ಲೇ ಅನಿರುದ್ಧ ದೂರು ನೀಡಿದ್ದು, ಆರೋಪಿಗೆ ನೋಟಿಸ್ ಕೊಡಲಾಗಿದೆ ಎಂದು ಪೊಲೀಸರು ಹೇಳಿದರು.
ಹತ್ಯೆ ಮಾಡಿದ್ದು ಹೇಗೆ?
ರಸ್ತೆಯಲ್ಲಿ ಮಲಗಿದ್ದ 4 ತಿಂಗಳ ನಾಯಿ
ನಾಯಿ ಮೇಲೆಯೇ ಕಾರು ಹತ್ತಿಸಿದ ಚಾಲಕ
ಘಟನೆ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲು
ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್
ಉದ್ದೇಶಪೂರ್ವಕ ನಾಯಿ ಸಾಯಿಸಿರುವ ಸಾಧ್ಯತೆ
ಕಾರು ಚಾಲಕನ ವಿರುದ್ಧ ನೆಟ್ಟಿಗರಿಂದ ಆಕ್ರೋಶ