Advertisement

Bengaluru: ಆನ್‌ಲೈನ್‌ ಜೂಜಿನಿಂದ ಸಾಲ: ಮನೆ ಮಗನೇ ಕಳ್ಳ!

08:18 AM Sep 14, 2024 | Team Udayavani |

ಬೆಂಗಳೂರು: ಆನ್‌ಲೈನ್‌ ಜೂಜಾಟದಿಂದ ವಿಪರೀತ ಸಾಲ ಮಾಡಿಕೊಂಡು ತನ್ನ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಬೊಮ್ಮನಹಳ್ಳಿ ವಿರಾಟನಗರದ ಆದಿತ್ಯ ರೆಡ್ಡಿ (22) ಬಂಧಿತ. ಆರೋಪಿಯಿಂದ 7 ಲಕ್ಷ ರೂ. ಮೌಲ್ಯದ 107 ಗ್ರಾಂ ಚಿನ್ನಾಭರಣಗಳು ಹಾಗೂ 100 ಗ್ರಾಂ ತೂಕದ ಬೆಳ್ಳಿಯ ದೇವರ ಮುಖವಾಡ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಆರೋಪಿಯ ಪೋಷಕರ, ಹಿರಿಯ ಮಗನ ವಿವಾಹ ನಿಶ್ಚಯವಾಗಿದ್ದ ಹಿನ್ನೆಲೆಯಲ್ಲಿ ಆ.28ರಂದು ಸಂಬಂಧಿಕರು ಹಾಗೂ ಸ್ನೇಹಿತರಿಗೆ ಲಗ್ನ ಪತ್ರಿಕೆ ಹಂಚಲು ಹೊರಗೆ ಹೋಗಿದ್ದರು. ಈ ವೇಳೆ ಮನೆಯಲ್ಲೇ ಇದ್ದ ಆದಿತ್ಯ ರೆಡ್ಡಿ ಲಾಕರ್‌ ಮುರಿದು ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪಿಐ ಪ್ರೀತಮ್‌ ನೇತೃತ್ವದ ತಂಡ ಕ್ಷೀಪ್ರ ಕಾರ್ಯಾಚರಣೆ ನಡೆಸಿ ದೂರು ದಾಖಲಾದ 6 ತಾಸಿನೊಳಗೆ ಆರೋಪಿಯನ್ನು ಬಂಧಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಏನಿದು ಪ್ರಕರಣ?: ವೃತ್ತಿಯಲ್ಲಿ ಕ್ಯಾಬ್‌ ಚಾಲಕನಾಗಿರುವ ಆರೋಪಿ ಆದಿತ್ಯ ರೆಡ್ಡಿ, ತಂದೆ-ತಾಯಿ ಹಾಗೂ ಸಹೋದರನ ಜತೆಗೆ ಬೊಮ್ಮನಹಳ್ಳಿಯ ವಿರಾಟನಗರದಲ್ಲಿ ನೆಲೆಸಿದ್ದ. ಆನ್‌ಲೈನ್‌ ಜೂಜಾಟ ವ್ಯಸನಕ್ಕೆ ಬಿದ್ದು ವಿಪರೀತ ಸಾಲ ಮಾಡಿಕೊಂಡಿದ್ದ. ಈ ಮಧ್ಯೆ ಟೆಕಿಯಾಗಿರುವ ಸಹೋದರನ ಮದುವೆ ನಿಶ್ಚಯವಾಗಿದ್ದು, ಮದುವೆಗಾಗಿ ತಂದೆ-ತಾಯಿ ಚಿನ್ನಾಭರಣ ಖರೀದಿಸಿ ಮನೆಯ ಲಾಕರ್‌ನಲ್ಲಿ ಇರಿಸಿದ್ದರು. ಆ.28ರಂದು ಆರೋಪಿಯ ತಂದೆ-ತಾಯಿ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಲಗ್ನ ಪತ್ರಿಕೆ ಹಂಚಲು ಹೊರಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿದ್ದ ಆರೋಪಿ ಕಳ್ಳತನ ಮಾಡಿದ್ದ. ಸಂಜೆ ಆತನ ಪೋಷಕರು ಬಂದು ನೋಡಿದಾಗ ಲಾಕರ್‌ ಮುರಿದಿರುವುದು ಕಂಡು ಬಂದಿದೆ. ಪರಿಶೀಲಿಸಿದಾಗ, 107 ಗ್ರಾಂ ಚಿನ್ನಾಭರಣ, 100 ಗ್ರಾಂ ತೂಕದ ಬೆಳ್ಳಿಯ ದೇವರ ಮುಖವಾಡ ಹಾಗೂ 45 ಸಾವಿರ ರೂ. ನಗದು ಕಳುವಾಗಿರುವುದು ಕಂಡು ಬಂದಿದೆ. ಕೂಡಲೇ ಬೊಮ್ಮನಹಳ್ಳಿ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಈ ದೂರಿನ ಮೇರೆಗೆ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಘಟನಾ ಸ್ಥಳ ಪರಿಶೀಲನೆ ಮಾಡಿದಾಗ, ಮನೆಯ ಬಾಗಿಲು ಮುರಿದಿರಲಿಲ್ಲ. ಆದರೆ, ರೂಮ್‌ನಲ್ಲಿ ಬೀರುವಿನ ಲಾಕರ್‌ ಮಾತ್ರ ಮುರಿದಿರುವುದು ಕಂಡು ಬಂದಿದೆ. ಈ ಬಗ್ಗೆ ದೂರುದಾರರ ಕಿರಿಯ ಪುತ್ರನ ಬಗ್ಗೆ ಅನುಮಾನಗೊಂಡ ಪೊಲೀಸರು, ಆತನ ಮೊಬೈಲ್‌ ಲೊಕೇಶನ್‌ ಪರಿಶೀಲನೆ ಮಾಡಿದಾಗ, ಯಲಹಂಕ ರೈಲು ನಿಲ್ದಾಣ ತೋರಿಸಿದೆ. ಕೂಡಲೇ ರೈಲು ನಿಲ್ದಾಣಕ್ಕೆ ತೆರಳಿ ಮಾಲು ಸಹಿತ ಆದಿತ್ಯ ರೆಡ್ಡಿಯನ್ನು ಬಂಧಿಸಲಾಗಿದೆ.

Advertisement

ಬಳಿಕ ಆರೋಪಿ ಆದಿತ್ಯನನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ, ಆನ್‌ಲೈನ್‌ ಬೆಟ್ಟಿಂಗ್‌ನಿಂದ ವಿಪರೀತ ಸಾಲ ಮಾಡಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ. ಸಾಲ ತೀರಿಸಲು ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಹೈದರಾಬಾದ್‌ಗೆ ತೆರಳುತ್ತಿದ್ದಾಗ ಫೋನ್‌ ಲೋಕೇಶನ್‌ ಆಧರಿಸಿ ಪತ್ತೆ

ಆರೋಪಿಯ ವಿಚಾರಣೆಯಲ್ಲಿ ಆದಿತ್ಯ ಮನೆಯಲ್ಲಿ ಚಿನ್ನಾಭರಣ ಕದ್ದ ಬಳಿಕ ನೇರ ಯಲಹಂಕ ರೈಲು ನಿಲ್ದಾಣಕ್ಕೆ ಬಂದಿದ್ದಾನೆ. ಅಲ್ಲಿಂದ ಹೈದಾರಾಬಾದ್‌ಗೆ ಪರಾರಿಯಾಗಲು ಸಿದ್ಧತೆ ನಡೆಸಿದ್ದ. ಅಷ್ಟರಲ್ಲಿ ಆರೋಪಿಯ ಮೊಬೈಲ್‌ ಲೋಕೇಶನ್‌ ಸುಳಿವು ಆಧರಿಸಿದ ಪೊಲೀಸರು, ರೈಲು ನಿಲ್ದಾಣಕ್ಕೆ ಬಂದು ಆದಿತ್ಯನನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next