Advertisement

Bengaluru Crime: ಮನೆ ಮಾಲಕಿಯ ಕೊಂದು ಚಿನ್ನ ದೋಚಿದಳು!

03:19 PM May 16, 2024 | Team Udayavani |

ಬೆಂಗಳೂರು: ಸಾಲ ತೀರಿಸುವ ಉದ್ದೇಶದಿಂದ ಮನೆ ಮಾಲಕಿಯ ಕತ್ತು ಹಿಸುಕಿ ಹತ್ಯೆ ಮಾಡಿದ ಬಾಡಿಗೆಗಿದ್ದ ಮಹಿಳೆಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

Advertisement

ಕೋಲಾರ ಮೂಲದ ಕೆಂಗೇರಿ ನಿವಾಸಿ ಮೋನಿಕಾ (24) ಬಂಧಿತೆ. ಕೆಂಗೇರಿ ಕೋನಸಂದ್ರದ ನಿವಾಸಿ ದಿವ್ಯಾ (36) ಕೊಲೆಯಾದವರು.

ಮೋನಿಕಾ ಕಳೆದ 4 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇದಾಗಿ 4 ತಿಂಗಳಿಗೆ ಆಕೆಯ ಪತಿ ಮೃತಪಟ್ಟಿದ್ದರು. ಉದ್ಯೋಗ ಅರಸಿಕೊಂಡು ನಗರಕ್ಕೆ ಬಂದಿದ್ದ ಮೋನಿಕಾ ಕಂಪನಿಯೊಂದರಲ್ಲಿ ಕಳೆದೊಂದು ವರ್ಷದಿಂದ ಡೇಟಾ ಎಂಟ್ರಿ ಕಾರ್ಯ ನಿರ್ವಹಿಸುತ್ತಿದ್ದಳು. ಇಲ್ಲಿ ವ್ಯಕ್ತಿಯೊಬ್ಬನ ಜೊತೆಗೆ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದಳು.

ಇತ್ತ ದಿವ್ಯಾ-ಗುರುಮೂರ್ತಿ ದಂಪತಿ ಕೆಲವು ತಿಂಗಳ ಹಿಂದೆ ಕೋನಸಂದ್ರದಲ್ಲಿರುವ ಸ್ವಂತ ನಿವೇಶನದಲ್ಲಿ ಹೊಸ ಮನೆ ಕಟ್ಟಿದ್ದರು. ಮೊದಲ ಮಹಡಿಯಲ್ಲಿರುವ ಮನೆಯನ್ನು ಬಾಡಿಗೆಗೆ ನೀಡಲು ನಿರ್ಧರಿಸಿದ್ದರು. ಕಳೆದ 2 ತಿಂಗಳ ಹಿಂದೆ ಮೋನಿಕಾ ಬಾಡಿಗೆಗೆ ಮನೆ ಕೇಳಿಕೊಂಡು ದಿವ್ಯಾ-ಗುರುಮೂರ್ತಿ ನಿವಾಸಕ್ಕೆ ಬಂದಿದ್ದಳು. ಆ ವೇಳೆ ಜೊತೆಗಿದ್ದ ಪ್ರಿಯಕರನನ್ನು ತನ್ನ ಪತಿಯೆಂದು ಮನೆ ಮಾಲೀಕರಿಗೆ ಪರಿಚಯಿಸಿ ಬಾಡಿಗೆ ಮನೆ ಪಡೆದುಕೊಂಡಿದ್ದಳು. ಒಂಟಿಯಾಗಿಯೇ ಮನೆಯಲ್ಲಿರುತ್ತಿದ್ದ ಮೋನಿಕಾ ಜೊತೆಗೆ ಕಾಲ ಕಳೆಯಲು ಆಗಾಗ ಬಾಯ್‌ಫ್ರೆಂಡ್‌ ಅಲ್ಲಿಗೆ ಬಂದು ಹೋಗುತ್ತಿದ್ದ ಎಂಬುದು ಗೊತ್ತಾಗಿದೆ.

ಕೊಲೆ ಮಾಡಿ 36 ಗ್ರಾಂ ಚಿನ್ನ ದೋಚಿದಳು:

Advertisement

ಮೋನಿಕಾ ಶೋಕಿಗಾಗಿ ಲಕ್ಷಾಂತರ ರೂ. ಸಾಲ ಮಾಡಿ ಕೊಂಡಿದ್ದಳು. ಜೊತೆಗೆ ಪ್ರಿಯಕರನಿಗೆ ಟಾಟಾ ಏಸ್‌ ವಾಹನ ಖರೀದಿಸಿ ಕೊಟ್ಟಿದ್ದಳು. ಇತ್ತ ತನಗೆ ಬರುತ್ತಿರುವ ವೇತನದಲ್ಲಿ ಸಾಲ ತೀರಿಸಲಾಗದೇ ಒದ್ದಾಡುತ್ತಿದ್ದಳು. ಆಗ ಆಕೆಗೆ ಮನೆ ಮಾಲಕಿ ದಿವ್ಯಾ ಮೈಮೇಲಿದ್ದ ಚಿನ್ನಾಭರಣಗಳ ಮೇಲೆ ಕೆಂಗಣ್ಣು ಬಿದ್ದಿತ್ತು. ಹೇಗಾದರೂ ಮಾಡಿ ಚಿನ್ನಾಭರಣಗಳನ್ನು ದೋಚಬೇಕೆಂದು ಮೋನಿಕಾ ಸಂಚು ರೂಪಿಸುತ್ತಿದ್ದಳು.

ದಿವ್ಯಾ ಅವರ ಅತ್ತೆ, ಮಾವ, ಪತಿ ಬೆಳಗಾದರೆ ಕೆಲಸಕ್ಕೆ ಹೋದಾಗ ಮನೆಯಲ್ಲಿ ದಿವ್ಯಾ 2 ವರ್ಷದ ಮಗುವಿನೊಂದಿಗೆ ಇರುವುದನ್ನು ಗಮನಿಸುತ್ತಿದ್ದಳು. ತಾನು ರೂಪಿಸಿದ ಸಂಚಿನಂತೆ ಕಳೆದ ಮೇ 10ರಂದು ಮಧ್ಯಾಹ್ನ ಮೋನಿಕಾ ಮನೆಯ ಹಿಂಬದಿಯಿಂದ ಮಾಲಕಿ ದಿವ್ಯಾ ಮನೆಗೆ ನುಗ್ಗಿದ್ದಳು. ಬಳಿಕ ಕತ್ತು ಹಿಸುಕಿ ಕೊಲೆ ಮಾಡಿ 36 ಗ್ರಾಂ ಚಿನ್ನಾಭರಣ ಲಪಟಾಯಿಸಿ ನೇರವಾಗಿ ಮೊದಲನೇ ಮಹಡಿಯಲ್ಲಿರುವ ತನ್ನ ಮನೆಗೆ ತೆರಳಿದ್ದಳು. ಆ ವೇಳೆ ಎರಡೂವರೆ ವರ್ಷದ ಮಗು ನಿದ್ದೆಗೆ ಜಾರಿತ್ತು ಎಂದು ತಿಳಿದು ಬಂದಿದೆ.

ಇತ್ತ ಕಟಿಂಗ್‌ ಶಾಪ್‌ ನಡೆಸುತ್ತಿರುವ ಮೃತಳ ಪತಿ ಗುರುಮೂರ್ತಿ ಮಧ್ಯಾಹ್ನ ಪತ್ನಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಮನೆಗೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿತ್ತು.

ಕೆಂಗೇರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಮರಣೋತ್ತರ ಪರೀಕ್ಷೆ ವೇಳೆ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ತಾಯಿ ಕಳೆದುಕೊಂಡ ಎರಡೂವರೆ ವರ್ಷದ ಕಂದಮ್ಮ ತಾಯಿಯ ಅಪ್ಪುಗೆಗಾಗಿ ಹಂಬಲಿಸುತ್ತಿದೆ.

ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?:

ದಿವ್ಯಾ ಅವರಿಂದ ಕದ್ದ ಒಡವೆಗಳನ್ನು ಆಕೆಯ ಮನೆಗೆ ಹತ್ತಿರದ ಚಿನ್ನಾಭರಣ ಅಂಗಡಿಯೊಂದರಲ್ಲಿ ಮೋನಿಕಾ ಗಿರವಿ ಇಟ್ಟಿದ್ದಳು. ಇತ್ತ ಕೃತ್ಯ ನಡೆಯುವ ವೇಳೆ ಮೊದಲ ಮಹಡಿಯಲ್ಲಿದ್ದ ಮೋನಿಕಾಳಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಆಗ ಪೊಲೀಸರ ದಿಕ್ಕು ತಪ್ಪಿಸಲು ತನ್ನ ಮನೆಯಿಂದ 60 ಸಾವಿರ ರೂ. ಕಳುವಾಗಿದೆ ಎಂದಿದ್ದಳು ಎನ್ನಲಾಗಿದೆ.

ಆರಂಭದಲ್ಲಿ ಪೊಲೀಸರೂ ಸಹ ಈಕೆಯ ಮಾತನನ್ನು ನಂಬಿ ಯಾರೋ ಕಳ್ಳರು ಮನೆಗೆ ಬಂದು ಚಿನ್ನ ದೋಚಿರಬಹುದು ಎಂದುಕೊಂಡಿದ್ದರು. ಈ ನಿಟ್ಟಿನಲ್ಲಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ ಹೊರಗಿನಿಂದ ದಿವ್ಯಾ ಮನೆಗೆ ಯಾರೂ ಎಂಟ್ರಿ ಕೊಟ್ಟ ಕುರುಹು ಸಿಕ್ಕಿರಲಿಲ್ಲ. ಮೋನಿಕಾಳನ್ನು ಪ್ರಶ್ನಿಸಿದಾಗ ಆಕೆ ಗೊಂದಲದ ಹೇಳಿಕೆ ನೀಡಿದ್ದಳು. ಆಗ ಮೋನಿಕಾ ಮೇಲೆ ಅನುಮಾನ ಬಂದಿತ್ತು. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಮೋನಿಕಾ ಸತ್ಯ ಬಾಯ್ಬಿಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಆಕೆಯ ಪ್ರಿಯಕರ ನಾಪತ್ತೆಯಾಗಿದ್ದು, ಆತನಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಆರೋಪಿ ಮಹಿಳೆಗೆ ರೀಲ್ಸ್ ಹುಚ್ಚು

ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದ ಮೋನಿಕಾ ತನ್ನ ಮೊಬೈಲ್‌ ಕ್ಯಾಮೆರಾ ಮುಂದೆ ನಿಂತ್ಕೊಂಡು ಬಿಂದಾಸ್‌ ಆಗಿ ರೀಲ್ಸ್ ಮಾಡುತ್ತಿದ್ದಳು. ಆದರೆ, 70 ರಿಂದ 80 ಮಂದಿಯಷ್ಟೆ ಫಾಲೋವರ್ಸ್‌ ಇದ್ದರು. ರೀಲ್ಸ್‌ ಮಾಡುವ ಹುಚ್ಚು ಹೆಚ್ಚಾಗುವುದರ ಜೊತೆಗೆ ಐಷಾರಾಮಿ ಲೈಫ್ ಸ್ಟೈಲ್‌ ಲೀಡ್‌ ಮಾಡಬೇಕೆಂಬ ದುರಾಸೆಗೆ ಬಿದ್ದು ಅತಿಯಾದ ಸಾಲ ಮಾಡಿ ಶೋಕಿ ಜೀವನ ನಡೆಸುತ್ತಿದ್ದಳು.

ಮನೆ ಮಾಲಕಿ ದಿವ್ಯಾಳನ್ನ ಕೊಲೆ ಮಾಡಿ ಶವದ ಮೇಲಿದ್ದ ಒಡವೆ ದೋಚಿದ್ದಳು. ಮನೆಗೆ ಬಂದ ದಿವ್ಯಾ ಪತಿ ಗುರುಮೂರ್ತಿ ಅವರು ಮೋನಿಕಾಗೆ ಕರೆ ಮಾಡಿ ಕೇಳಿದಾಗ ತನಗೇನು ಗೊತ್ತೆ ಇಲ್ಲ ಎಂಬಂತೆ ನಾಟಕವಾಡಿದ್ದಾಳೆ. ಈ ವೇಳೆ ಸಾವನ್ನಪ್ಪಿದ್ದ ದಿವ್ಯಾ ಕುತ್ತಿಗೆಯ ಮೇಲೆ ಗಾಯದ ಗುರುತು ಇರುವುದನ್ನು ಗುರುಮೂರ್ತಿ ಗಮನಿಸಿದ್ದರು. ಮೋನಿಕಾ ಕಳೆದ ತಿಂಗಳ ಬಾಡಿಗೆ ಸಹ ಕೊಟ್ಟಿರಲಿಲ್ಲ. ಇನ್ನು 60 ಸಾವಿರ ರೂ. ನನ್ನ ಮನೆಯಿಂದಲೂ ಕಳವಾಗಿದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿರುವುದು ಅನುಮಾನ ಹುಟ್ಟಿಸಿತ್ತು.

-ಉದಯವಾಣಿ ಸಮಾಚಾರ

Advertisement

Udayavani is now on Telegram. Click here to join our channel and stay updated with the latest news.

Next