Advertisement

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

11:42 AM Apr 19, 2024 | Team Udayavani |

ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವೈದ್ಯ, ಸ್ಟಾಫ್ ನರ್ಸ್‌ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಲಹಂಕ ರೈಲು ನಿಲ್ದಾಣ ಸಮೀಪ ಡಾ.ಅನಂತ್‌ಪ್ರಸಾದ್‌ ಎಂಬ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಮೂಲದ ಅನಂತ ಪ್ರಸಾದ್‌, ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದು, ಪತ್ನಿ ಜತೆ ಹೆಬ್ಟಾಳ ಬಳಿಯ ಕೆಂಪಾಪುರದಲ್ಲಿ ವಾಸವಾಗಿದ್ದರು. ಏರ್‌ಪೋರ್ಟ್‌ ಸಮೀಪದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಬುಧವಾರ ಸಂಜೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುರುವಾರ ಬೆಳಗ್ಗೆ ದಾರಿಹೋಕರು ನೀಡಿದ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಆತ್ಮಹತ್ಯೆಗೂ ಮೊದಲು “ನನ್ನ ಸಾವಿಗೆ ನಾನೇ ಕಾರಣ’ ಎಂದು ವೈದ್ಯ ಅನಂತ ಪ್ರಸಾದ್‌ ಡೆತ್‌ ನೋಟ್‌ ಬರೆದಿಟ್ಟಿದ್ದಾರೆ. ಅವರ ಪ್ಯಾಂಟ್‌ ಜೇಬಿನಲ್ಲಿ ಆ ಡೆತ್‌ನೋಟ್‌ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸ ಲಾಗಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದರು. ಯಶವಂತಪುರ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಟಾಫ್ ನರ್ಸ್‌ ಆತ್ಮಹತ್ಯೆ: ಮತ್ತೂಂದು ಪ್ರಕರಣದಲ್ಲಿ ದೀಪಾಂಜಲಿನಗರದ ರೈಲ್ವೆ ಸೇತುವೆ ಬಳಿ ವಿಜಯಪುರ ಜಿಲ್ಲೆ ಮೂಲದ ಸಾಫ್ಟ್ ನರ್ಸ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಜಯಪುರ ಜಿಲ್ಲೆ ಕಾರಜೋಳ ಗ್ರಾಮದ ಚನ್ನಬಸು ಅಶೋಕ್‌(22) ಆತ್ಮಹತ್ಯೆ ಮಾಡಿಕೊಂಡವ.

ಬುಧವಾರ ಸಂಜೆ ರೈಲಿಗೆ ಸಿಲುಕಿ ಚನ್ನಬಸು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ಬೆಳಗ್ಗೆ ಸ್ಥಳೀಯರು ಗಮನಿಸಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Advertisement

ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಆತನ ಜೇಬಿನಲ್ಲಿದ್ದ ಆಧಾರ್‌, ಪಾನ್‌ಕಾರ್ಡ್‌ ನಿಂದ ಯುವಕನ ಗುರುತು ಪತ್ತೆ ಹಚ್ಚಲಾಗಿದೆ ಎಂದು ರೈಲ್ವೆ ಪೊಲೀಸರು ಹೇಳಿದರು.

ಅಶೋಕ್‌ 5 ತಿಂಗಳ ಹಿಂದೆ ನರ್ಸಿಂಗ್‌ ಕೋರ್ಸ್‌ ಮುಗಿಸಿದ್ದು, ಇತ್ತೀಚೆಗೆ ಕೆ.ಆರ್‌.ಪುರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸಾಫ್ಟ್ ನರ್ಸ್‌ ಆಗಿ ಕೆಲಸ ಸಿಕ್ಕಿತ್ತು. ಹೀಗಾಗಿ, 15 ದಿನಗಳ ಹಿಂದಷ್ಟೇ ನಗರಕ್ಕೆ ಬಂದು ಮಾಗಡಿ ರಸ್ತೆಯಲ್ಲಿರುವ ಚೋಳರಪಾಳ್ಯದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ.

ಎಂದಿನಂತೆಯೇ ಬುಧವಾರ ಕೆಲಸಕ್ಕೆ ತೆರಳುವಾಗ ಸಂಜೆ ಮನೆಗೆ ಬರುವುದಿಲ್ಲ. ಸ್ನೇಹಿತರ ಭೇಟಿಗೆ ಹೋಗುತ್ತೇನೆ ಎಂದು ಚಿಕ್ಕಮ್ಮನಿಗೆ ತಿಳಿಸಿದ್ದ. ತಡರಾತ್ರಿಯಾದರೂ ಮನೆಗೆ ಬಾರದರಿಂದ ಅನುಮಾನಗೊಂಡ ಆತನ ಚಿಕ್ಕಮ್ಮ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌ ಆಫ್ ಆಗಿತ್ತು.

ಇತ್ತ ಗುರುವಾರ ಬೆಳಗ್ಗೆ ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾದ ಬಳಿಕ ಆತನ ಚಿಕ್ಕಮ್ಮನಿಗೆ ಮಾಹಿತಿ ನೀಡಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದರು. ಮೆಜೆಸ್ಟಿಕ್‌ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next